ಹಾಸನ: ಕಿರಿದಾದ, ಹಂಚಿಹೋದ ಅರಣ್ಯದಲ್ಲಿ ಇರುವ ಮನಸ್ಸಿಲ್ಲ. ಇದೀಗ ಹಿಮ್ಮೆಟ್ಟಿಸುತ್ತಿರುವ ಭದ್ರಾ ಅಭಯಾರಣ್ಯಕ್ಕೂ ಹೋಗುವ ಮನಸ್ಸಿಲ್ಲ. ಆದರೂ, ಕಾಡಾನೆಗಳಿಗೆ ಈಗಿರುವ ನೆಲೆಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಇಲ್ಲಿರಲಾರೆ, ಅಲ್ಲಿಗೂ ಹೋಗಲಾರೆ’ ಎನ್ನುವ ಆನೆಗಳ ಆರ್ತನಾದ ಮಾತ್ರ ಯಾರಿಗೂ ಕೇಳಿಸದಂತಾಗಿದೆ.
‘ಬೇಲೂರು ತಾಲ್ಲೂಕಿನಲ್ಲಿ ಸುಮಾರು 55 ಕಾಡಾನೆಗಳಿದ್ದು, ಅರಣ್ಯ ಪ್ರದೇಶ 13,917 ಎಕರೆಗಳಷ್ಟಿದೆ. ಅದೂ ಒಂದೇ ಕಡೆ ಕೇಂದ್ರೀಕೃತವಾಗಿರದೇ ಕಾಫಿ ತೋಟಗಳು ಮತ್ತು ಗ್ರಾಮಗಳ ನಡುವೆ ಹರಡಿಕೊಂಡಿದೆ. 2019ರಲ್ಲಿಇಲ್ಲಿ ಏಳು ಆನೆಗಳಿದ್ದವು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ’ ಎನ್ನುತ್ತಾರೆ ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅದ್ಧೂರಿ ಕುಮಾರ್.
ಸುತ್ತಾಡುವ ಮನೋಭಾವ ಹೊಂದಿರುವ ಆನೆಗಳು, ಮೊದಲು ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದವು. ಹೇಮಾವತಿ ಜಲಾಶಯ ನಿರ್ಮಾಣದಿಂದ ಆನೆಗಳ ವಾಸಸ್ಥಾನವನ್ನು ಹಿನ್ನೀರು ಅಕ್ರಮಿಸಿಕೊಂಡಿತು. ಅದಾದ ನಂತರ ಸಕಲೇಶಪುರ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ–75 ಅನ್ನು ಚತುಷ್ಪಥವಾಗಿ ನಿರ್ಮಿಸಿದ್ದು, ಹೆಣ್ಣಾನೆಗಳು ಹಾಗೂ ಮರಿಯಾನೆಗಳು ಹೆದ್ದಾರಿ ದಾಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇಲೂರಿನತ್ತ ತೆರಳಿದವು. ನಂತರ ಆಲೂರು ಹಾಗೂ ಬೇಲೂರು ತಾಲ್ಲೂಕಿನ ಮಧ್ಯೆ ಎತ್ತಿನಹೊಳೆಯ ಆಳವಾದ ಕಾಲುವೆ ನಿರ್ಮಾಣ ಮಾಡಿದ್ದು, ಇದೀಗ ಆನೆಗಳು ಮರಳಿ ಸಕಲೇಶಪುರ, ಆಲೂರು ಭಾಗಕ್ಕೆ ಬರಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇವೆಲ್ಲವೂ ಆನೆಗಳ ಓಡಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ 2025ರ ವರದಿಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ವಿಶೇಷವಾಗಿ ಸುಬ್ರಹ್ಮಣ್ಯ ರಸ್ತೆ–ಸಕಲೇಶಪುರ–ಬಾಳ್ಳುಪೇಟೆ ನಡುವಿನ ರೈಲು ಮಾರ್ಗವನ್ನು ವನ್ಯಜೀವಿಗಳ ಸಂಚಾರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
‘ಒಂದು ಆನೆ ಒಂದು ಸಾವಿರ ಚದರ ಕಿ.ಮೀ. ಓಡಾಡುತ್ತದೆ. ಆನೆಗಳ ಬದುಕಿನಲ್ಲಿ ಆನೆ ಕಾರಿಡಾರ್ ಅಥವಾ ಸಂಚಾರ ಮಾರ್ಗಗಳ ಪಾತ್ರ ಮಹತ್ವದ್ದು. ಈ ಮಾರ್ಗಗಳು ಅಡ್ಡಿಯಾದರೆ ಆನೆಗಳು ಸಣ್ಣ ಪ್ರದೇಶಗಳಲ್ಲಿ ಸಿಲುಕಿಕೊಳ್ಳುವ ಅಥವಾ ಜನವಸತಿ ಪ್ರದೇಶಗಳ ಮೂಲಕ ಸಾಗಬೇಕಾಗುತ್ತದೆ. ಈ ಕಾಡಾನೆಗಳಿಗೆ ಬೇಲೂರು ಭಾಗದಲ್ಲಿ ಇರಲು ಇಷ್ಟವಿಲ್ಲ. ಆದರೆ ಪಶ್ಚಿಮಘಟ್ಟದ ಅರಣ್ಯಕ್ಕೆ ಹೋಗಲು ಸಾಧ್ಯವಾಗದೇ ಇಲ್ಲಿವೆ. ಆನೆಗಳನ್ನು ಓಡಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಆನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ವಿಕ್ರಂ ಹುರುಡಿ.
‘ಹಾಸನ ಭಾಗದಲ್ಲಿ ಸುಮಾರು 86 ಆನೆಗಳಿದ್ದು, ಅವುಗಳಲ್ಲಿ 56 ಆನೆಗಳು ಬೇಲೂರು ಪ್ರದೇಶದಲ್ಲಿದ್ದವು. ಈ ಆನೆಗಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಭದ್ರಾ ವನ್ಯಜೀವಿ ಅಭಯಾರಣ್ಯದತ್ತ ಕರೆದೊಯ್ಯಲಾಗುತ್ತಿದೆ. ಆದರೆ, ಈ ಪೈಕಿ 13 ಕ್ಕೂ ಹೆಚ್ಚು ಆನೆಗಳ ಗುಂಪು ಮತ್ತೆ ಬೇಲೂರಿನತ್ತ ವಾಪಸ್ ಮುಖ ಮಾಡಿದೆ. ಹೀಗಾಗಿ ಸ್ಥಳಾಂತರ ಮಾಡಿದರೂ, ಆನೆಗಳು ಮತ್ತೆ ಅದೇ ಸ್ಥಳಕ್ಕೆ ಬರುವ ಸಾಧ್ಯತೆ ಹೆಚ್ಚು’ ಎನ್ನುವುದು ಅರಣ್ಯಾಧಿಕಾರಿಗಳ ಮಾತು.

ಆನೆಗಳ ದಾರಿ ಉಳಿಸಿದರೆ ಸಂಘರ್ಷ ಕಡಿಮೆ
‘ಆನೆಗಳ ಸ್ಥಳಾಂತರ ತಾತ್ಕಾಲಿಕ ಪರಿಹಾರ ಆಗಬಹುದು. ಆದರೆ ಅವುಗಳ ಮೂಲ ಆವಾಸಸ್ಥಾನ ಮತ್ತು ಸಂಚಾರ ಮಾರ್ಗಗಳನ್ನು ಪುನರ್ ಸ್ಥಾಪಿಸದೆ ಸಂಘರ್ಷವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಈ ಹಿಂದೆ ನಡೆದ ಸ್ಥಳಾಂತರ ಕಾರ್ಯಾಚರಣೆಗಳ ಬಳಿಕವೂ ಕೆಲವು ಆನೆಗಳು ತಮ್ಮ ಹಳೆಯ ನೆಲೆಗಳಿಗೆ ಮರಳಿರುವ ಉದಾಹರಣೆಗಳಿವೆ’ ಎಂದು ಆನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ವಿಕ್ರಂ ಹುರುಡಿ ಹೇಳುತ್ತಾರೆ.
’ಬೇಲೂರು ಮತ್ತು ಸಕಲೇಶಪುರ ಭಾಗಗಳಲ್ಲಿನ ಸಾಂಪ್ರದಾಯಿಕ ಆನೆ ಕಾರಿಡಾರ್ಗಳನ್ನು ವೈಜ್ಞಾನಿಕವಾಗಿ ಗುರುತಿಸಬೇಕು. ಅರಣ್ಯ ಪ್ರದೇಶಗಳ ನಡುವಿನ ಸಂಪರ್ಕವನ್ನು ಪುನರ್ ಸ್ಥಾಪಿಸಬೇಕು. ಅಗತ್ಯವಿರುವ ಕಡೆ ವನ್ಯಜೀವಿ ಸಂಚಾರಕ್ಕೆ ಅನುಕೂಲವಾಗುವ ಕೆಳಸೇತುವೆ ಮೇಲ್ಸೇತುವೆ ಹಾಗೂ ಸೂಕ್ತ ವಿನ್ಯಾಸದ ರೈಲು ಕಂಬಿ ಬ್ಯಾರಿಕೇಡ್ ನಿರ್ಮಿಸಬೇಕು. ಸೌರ ಬೇಲಿಗಳ ಅಳವಡಿಕೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಬೇಕು’ ಎನ್ನುತ್ತಾರೆ ಅವರು.
‘ಆನೆಗಳ ಚಲನವಲನವನ್ನು ರೇಡಿಯೋ ಕಾಲರ್ ಕ್ಯಾಮೆರಾ ಟ್ರ್ಯಾಪ್ ಮತ್ತು ಡ್ರೋನ್ಗಳ ಮೂಲಕ ನಿರಂತರವಾಗಿ ಗಮನಿಸುವುದರ ಜೊತೆಗೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನೂ ಬಲಪಡಿಸಬೇಕು’ ಎನ್ನುವುದು ಅವರ ಸಲಹೆ.
-ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಆನೆಗಳು ಅರಣ್ಯ ಪ್ರದೇಶದಲ್ಲಿ ಇರಬೇಕು ಎಂಬುದು ಕಾನೂನಿನ ಆಶಯ. ಅವುಗಳಿಗೆ ಸೂಕ್ತ ವಾಸಸ್ಥಾನ ಕಲ್ಪಿಸುವುದು ನಮ್ಮ ಜವಾಬ್ದಾರಿ. ಈ ವಿಚಾರದಲ್ಲಿ ಶಾಸಕರು ಸಾರ್ವಜನಿಕರು ಪರಸ್ಪರ ಚರ್ಚಿಸಿ ಒಮ್ಮತದ ಪರಿಹಾರ ಕಂಡುಕೊಳ್ಳಬೇಕು. -ಶ್ರೇಯಸ್ ಪಟೇಲ್, ಸಂಸದಬೇಲೂರು ಸಕಲೇಶಪುರ ಆಲೂರು ಭಾಗದ ಜನರು ಕಾಡಾನೆಗಳಿಂದ ಬೇಸತ್ತು ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶಾಸಕರು ನಮ್ಮ ಕ್ಯಾಂಪ್ಗೆ ಭೇಟಿ ನೀಡಿ ಇಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಪಡೆಯಲಿ. ವೈಯುಕ್ತಿಕವಾಗಿ ಕರೆ ಮಾಡಿ ಕ್ಯಾಂಪ್ಗೆ ಆಹ್ವಾನಿಸುತ್ತೇನೆ.
