ಬೆಂಗಳೂರು: ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರಗಳು ಮತ್ತು 234 ತಾಲ್ಲೂಕು ಪಂಚಾಯಿತಿಗಳ 3,580 ಸದಸ್ಯ ಸ್ಥಾನಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ. ಸಾಮಾನ್ಯ ವರ್ಗ ಸೇರಿದಂತೆ ಎಲ್ಲ ಮೀಸಲಾತಿಯಲ್ಲೂ ಆಯಾ ವರ್ಗದ ಮಹಿಳೆಯರಿಗೆ ಶೇ 50ರಷ್ಟು ಮೀಸಲಿಡಲಾಗಿದೆ.
ಈ ಸ್ಥಾನಗಳಿಗೆ ಸುಮಾರು ಐದೂವರೆ ವರ್ಷಗಳ ನಂತರ ಚುನಾವಣೆ ನಡೆದು, ಚುನಾಯಿತ ಪ್ರತಿನಿಧಿಗಳು ಆಯ್ಕೆಗೊಳ್ಳಲಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಇತರ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರಗಳ ಪೈಕಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ–ಎ ಮತ್ತು ಹಿಂದುಳಿದ ವರ್ಗ–ಬಿಗಳಿಗೆ ಒಟ್ಟು 539 ಕ್ಷೇತ್ರಗಳನ್ನು ಮೀಸಲಿರಿಸಲಾಗಿದೆ. 562 ಸ್ಥಾನಗಳು ಸಾಮಾನ್ಯ ವರ್ಗದಲ್ಲಿವೆ.
234 ತಾಲ್ಲೂಕು ಪಂಚಾಯತಿಗಳ 3,580 ಸದಸ್ಯ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ–ಎ ಮತ್ತು ಹಿಂದುಳಿದ ವರ್ಗ–ಬಿಗಳಿಗೆ ಒಟ್ಟು 1,710 ಸ್ಥಾನಗಳನ್ನು ಮೀಸಲಿರಿಸಲಾಗಿದೆ. 1,870 ಸ್ಥಾನಗಳು ಸಾಮಾನ್ಯ ವರ್ಗದಲ್ಲಿವೆ.
ಅಕ್ಟೋಬರ್ 8ರಂದು ಮೀಸಲಾತಿಯ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಆಕ್ಷೇಪಗಳ ಸಲ್ಲಿಕೆಗೆ ಎರಡು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ 2,900ಕ್ಕೂ ಹೆಚ್ಚು ಆಕ್ಷೇಪಗಳು ಬಂದಿದ್ದು, ಮೀಸಲಾತಿಯ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಕ್ಷೇತ್ರ ಮತ್ತು ಸ್ಥಾನಗಳು ಬದಲಾಗಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಐದೂವರೆ ವರ್ಷಗಳಿಂದ ಚುನಾವಣೆ ನಡೆದಿಲ್ಲ. ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ 2020–21 ರಲ್ಲಿ ಚುನಾವಣೆ ನಡೆಸಲಾಗಿತ್ತು. ಅವುಗಳ ಅವಧಿಯು ಮುಕ್ತಾಯವಾಗಿ ಎರಡನೇ ಅವಧಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಂತಿಮ ಮೀಸಲಾತಿ ಪಟ್ಟಿಯ ಎಲ್ಲ ಅಧಿಸೂಚನೆಗಳು https://erajyapatra.karnataka.gov.in/ ರಲ್ಲಿ ಲಭ್ಯವಿವೆ.

ಜನವರಿ ವೇಳೆಗೆ ಚುನಾವಣೆ: ಖಂಡ್ರೆ
ಜನವರಿ ಹೊತ್ತಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಅವಧಿ ವರ್ಷಗಳ ಹಿಂದೆಯೇ ಮುಕ್ತಾಯವಾಗಿತ್ತು. ಹಿಂದಿನ ಸರ್ಕಾರ ಚುನಾವಣೆ ನಡೆಸಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಹಲವು ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿತ್ತು ಮತ್ತು ಕೆಲವು ಗ್ರಾಮ ಪಂಚಾಯಿತಿ ಕ್ಷೇತ್ರಗಳು ನಗರಸಭೆ ನಗರಪಾಲಿಕೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಕೊಂಡಿದ್ದರಿಂದ ಕ್ಷೇತ್ರ ಮರುವಿಂಗಡಣೆ ಅನಿವಾರ್ಯವಾಗಿತ್ತು’ ಎಂದು ವಿವರಿಸಿದರು.
‘ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ರಾಜ್ಯ ಚುನಾವಣಾ ಆಯೋಗವು 45 ದಿನಗಳ ಒಳಗೆ ಚುನಾವಣೆ ನಡೆಸಬೇಕಿದೆ. ಆಯೋಗವು ಈಗ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಥಾನಗಳವಾರು ಮತಪಟ್ಟಿಯನ್ನು ಸಿದ್ಧಪಡಿಸಲಿದೆ. ಆನಂತರ ಚುನಾವಣೆ ನಡೆಯಲಿದೆ’ ಎಂದರು.
‘ಈ ಚುನಾವಣೆಯನ್ನು ಮತಪತ್ರಗಳ ಮೂಲಕವೇ ನಡೆಸಲಾಗುತ್ತದೆ. ಈ ಚುನಾವಣೆ ಎದುರಿಸಲು ಕಾಂಗ್ರೆಸ್ ಸಂಪೂರ್ಣವಾಗಿ ಸಜ್ಜಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

