ಬೆಂಗಳೂರು, ನವೆಂಬರ್ 25: ರಾಜಧಾನಿ ಬೆಂಗಳೂರಿನಲ್ಲಿ ಪ್ರಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನಗರದಲ್ಲಿ ಆತಂಕ ಮನೆಮಾಡಿದೆ. ದುಷ್ಕರ್ಮಿಗಳು ಇಮೇಲ್ ಐಡಿ ಮೂಲಕ ಈ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನವೆಂಬರ್ 29ರಂದು ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 20-25 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ.

ದುಷ್ಕರ್ಮಿಗಳು ಕಳುಹಿಸಿರುವ ಈ ಬೆದರಿಕೆ ಇಮೇಲ್‌ನಲ್ಲಿ, ಪಂಜಾಬಿ ಸಂಗೀತ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬರಬೇಡಿ ಮತ್ತು ಮಕ್ಕಳನ್ನು ಕರೆತರಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ‘ಖಲಿಸ್ತಾನ್ ಜಿಂದಾಬಾದ್’ ಎಂದು ಉಲ್ಲೇಖಿಸಲಾಗಿದೆ. ಈ ಇಮೇಲ್ ಸಂದೇಶ ಹುಬ್ಬಳ್ಳಿ-ಧಾರವಾಡ ಕಮಿಷನರ್ ಕಚೇರಿಯ ಅಧಿಕೃತ ಇಮೇಲ್ ಐಡಿಗೆ ತಲುಪಿದೆ. ಘಟನೆ ಸಂಬಂಧ ಬೆಂಗಳೂರು ಉತ್ತರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ