ಬೆಂಗಳೂರು: ಕೊರೆಯುವ ಚಳಿ ಮತ್ತು ಮಂಗಳವಾರ ಸುರಿದ ಮಳೆಯಿಂದ ಹೈರಾಣಾದ ಆಶಾ ಕಾರ್ಯಕರ್ತೆಯರು ಮತ್ತು ಅವರ ಕಂದಮ್ಮಗಳು ಧರಣಿಯ ಜಾಗ ಬಿಟ್ಟು ಕದಲಿಲ್ಲ. ಈ ಮೂಲಕ ಇವರ ಅಹೋರಾತ್ರಿ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಪಾನ್‌ನಿಂದ ಮಾಡಿದ ವಿಡಿಯೊ ಕರೆಗೂ ಇವರು ಮಣಿಯಲಿಲ್ಲ.

ಮಧ್ಯಾಹ್ನ ಹಾಗೂ ಸಂಜೆ ಸುರಿದ ಜೋರು ಮಳೆಯಿಂದ ರಕ್ಷಣೆ ಪಡೆಯಲು ಆಶಾ ಕಾರ್ಯಕರ್ತೆಯರು ಕೊಡೆ ಹಾಗೂ ಟಾರ್ಪಲ್‌ಗಳ ಮೊರೆ ಹೊಕ್ಕರು. ಹಲವರು ತಲೆ ಮೇಲೆ ಟಾರ್ಪಲ್‌ ಹೊದ್ದುಕೊಂಡು ನಿಂತರು. ಮಳೆಯಿಂದ ಕುಳಿತುಕೊಳ್ಳಲು ಆಗದೆ ಒಂದು ಗಂಟೆಗೂ ಹೆಚ್ಚು ನಿಂತು, ‘ಬಿಸಿಲೇ ಇರಲಿ, ಮಳೆಯೇ ಬರಲಿ, ಹೋರಾಟ ನಿಲ್ಲೋದಿಲ್ಲ’ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು. ಟಾರ್ಪಲ್‌ನಿಂದ ನೀರು ಸೋರಿ, ಹಲವರು ತೊಯ್ದರು.

ಮನೆ, ಶಾಲೆಯಲ್ಲಿ ಇರಬೇಕಾದ ಕಂದಮ್ಮಗಳು ಅಮ್ಮಂದಿರ ಜತೆ ಸಪ್ಪೆ ಮೋರೆ ಹಾಕಿ ಸ್ವಾತಂತ್ರ್ಯ ಉದ್ಯಾನದಲ್ಲಿ ಚಳಿ, ಗಾಳಿ, ಬಿಸಿಲಿನಲ್ಲಿ ಬಳಲುತ್ತಿವೆ. ಮಹಿಳೆಯರು ಕೊರೆಯುವ ಚಳಿಯಲ್ಲಿಯೇ ಸಂಕಷ್ಟ ಅನುಭವಿಸು ತ್ತಿದ್ದು, ಜ್ವರ, ಹೊಟ್ಟೆ ನೋವು, ರಕ್ತದೊತ್ತಡ, ಮಧುಮೇಹ
ಹಾಗೂ ಮೈ, ಕೈ ನೋವಿನಂತಹ ಸಮಸ್ಯೆಗಳಿಂದ  ಬಳಲುತ್ತಿದ್ದಾರೆ.

‘ಬೇಡಿಕೆ ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಸ್ವಾತಂತ್ರ್ಯ ಉದ್ಯಾನ ಬಿಟ್ಟು ಹೋಗುವುದಿಲ್ಲ’ ಎಂದು ಪ್ರತಿಭಟನಕಾರರು ಘೋಷಿಸಿದರು.

ಸಂಜೆ ಧರಣಿ ಸ್ಥಳಕ್ಕೆ ನಟಿ ರಮ್ಯಾ ಭೇಟಿ ನೀಡುತ್ತಿದ್ದಂತೆ ಕಾರ್ಯಕರ್ತೆ ಯರು ಜೈಕಾರ ಹಾಕಿದರು. ಆಶಾ ಕಾರ್ಯಕರ್ತೆಯರ ಕೈ ಕುಲುಕಿ, ಯೋಗಕ್ಷೇಮ ವಿಚಾರಿಸಿ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು. ಎಷ್ಟು ವರ್ಷಗಳಿಂದ ಸಂಬಳ ಹೆಚ್ಚಾಗಿಲ್ಲ? ಸಂಬಳ ಸರಿಯಾಗಿ ಬರುತ್ತಾ ಇಲ್ವಾ ಎಂದು ಕೇಳಿದರು.

ವಿಶ್ವಾಸವಿಡಿ ಪ್ರತಿಭಟನೆ ಕೈಬಿಡಿ: ಸಿಎಂ

‘ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇವೆ ಪ್ರತಿಭಟನೆ ಕೈಬಿಡಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.

ಜಪಾನ್ ಪ್ರವಾಸದಲ್ಲಿರುವ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ವಿಡಿಯೊ ಕರೆ ಮುಖಾಂತರ ಆಶಾ ಕಾರ್ಯಕರ್ತೆಯರ ಮುಖಂಡರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು.

‘ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ನನ್ನ ಮೇಲೆ ವಿಶ್ವಾಸವಿಡಿ. ಕೋಪ ಬಿಡಿ. ನಿರಶನ ಮುಂದುವರಿಸುತ್ತಿರುವುದರಿಂದ ಹೆಣ್ಣುಮಕ್ಕಳಿಗೆ ತೊಂದರೆ ಆಗುತ್ತಿದೆ’ ಎಂದರು.

ಪಿ.ಎಂ. ನರೇಂದ್ರಸ್ವಾಮಿ ಕೃಷಿ ಸಚಿವ ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗಲ್ಲ. ಯಾವ ಸರ್ಕಾರವೂ ಆರ್ಥಿಕವಾಗಿ ಅಷ್ಟು ಶಕ್ತವಾಗಿಲ್ಲ. ಈ ಬಗ್ಗೆ ಅಧಿವೇಶನದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.