ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಜ್‌ನ ಮೂರನೇ ಅಂತಸ್ತಿನಿಂದ ಪ್ರೇಯಸಿಯನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ಹಾಸನ ಮೂಲದ ಐಶ್ವರ್ಯ ಸಾವಿನ ಪ್ರಕರಣದಲ್ಲಿ ಪ್ರಿಯಕರ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾಗಬೇಕಿದ್ದ ಜೋಡಿಯ ನಡುವೆ ಮೂಡಿದ್ದ ಅನುಮಾನ, ಜಗಳ ಹಾಗೂ ಮದುವೆ ವಿಚಾರದ ಸಂಘರ್ಷವೇ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಸಂತೋಷ್‌ಗೆ ಇದ್ದ ಒಂದು ಅನುಮಾನವೇ ಐಶ್ವರ್ಯ ಸಾವಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ಸ್ನೇಹಿತೆಯ ಬಾಯ್‌ಫ್ರೆಂಡ್ ವಿಚಾರಕ್ಕೆ ಶುರುವಾಗಿತ್ತು ಜಗಳ!

ಐಶ್ವರ್ಯ ತನ್ನ ಸ್ನೇಹಿತೆಯ ಬಾಯ್‌ಫ್ರೆಂಡ್ ಜೊತೆ ಸಲುಗೆಯಿಂದ ಇದ್ದಳು ಎಂಬ ಆರೋಪ ಸಂತೋಷ್ ಕಿವಿಗೆ ಬಿದ್ದಿತ್ತು. ನಿನ್ನ ಹುಡುಗಿ ನನ್ನ ಹುಡುಗನ ಜೊತೆ ಲಾಡ್ಜ್‌ಗೆ ಹೋಗಿದ್ದಳು ಎಂದು ಸಂತೋಷ್‌ಗೆ ಮತ್ತೊಬ್ಬ ಯುವತಿ ತಿಳಿಸಿದ್ದಳು ಎನ್ನಲಾಗಿದೆ. ಈ ವಿಚಾರದಿಂದ ಐಶ್ವರ್ಯ ಮೇಲೆ ಸಂತೋಷ್‌ಗೆ ಅನುಮಾನ ಮತ್ತು ಕೋಪ ಹೆಚ್ಚಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.

ಇದರಿಂದ ಸಂತೋಷ್ ಕುಟುಂಬ ಕೂಡ ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಆದರೆ ಐಶ್ವರ್ಯ ಮಾತ್ರ ಸಂತೋಷ್‌ನನ್ನೇ ಮದುವೆಯಾಗಬೇಕೆಂದು ಪಟ್ಟು ಹಿಡಿದಿದ್ದಳು. ಈ ಹಿಂದೆ ಇಬ್ಬರೂ ಹಲವು ಬಾರಿ ಲಾಡ್ಜ್‌ಗೆ ಹೋಗಿ ಬರುತ್ತಿದ್ದರು. ಇದೇ ವೇಳೆ ಐಶ್ವರ್ಯಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಸಂತೋಷ್ ಆಕೆಯನ್ನು ಬೆದರಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ ಮತ್ತೆ ಮದುವೆಯಾಗುತ್ತೇನೆ, ಈಗ ಸೇರುವ ಬಾ ಎಂದು ನಂಬಿಸಿ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್: ಕೊನೆಯ ಬಾರಿ ಲಾಡ್ಜ್‌ಗೆ ಬಂದಾಗ ನಡೆದದ್ದೇ ಬೇರೆ

ಮದುವೆ ವಿಚಾರಕ್ಕೆ ಕಿತ್ತಾಟ, ಕಿಟಕಿಯಿಂದ ತಳ್ಳಿದ ಸಂತೋಷ್!

ನವೆಂಬರ್ 19ರಂದು ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ಗೆ ಇಬ್ಬರೂ ಬಂದಿದ್ದರು. ರೂಮ್‌ನಲ್ಲಿ ಮದುವೆ ವಿಚಾರವಾಗಿ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಸಂತೋಷ್, ಐಶ್ವರ್ಯಳನ್ನು ಲಾಡ್ಜ್‌ನ ಮೂರನೇ ಅಂತಸ್ತಿನ ಕಿಟಕಿಯಿಂದ ಕೆಳಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ. ಮೂರು ಅಂತಸ್ತಿನಿಂದ ಕೆಳಕ್ಕೆ ಬಿದ್ದ ಐಶ್ವರ್ಯ ತಲೆಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಳು. ಘಟನೆ ಬಳಿಕ ಗಾಬರಿಗೊಂಡ ಸಂತೋಷ್ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ತಲೆಗೆ ತೀವ್ರ ಗಾಯವಾಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲಿ ಐಶ್ವರ್ಯ ಮೃತಪಟ್ಟಿದ್ದಳು.

ಆರಂಭದಲ್ಲಿ ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿದ್ದ ಈ ಘಟನೆ ಪೊಲೀಸ್ ತನಿಖೆಯಲ್ಲಿ ಕೊಲೆ ಎಂಬ ಶಂಕೆಗೆ ತಿರುಗಿತ್ತು. ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದ್ದವು. ಇದೀಗ ಆರೋಪಿ ಸಂತೋಷ್‌ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ