ಬೆಂಗಳೂರು: ಜಪಾನ್‌ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಮಾತನಾಡಿ ಮನವೊಲಿಕೆ ಮಾಡಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ವಿರೋಧಿಸಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ರಾಜೀನಾಮೆ ನೀಡಲು ಮುಂದಾಗಿದ್ದರು. 

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಬಿ.ಕೆ ಹರಿಪ್ರಸಾದ್‌, ‘ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ. ಸದ್ಯಕ್ಕೆ ರಾಜೀನಾಮೆ ನಿರ್ಧಾರವನ್ನು ಕೈಬಿಡಲಾಗಿದ್ದು, ಮುಖ್ಯಮಂತ್ರಿ ಬಂದ ನಂತರ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

‘ಈ ವಿಚಾರವಾಗಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸ್ಥಳೀಯ ಶಾಸಕರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಮುಖ್ಯಮಂತ್ರಿ ಕೂಡ ಶಾಸಕರೊಂದಿಗೆ ಮಾತನಾಡಿದ್ದಾರೆ. ದುಡುಕಿ ರಾಜೀನಾಮೆ ಕೊಡುವ ಬದಲು ನಾವೆಲ್ಲರೂ ಸೇರಿ ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ. ಹೀಗಾಗಿ, ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದಿದ್ದಾರೆ’ ಎಂದರು.

ಸ್ಥಳೀಯ ಶಾಸಕರ ಅಸಮಾಧಾನವನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, ‘ಇದು ನಮ್ಮ ಶಾಸಕರ ಆರೋಪ ಎಂಬುದಕ್ಕಿಂತ ಹೆಚ್ಚಾಗಿ, ಅಲ್ಲಿನ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಚಿಕ್ಕಮಗಳೂರಿನಲ್ಲಿ ಈಗಾಗಲೇ ಸುಮಾರು 20ರಿಂದ 22 ಜನ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಜನರ ನೋವು ಮತ್ತು ಅನಿಸಿಕೆಗಳನ್ನು ಶಾಸಕರು ವ್ಯಕ್ತಪಡಿಸಿದ್ದಾರೆ. ಅವರು ಹೇಳುತ್ತಿರುವುದು ನಿಜವೇ ಆಗಿದೆ’ ಎಂದರು.
 
‘ಅದೇ ಸಮಯದಲ್ಲಿ, ನಾವು ಪ್ರಾಣಿಗಳನ್ನೂ ಮನುಷ್ಯರಂತೆಯೇ ನೋಡಬೇಕಾಗುತ್ತದೆ. ಯಾವುದೋ ಕಾರಣದಿಂದ ಇಂತಹ ಘಟನೆಗಳು ಸಂಭವಿಸಿದ್ದು, ಅದನ್ನು ಸರಿಪಡಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದ್ದಾರೆ. ರಾಜೀನಾಮೆ ನೀಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುವುದಿಲ್ಲ. ಮುಖ್ಯಮಂತ್ರಿ ಬಂದ ಬಳಿಕ ಸಭೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ’ ಎಂದು ಅವರು ಭರವಸೆ ನೀಡಿದರು.