ಹಿರಿಯ ನಟ ರಮೇಶ್ ಅರವಿಂದ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಅವರ ವೃತ್ತಿಜೀವನದ 106ನೇ ಸಿನಿಮಾ ‘ದೈಜಿ’ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು, 2027ರ ಜನವರಿ 14ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರವನ್ನು ರವಿ ಕಶ್ಯಪ್ ಮತ್ತು ಸುಧಾ ಕಶ್ಯಪ್ ನಿರ್ಮಿಸಿದ್ದು, ಮನೋವೈಜ್ಞಾನಿಕ ಮತ್ತು ಅತೀಂದ್ರಿಯ ಹಾರರ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ.

ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ:

‘ಶಿವಾಜಿ ಸುರತ್ಕಲ್’ ಸರಣಿಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಚಿತ್ರದ ಮೂಲಕ ಮತ್ತೊಮ್ಮೆ ಕೈಜೋಡಿಸಿದ್ದಾರೆ. ನಿರ್ಮಾಪಕ ರವಿ ಕಶ್ಯಪ್ ಹಂಚಿಕೊಂಡ ನೈಜ ಘಟನೆಗಳನ್ನು ಆಧರಿಸಿ ಕಥೆ ಸಿದ್ಧಪಡಿಸಲಾಗಿದ್ದು, ಅಭಿಜಿತ್ ವೈ.ಆರ್. ಮತ್ತು ಆಕಾಶ್ ಶ್ರೀವತ್ಸ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆಗೆ ರಾಧಿಕಾ ನಾರಾಯಣ್, ದಿಗಂತ್ ಮಂಚಾಲೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅವಿನಾಶ್, ಬಿ.ಎಂ. ಗಿರಿರಾಜ್, ಅಲೆಕ್ಸಾಂಡರ್ ಟೈಲರ್ ಹಾಗೂ ಸ್ಯಾಂಡಿ ಹಿಗಿನ್ಸ್ ಪ್ರಮುಖ ತಾರಾಗಣದಲ್ಲಿದ್ದಾರೆ.

ಸೂರ್ಯಕಾಂತಿಯ ಸುತ್ತ ಹೆಣೆದ ನಿಗೂಢ ಕಥೆ

ಸಾಮಾನ್ಯವಾಗಿ ಸೂರ್ಯಕಾಂತಿ ಹೂವು ಬೆಳಕು ಮತ್ತು ಹೊಸತನದ ಸಂಕೇತವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಮಗುವಿನ ಜನನದ ಸುತ್ತ ಸುತ್ತುವ ರಹಸ್ಯಗಳನ್ನು ತೆರೆದಿಡುವಲ್ಲಿ ಸೂರ್ಯಕಾಂತಿ ವಿಶೇಷ ಮತ್ತು ನಿಗೂಢ ಪಾತ್ರವನ್ನು ವಹಿಸಲಿದೆ. ಚಿತ್ರದ ಪ್ರಮುಖ ಪಾತ್ರಗಳಿಗೆ ಸೂರ್ಯ, ಭೂಮಿ ಮತ್ತು ಗಗನ ಎಂದು ಹೆಸರಿಡಲಾಗಿದ್ದು, ಪ್ರಕೃತಿಯ ಮೂರು ಮೂಲ ಅಂಶಗಳನ್ನು ಇವು ಪ್ರತಿನಿಧಿಸುತ್ತವೆ.

View this post on Instagram

A post shared by Vibha Kashyap Productions (@vibhakashyapproductions)

ಮೂವರು ಸಂಗೀತ ನಿರ್ದೇಶಕರ ಮೋಡಿ:

ಸಂಕ್ರಾಂತಿಯು ಪ್ರಕೃತಿ ಮತ್ತು ಹೊಸ ಜೀವನದ ಸಂಭ್ರಮವನ್ನು ಸಾರಿದರೆ, ‘ದೈಜಿ’ ಚಿತ್ರವು ಜೀವನದ ಹಿಂದೆ ಅಡಗಿರುವ ಕತ್ತಲೆಯ ರಹಸ್ಯಗಳನ್ನು ಅನಾವರಣಗೊಳಿಸಲಿದೆ. ಚಿತ್ರಕ್ಕೆ ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಎಂಬ ಮೂವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದು, ವಿಭಿನ್ನ ಶೈಲಿಯ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಶಕ್ತಿಯಾಗಲಿದೆ.

ಇದನ್ನೂ ಓದಿ: ರಮೇಶ್ ಅರವಿಂದ್ ಜನ್ಮದಿನದಂದು ಘೋಷಣೆ ಆಯ್ತು ಹೊಸ ಸಿನಿಮಾ; ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ

ತಾಂತ್ರಿಕ ಬಳಗದ ವಿಶೇಷತೆ:

ಶ್ರೀಶ ಕುದುವಳಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಸುನಯನ ಕಾಸ್ಟಿಂಗ್ ನಿರ್ದೇಶಕರಾಗಿ ಹಾಗೂ ಲಕ್ಷ್ಮೀ ಕೃಷ್ಣ ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.