ಮೂಡಿಗೆರೆ (ಚಿಕ್ಕಮಗಳೂರು): ಹಾಸನ ಜಿಲ್ಲೆಯ ಗಡಿ ದಾಟಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ 10 ಕಿಲೋ ಮೀಟರ್‌ ಸಾಗಿರುವ 39 ಕಾಡಾನೆಗಳು, ಹೆಸ್ಗಲ್‌ ಗ್ರಾಮ ಪಂಚಾಯಿತಿಯ ಗಡಿ ಭಾಗಕ್ಕೆ ತಲುಪಿವೆ.

ಮೂಡಿಗೆರೆ ಪಟ್ಟಣಕ್ಕೆ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿರುವ ಕೆಲ್ಲೂರು ಮತ್ತು ಘಟ್ಟದಹಳ್ಳಿ ಪ್ರದೇಶಗಳಲ್ಲಿ ಮಂಗಳವಾರ ಸಂಚರಿಸಿದವು. ಮಂಗಳವಾರ ಬೆಳಗಿನ ಜಾವದವರೆಗೆ ಪಟಾಕಿ ಸಿಡಿಸುವ ಶಬ್ಧ ಪಟ್ಟಣದ ತನಕ ಕೇಳಿಸಿತು. ಸುತ್ತಮುತ್ತಲ ಜನವಸತಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾಫಿ ತೋಟಗಳಲ್ಲಿ ಕೆಲಸ ನಿಲ್ಲಿಸಲಾಗಿತ್ತು.

ಆನೆಗಳ ಗುಂಪಿನಲ್ಲಿ ಏಳೆಂಟು ಮರಿಯಾನೆಗಳಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಅವುಗಳ ಚಲನವಲನವನ್ನು ಅರಣ್ಯ ಸಿಬ್ಬಂದಿ ಗಮನಿಸುತ್ತಿದ್ದಾರೆ. ಈಗ ಆನೆಗಳಿರುವ ಪ್ರದೇಶದಿಂದ ತತ್ಕೊಳ ಮೀಸಲು ಅರಣ್ಯ 8 ಕಿಲೋ ಮೀಟರ್ ದೂರವಿದೆ. ಬುಧವಾರ ಬೆಳಿಗ್ಗೆ ಹೊತ್ತಿಗೆ ಆನೆಗಳು ಚಿಕ್ಕಮಗಳೂರು–ಮೂಡಿಗೆರೆ ರಸ್ತೆ ದಾಟುವ ಸಾಧ್ಯತೆ ಇದೆ.

ಈ ಕಾರ್ಯಾಚರಣೆಯಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದು, ಆನೆಗಳನ್ನು ಬೇಲೂರು ತಾಲ್ಲೂಕಿಗೆ ವಾಪಸ್ ಓಡಿಸಬಹುದು ಎಂಬ ಅನುಮಾನ ಆ ಭಾಗದ ಜನರಿಗಿದೆ. ಗಡಿಯಲ್ಲಿ ಎರಡು ತಾಲ್ಲೂಕಿನ ಗ್ರಾಮಸ್ಥರ ನಡುವೆ ಹಲವು ಬಾರಿ ವಾಗ್ವಾದ ನಡೆದಿದ್ದು, ಪೊಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದಾರೆ. ಮೂಡಿಗೆರೆ ಪಟ್ಟಣ, ಅರಣ್ಯ ಇಲಾಖೆ ಕಚೇರಿಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಕಾಡಾನೆಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ ಓಡಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಸಭೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಮೂಡಿಗೆರೆ ಬಂದ್ ನಡೆಸಲು ನಿರ್ಧರಿಸಿದರು.