ಕನ್ನಡದ ಸಾಹಿತ್ಯ ಪರಂಪರೆಯು ಸಮೃದ್ಧವಾಗಿದೆ; ಕನ್ನಡ ಕೃತಿಗಳು ತಮ್ಮ ಸೃಜನಶೀಲತೆ, ಬೌದ್ಧಿಕತೆಯಿಂದ ಹೊರರಾಜ್ಯ, ಹೊರದೇಶಗಳಲ್ಲಿಯೂ ಮನ್ನಣೆ ಪಡೆದಿವೆ. ಆದರೆ, ಒಂದು ಕಾಲದಲ್ಲಿ ಕನ್ನಡಿಗರ ಧ್ವನಿ ಕ್ಷೀಣವಾಗಿತ್ತು. ಪುಸ್ತಕ ಪ್ರಕಟಣೆ ಅಪರೂಪದ ಸಂಗತಿಯಾಗಿತ್ತು. ಇಂಥ ಸಂದರ್ಭದಲ್ಲಿ, ಸೌಲಭ್ಯಗಳ ಕೊರತೆಯ ನಡುವೆಯೂ ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತದ್ದು ಕೆಲವು ಸಂಘ ಸಂಸ್ಥೆಗಳು. ಚಾರಿತ್ರಿಕ ಒತ್ತಡದ ಸಂದರ್ಭದಲ್ಲಿ ಭಾಷೆಯ ಬಗೆಗಿನ ಜನರ ಪ್ರೀತಿ, ಅಭಿಮಾನವನ್ನೇ ಆಧಾರವಾಗಿಸಿಕೊಂಡು ನಾಡು–ನುಡಿಗೆ ಅನನ್ಯ ಕೊಡುಗೆ ನೀಡಿದ ಕೆಲವು ಸಂಘ ಸಂಸ್ಥೆ, ವ್ಯಕ್ತಿಗಳ ಕುರಿತ ಮಾಹಿತಿ ಇಲ್ಲಿದೆ. ಇದು ರಾಜ್ಯೋತ್ಸವ ಸರಣಿಯ ವಿಶೇಷ ಲೇಖನ.
ಕನ್ನಡ ಭಾಷೆಗೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ದೇಶದ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಕರ್ನಾಟಕದ ಆಡಳಿತ ಭಾಷೆಯಾದ, ರಾಜ್ಯದಲ್ಲಿರುವ ಹೆಚ್ಚಿನ ಜನರ ಆಡುನುಡಿಯಾಗಿರುವ ಕನ್ನಡದಲ್ಲಿ ಅತ್ಯಂತ ಸಮೃದ್ಧವಾದ ಸಾಹಿತ್ಯ ಪರಂಪರೆ ಇದೆ. ದೇಶಭಾಷೆಗಳ ನಡುವೆ ಕನ್ನಡ ಸಾಹಿತ್ಯವು ಸತ್ವದಲ್ಲಿಯೂ ಸಂಖ್ಯೆಯಲ್ಲಿಯೂ ಮಹತ್ತರ ಸಾಧನೆ ಮಾಡಿದ್ದು, ಜಾಗತಿಕವಾಗಿಯೂ ಮನ್ನಣೆ ಗಳಿಸಿದೆ. ಹಿಂದಿಯ (12) ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು (8) ಪಡೆದಿರುವುದು ಕನ್ನಡ ಸಾಹಿತ್ಯದ ಮೌಲಿಕತೆಗೆ ಒಂದು ಪುರಾವೆಯಾಗಿದೆ.
ಇಂದು ಕನ್ನಡ ಭಾಷೆಯು ರಾಜ್ಯದ ಜನರ ಸಂವಹನ ಸಾಧನ, ಅಸ್ಮಿತೆ, ಸ್ವಾಭಿಮಾನದ ಸಂಕೇತವಾಗಿರುವಂತೆಯೂ ಒಂದು ರಾಜಕೀಯ ಮಹತ್ವದ ವಿಚಾರವೂ ಆಗಿದೆ. ವಿವಿಧ ಜಾತಿ, ಧರ್ಮ, ಪ್ರದೇಶಗಳಿಗೆ ಸೇರಿದ ನೂರಾರು ಮಂದಿ ಕನ್ನಡದಲ್ಲಿ ವಿಪುಲ ಸಾಹಿತ್ಯ ಸೃಷ್ಟಿಸುತ್ತಿದ್ದು, ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ, ಪುಸ್ತಕೋದ್ಯಮ, ಪ್ರೋತ್ಸಾಹ ಕ್ರಮಗಳು ವಿಕಾಸಗೊಂಡಿವೆ.
ಎಲ್ಲ ಕಾಲದಲ್ಲೂ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಒಂದೇ ರೀತಿ ಇರಲಿಲ್ಲ. ಮುಖ್ಯವಾಗಿ, ಬ್ರಿಟಿಷ್ ಆಡಳಿತ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ಆರಂಭ ಕಾಲದಲ್ಲಿ ಸಾಹಿತ್ಯ ಬರವಣಿಗೆ, ಪ್ರಕಟಣೆ, ಮಾರಾಟ ಕಷ್ಟಕರವಾಗಿತ್ತು. ಅಂಥ ಸಂದರ್ಭದಲ್ಲಿ ಕನ್ನಡದ ಬಗೆಗಿನ ಅಭಿಮಾನವನ್ನೇ ಆಧಾರವಾಗಿಸಿಕೊಂಡು, ನಾಡು ಕಟ್ಟುವ ವಿಚಾರದಲ್ಲಿ ಮಹತ್ತರ ಕೆಲಸ ಮಾಡಿದ್ದು, ಸಂಘ–ಸಂಸ್ಥೆಗಳು ಮತ್ತು ಸಾಹಿತಿ ಸಹೃದಯರ ಗುಂಪುಗಳು. ರಾಜಕೀಯವಾಗಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಂಧದ ಮೂಲಕ ಬೆಸೆದದ್ದು ಸಂಘ–ಸಂಸ್ಥೆಗಳು. ಕನ್ನಡವನ್ನು ತಮ್ಮ ಬದುಕಿನ ಕೇಂದ್ರವಾಗಿ ಪರಿಭಾವಿಸಿದ್ದ ಆ ವ್ಯಕ್ತಿಗಳು ಮತ್ತು ಸಾಹಿತ್ಯ ಪ್ರಕಟಣೆ, ಪ್ರಸಾರಕ್ಕಾಗಿ ಅಹರ್ನಿಶಿ ದುಡಿದ ಸಂಸ್ಥೆಗಳು ನಾಡಿನ ಬೆಳವಣಿಗೆಯಲ್ಲಿ ವಹಿಸಿದ ಪಾತ್ರವು ಐತಿಹಾಸಿಕ
ವಾದುದಾಗಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘ: ಇದು ಸುಮಾರು ಎರಡು ಶತಮಾನಗಳ ಹಿಂದಿನ ಕಥೆ. ಬ್ರಿಟಿಷರು ಕನ್ನಡ ನಾಡನ್ನು ಹೈದರಾಬಾದ್, ಮುಂಬೈ, ಮದ್ರಾಸ್ ಮುಂತಾದ ಪ್ರಾಂತ್ಯಗಳ ಅಧೀನಕ್ಕೆ ಒಳಪಡಿಸಿದ್ದರು. ಕನ್ನಡವು ಮರಾಠಿ, ಹಿಂದಿ, ತೆಲುಗು, ತಮಿಳು, ಉರ್ದು ಭಾಷೆಗಳ ನಡುವೆ ಸಿಲುಕಿತ್ತು. ಅಂಥ ಸಂಕ್ರಮಣ ಸ್ಥಿತಿಯಲ್ಲಿ ಧಾರವಾಡದಲ್ಲಿ ಕನ್ನಡಕ್ಕಾಗಿ ಸಂಘಟಿತರಾಗುವ ಪ್ರಯತ್ನವನ್ನು ಕೆಲವರು ಆರಂಭಿಸಿದರು. ಅದರ ಫಲವೇ, ಕರ್ನಾಟಕ ವಿದ್ಯಾವರ್ಧಕ ಸಂಘದ ಉದಯ (1890). ರಾ.ಹ. ದೇಶಪಾಂಡೆ, ಶ್ಯಾಮರಾವ್ ಕೈಕಿಣಿ, ವೆಂಕಟ ರಂಗೋ ಕಟ್ಟಿ ಮುಂತಾದವರ ಶ್ರಮ ಮತ್ತು ಚಿಂತನೆಯ ಪ್ರತಿರೂಪವಾಗಿದ್ದ ಸಂಘವು, ವಿವಿಧ ಚಟುವಟಿಕೆಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಕೆಲಸದಲ್ಲಿ ತೊಡಗಿತು. ಮುಂದೆ ಬಿ.ಎಂ.ಶ್ರೀ., ಮಾಸ್ತಿ, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾವ್, ಎ.ಆರ್. ಕೃಷ್ಣಶಾಸ್ತ್ರಿ, ಮಧುರಚೆನ್ನ, ಕಡೆಂಗೋಡ್ಲು ಶಂಕರಭಟ್ಟರಂಥ ಘಟಾನುಘಟಿಗಳ ಕ್ರಿಯಾಶೀಲತೆಗೆ ವೇದಿಕೆಯಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಸೌಲಭ್ಯಗಳ ಕೊರತೆಯ ನಡುವೆಯೇ ಪುಸ್ತಕ ಪ್ರಕಟಣೆ ಕಾರ್ಯ ಆರಂಭಿಸಿತು. ಹಲವು ಮಹತ್ವದ ಪ್ರಕಟಣೆಗಳು ಹಸ್ತಪ್ರತಿ ರೂಪದಿಂದ ಪುಸ್ತಕ ರೂಪ ಪಡೆದವು. ನೂರಾರು ಪುಸ್ತಕಗಳು ಪ್ರಕಟವಾದವು.
ಶತಮಾನಕ್ಕೂ ಹೆಚ್ಚಿನ ಅವಧಿಯ ಕರ್ನಾಟಕ, ಕನ್ನಡಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು ವಿದ್ಯಾವರ್ಧಕ ಸಂಘದೊಂದಿಗೆ ಬೆಸೆದುಕೊಂಡಿವೆ. ಕರ್ನಾಟಕ ಏಕೀಕರಣ ಮತ್ತು ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬೇಕು ಎಂಬ ಆಗ್ರಹದೊಂದಿಗೆ ನಡೆದ ಗೋಕಾಕ್ ಚಳವಳಿಯಲ್ಲಿ ಸಂಘದ್ದು ಪ್ರಮುಖ ಪಾತ್ರ. ಆಡಳಿತದಲ್ಲಿ ಕನ್ನಡ ಅನುಷ್ಠಾನ, ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಆಕಾಶವಾಣಿ ಕೇಂದ್ರ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ, ಪ್ರಾದೇಶಿಕ ಅಸಮತೋಲನ ಅಧ್ಯಯನಕ್ಕೆ ಡಿ.ಎಂ.ನಂಜುಂಡಪ್ಪ ಸಮಿತಿ ರಚನೆ– ಇವುಗಳ ಹಿಂದಿನ ಪ್ರೇರಣೆಯಾಗಿ, ನಾಡು ಕಟ್ಟುವ ಕೆಲಸಗಳ ವೇದಿಕೆಯಾಗಿ ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಚರಿತ್ರೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಐತಿಹಾಸಿಕ ಪಾತ್ರ ನಿರ್ವಹಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು: ಮೈಸೂರು ಭಾಗದಲ್ಲಿ ಕನ್ನಡದ ಅಭಿವೃದ್ಧಿಗಾಗಿ 19ನೇ ಶತಮಾನದ ಕೊನೆಯಲ್ಲೇ ಚಾಮರಾಜ ಒಡೆಯರ್ ಅವರು ‘ಕರ್ನಾಟಕ ಭಾಷೋಜ್ಜೀವಿನಿ ಸಭಾ’ (1887) ಸ್ಥಾಪಿಸಿದ್ದರು. ಪಾಶ್ಚಾತ್ಯ ಜ್ಞಾನಶಾಖೆಗಳ ಅಧ್ಯಯನ-ಬೋಧನೆ ಕನ್ನಡದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಈ ದಿಸೆಯಲ್ಲಿಯೇ ಬೆಂಗಳೂರಿನಲ್ಲಿ ಹುಟ್ಟಿದ ಪ್ರಮುಖ ಸಂಸ್ಥೆ, ಕರ್ನಾಟಕ ಸಾಹಿತ್ಯ ಪರಿಷತ್ತು (1915). ಎಚ್.ವಿ. ನಂಜುಂಡಯ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರು. ಮೈಸೂರು ರಾಜವಂಶದ ಎಂ.ಕಾಂತರಾಜೇ ಅರಸ್, ಕಂಠೀರವ ನರಸರಾಜ ಒಡೆಯರ್, ಜಯಚಾಮರಾಜ ಒಡೆಯರ್, ಬಸವಪ್ರಭು, ರಾಜಾ ಲಕ್ಷ್ಮಣಗೌಡ, ಕರ್ಪೂರ ಶ್ರೀನಿವಾಸರಾವ್, ಡಿ.ವಿ. ಗುಂಡಪ್ಪ, ಬಿಎಂಶ್ರೀ, ಮಾಸ್ತಿ ಮುಂತಾದವರು ಪರಿಷತ್ತನ್ನು ಕಟ್ಟಿ ಬೆಳೆಸಿದರು.
‘ಕನ್ನಡ ನುಡಿ’ ವಾರಪತ್ರಿಕೆ ಪ್ರಕಟಿಸುತ್ತಿದ್ದ ಪರಿಷತ್ತು, ಸಾಹಿತ್ಯ ಸಮ್ಮೇಳನಗಳನ್ನೂ ಸಂಘಟಿಸಲಾರಂಭಿಸಿತು. ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ (1938) ಕರ್ನಾಟಕ ಸಾಹಿತ್ಯ ಪರಿಷತ್ತು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದಾಯಿತು. ಪರಿಷತ್ತು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು, ಜಾತ್ರೆಯ ಸ್ವರೂಪ ಪಡೆದಿದ್ದರೂ, ಕನ್ನಡ ಸಾಹಿತ್ಯ ಪ್ರಸಾರ, ಸಂವಾದ, ಪುಸ್ತಕೋದ್ಯಮಕ್ಕೆ ಮುಖ್ಯ ಕೊಡುಗೆ ನೀಡಿವೆ. ಪರಿಷತ್ತಿನ ಮತ್ತೊಂದು ಪ್ರಮುಖ ಚಟುವಟಿಕೆ, ಪುಸ್ತಕ ಪ್ರಕಾಶನ. ಕನ್ನಡದ ಹಲವು ಬಗೆಯ ನಿಘಂಟುಗಳು ಒಳಗೊಂಡಂತೆ, ಪರಿಷತ್ತು ಸುಮಾರು 1,750 ಕೃತಿಗಳನ್ನು ಪ್ರಕಟಿಸಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತು, ಕನ್ನಡಿಗರು ಒಗ್ಗೂಡಲು ಪ್ರೇರಣೆಯಾಗಿತ್ತು; ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗುವ ವಿಚಾರದಲ್ಲಿಯೂ ನಿರ್ಣಾಯಕವಾಗಿತ್ತು.
ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ: ಮೈಸೂರಿನ ಮಹಾರಾಜ ಕಾಲೇಜು ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜು– ರಾಜ್ಯದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಉಪಾಧ್ಯಾಯರಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿ ಅವರು ವಿದ್ಯಾರ್ಥಿಗಳ ಪ್ರಬಂಧ ಮತ್ತಿತರ ಬರಹಗಳನ್ನು ಪ್ರಕಟಿಸುವ ಪುಟ್ಟ ಆಶಯದೊಂದಿಗೆ ಪ್ರಾರಂಭಿಸಿದ್ದು, ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘ (1918). ಸಂಘದಿಂದ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆ ಪ್ರಕಟಣೆ ಆರಂಭಿಸಿದರು. ಹೊಸಗನ್ನಡ ಸಾಹಿತ್ಯಕ್ಕೆ ಈ ಸಂಘ ಮತ್ತು ‘ಪ್ರಬುದ್ಧ ಕರ್ನಾಟಕ’ದ ಕೊಡುಗೆ ಅವಿಸ್ಮರಣೀಯವಾದದ್ದು. ತನ್ನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ಸಮುದಾಯದ ಆಚೆಗೂ ವಿಸ್ತರಿಸಿದ ಸಂಘವು, ಪುಸ್ತಕ ಪ್ರಕಟಣೆಗೆ ಮುಂದಾಯಿತು. ಡಿವಿಜಿ, ಕುವೆಂಪು, ಮಾಸ್ತಿ ಸೇರಿದಂತೆ ಆ ಕಾಲದ ಮಹತ್ವದ ಲೇಖಕರು ಬರೆದ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೈಲಿಗಲ್ಲಿನಂಥ ಹಲವು ಪುಸ್ತಕಗಳು ಪ್ರಕಟಗೊಂಡವು. ಮುದ್ದಣ ಸ್ಮಾರಕ ಸಣ್ಣಕಥೆಗಳ ಸ್ಪರ್ಧೆ, ವಿದ್ಯಾರ್ಥಿ ಕವಿ ಸಮ್ಮೇಳನ, ಉಪನ್ಯಾಸ, ವಾರ್ಷಿಕೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಂಘವು ಶ್ರಮಿಸಿತು. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಜಿ.ಪಿ.ರಾಜರತ್ನಂ ಅವರು ಸಂಘಕ್ಕೆ ಚೈತನ್ಯ ತುಂಬಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಶ್ರಮಿಸಿದ ಅವರು, ವಿದ್ಯಾರ್ಥಿಗಳು ಬರೆದದ್ದನ್ನು ತಿದ್ದಿ ತೀಡಿ, ಪ್ರೋತ್ಸಾಹಿಸುತ್ತಿದ್ದರು. ಕನ್ನಡದ ಅತ್ಯುತ್ತಮ ಲೇಖಕರಲ್ಲೊಬ್ಬರಾದ ಲಂಕೇಶ್ ಅವರು ರಾಜರತ್ನಂ ಅವರು ತಮಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ. ಸಂಘದ ಪ್ರಕಟಣೆಗಳನ್ನು ತಮ್ಮ ಬಗಲಲ್ಲಿರುತ್ತಿದ್ದ ಚೀಲದಲ್ಲಿ ಕೊಂಡೊಯ್ದು ಮಾರಿ, ಕನ್ನಡ ಪರಿಚಾರಿಕರೆನ್ನಿಸಿ ಕೊಂಡವರು ರಾಜರತ್ನಂ.
ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಕೆಲವರ್ಷ ದುಡಿದಿದ್ದ ಟಿ.ಎಸ್. ವೆಂಕಣ್ಣಯ್ಯ ಅವರು ಮೈಸೂರಿನ ಮಹಾರಾಜ ಕಾಲೇಜಿಗೆ ವರ್ಗವಾದಾಗ (1926–27), ಅಲ್ಲಿಯೂ ಕರ್ಣಾಟಕ ಸಂಘ ಸ್ಥಾಪಿಸಿದರು. ಅದರ ಮೂಲಕ ವಿವಿಧ ಸ್ಪರ್ಧೆ, ಕಾರ್ಯಕ್ರಮ, ಪ್ರಕಟಣೆ ಕೆಲಸಗಳನ್ನು ನಡೆಸಿದರು. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಸಾಹಿತ್ಯ ಸಂಸ್ಕೃತಿ ವಿಸ್ತರಿಸುವಲ್ಲಿ ಇವೆರಡು ಸಂಘಗಳು ಮಾಡಿದ ಕೆಲಸ ಅನುಪಮವಾದುದು. ನಂತರದಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು (1951) ಸೇರಿದಂತೆ ರಾಜ್ಯ ಹೊರರಾಜ್ಯದ ಅನೇಕ ವಿದ್ಯಾಸಂಸ್ಥೆಗಲ್ಲಿ ಕನ್ನಡ ಸಂಘಗಳು ಪ್ರಾರಂಭವಾದವು.
ಶಿವಮೊಗ್ಗ ಕರ್ನಾಟಕ ಸಂಘ: ಶಿವಮೊಗ್ಗದಲ್ಲಿ ಆರಂಭವಾಗಿ, ಮಲೆನಾಡಿನಲ್ಲಿ ಜನಪ್ರಿಯವಾಗಿ, ರಾಜ್ಯದಾದ್ಯಂತ ಹೆಜ್ಜೆ ಗುರುತು ಮೂಡಿಸಿರುವುದು, ಶಿವಮೊಗ್ಗ ಕರ್ನಾಟಕ ಸಂಘ (1936). ಕಥೆಗಾರರಾದ ಆನಂದ, ಗುರುರಾವ್ ದೇಶಪಾಂಡೆ, ಕೂಡಲಿ ಚಿದಂಬರಂ, ಎಸ್.ವಿ.ಕೃಷ್ಣಮೂರ್ತಿರಾವ್, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಟನಂಜಪ್ಪ ಮತ್ತು ದೇವಂಗಿ ಮಾನಪ್ಪನವರು ಸಂಘದ ಸ್ಥಾಪನೆಗೆ ಕಾರಣಕರ್ತರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ದ.ರಾ. ಬೇಂದ್ರೆ ಅವರ ಪ್ರೇರಣೆಯಿಂದ ಆರಂಭವಾದ ಶಿವಮೊಗ್ಗ ಕರ್ನಾಟಕ ಸಂಘವನ್ನು ಕುವೆಂಪು ಅವರು ಉದ್ಘಾಟಿಸಿದ್ದರು. ಕನ್ನಡದ ಹಲವು ಪ್ರಮುಖ ಲೇಖಕರು, ಕಲಾವಿದರು, ಸಿನಿಮಾ ನಿರ್ದೇಶಕರು– ಹೀಗೆ ನಾಡಿನ ಶ್ರೇಷ್ಠ ಮನಸ್ಸುಗಳು ಈ ಸಂಘದೊಂದಿಗೆ ಗುರುತಿಸಿಕೊಂಡಿದ್ದವು. ಸಂಘವು ಶಿವಮೊಗ್ಗ ಜಿಲ್ಲೆಯ ಶ್ರೇಷ್ಠ ಸಾಹಿತಿಗಳಿಗೆ ಗೌರವ ಸದಸ್ಯತ್ವವನ್ನು ನೀಡಿ, ಅವರ ಹೆಸರಿನಲ್ಲಿ ಕಥೆ, ಕವನ, ಕಾದಂಬರಿ, ಸಣ್ಣಕಥೆ, ಅಂಕಣ ಮುಂತಾದ ಪ್ರಕಾರಗಳಲ್ಲಿ ರಾಜ್ಯ ಮಟ್ಟದಲ್ಲಿ ಬಹುಮಾನವನ್ನು ನೀಡುತ್ತದೆ. ಹತ್ತಾರು ಪುಸ್ತಕಗಳನ್ನೂ ಪ್ರಕಟಿಸಿರುವ ಸಂಘವು, ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಕ್ರೈಸ್ಟ್ ಕಾಲೇಜು ಕನ್ನಡ ಸಂಘ: ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡ ಕಟ್ಟುವ ದಿಸೆಯಲ್ಲಿ ಗಮನಾರ್ಹ ಕೆಲಸ ಮಾಡಿರುವುದು, ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ (ಆರಂಭ: 1971). ಸಂಘವು ದಶಕಗಳ ಕಾಲ ಯುವ ಬರಹಗಾರರನ್ನು ಪೋಷಿಸುವಲ್ಲಿ, ಅಂತರ ಕಾಲೇಜು ಸ್ಪರ್ಧೆ, ಸಾಹಿತ್ಯಿಕ ಚರ್ಚೆಗಳನ್ನು ಆಯೋಜಿಸುವಲ್ಲಿ ಮತ್ತು ವಿದ್ಯಾರ್ಥಿಗಳನ್ನು ಕನ್ನಡ ಭಾಷೆ–ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಸಾಹಿತ್ಯ ಲೋಕದಲ್ಲಿ ಕನ್ನಡ ಸಂಘವು ವಿದ್ಯಾರ್ಥಿಗಳಿಗಾಗಿ ನಡೆಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳು ಭಾರಿ ಜನಪ್ರಿಯತೆ ಪಡೆದಿದ್ದವು. ಹಲವು ಪ್ರಮುಖ ಕೃತಿಗಳನ್ನು ಸಂಘವು ಪ್ರಕಟಿಸಿದೆ; 700ಕ್ಕೂ ಹೆಚ್ಚು ಯುವ ಬರಹಗಾರರಿಗೆ ವಿವಿಧ ರೀತಿಗಳಲ್ಲಿ ಮಾರ್ಗದರ್ಶನ ನೀಡಿದೆ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಚಿ.ಶ್ರೀನಿವಾಸರಾಜು ಅವರು, ಆರಂಭದಿಂದಲೂ ಸಂಘದ ಶಕ್ತಿಯಾಗಿದ್ದರು. ಸಂಘದ ಪ್ರಕಟಣೆಗಳೂ ಸೇರಿದಂತೆ ಕನ್ನಡ ಪುಸ್ತಕಗಳನ್ನು ಊರೂರು ತಿರುಗಿ ಮಾರಾಟ ಮಾಡಿದರು. ಕನ್ನಡ ಪರಿಚಾರಕ ಎಂದು ಹೆಸರಾಗಿದ್ದ ಅವರ ಕನ್ನಡ ಸೇವೆ ಅನನ್ಯವಾದುದು.
ಕಾಂತಾವರ ಕನ್ನಡ ಸಂಘ: ಕರ್ನಾಟಕದ ಕರಾವಳಿಯಲ್ಲಿ ಕಾಂತಾವರ ಕನ್ನಡ ಸಂಘವು ಮಾಡಿದ ಕೆಲಸ ಅತಿ ಮುಖ್ಯವಾದುದು. ಆಯುರ್ವೇದ ವೈದ್ಯರೂ ಲೇಖಕರೂ ಆದ ನಾ. ಮೊಗಸಾಲೆ ಅವರು ಕಾಂತಾವರ ಗ್ರಾಮದಲ್ಲಿ (ಕಾರ್ಕಳ ತಾಲ್ಲೂಕು) ಆರಂಭಿಸಿದ (1976) ಈ ಸಂಘವು, ನಾಡು–ನುಡಿಗೆ ಸಂಬಂಧಿಸಿದ ಉಪನ್ಯಾಸ, ವಿಚಾರಗೋಷ್ಠಿಗಳನ್ನು ಆಯೋಜಿಸುವ ಮೂಲಕ ಜನರ ಪ್ರೀತಿ ಗಳಿಸಿತು. ಕವಿ ಮುದ್ದಣನ ನೆನಪಿನಲ್ಲಿ ಕಾವ್ಯಸ್ಪರ್ಧೆ ನಡೆಸಿ, ಹಸ್ತಪ್ರತಿಗಳಿಗೆ ಪ್ರಶಸ್ತಿ ನೀಡುತ್ತದೆ. ಜತೆಗೆ, ಪ್ರತಿವರ್ಷ ಕಾಂತಾವರ ಉತ್ಸವ ನಡೆಸುತ್ತಿದೆ. ರಾಜ್ಯದ, ವಿಶೇಷವಾಗಿ, ಕರಾವಳಿಯ ಸಾಧಕರ ಕುರಿತು ಕೃತಿಗಳನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆಯ ಹಳ್ಳಿಯೊಂದರ ಈ ಸಂಘವು ತನ್ನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಮೂಲಕ ರಾಜ್ಯದಲ್ಲಿ ಹೆಸರು ಗಳಿಸಿದೆ.
ಅನೌಪಚಾರಿಕ ಕೂಟ, ಸಾಹಿತ್ಯಿಕ ನೋಟ
ಸಂಘ, ಸಂಸ್ಥೆಗಳ ಹೊರತಾಗಿ ರಾಜ್ಯದಲ್ಲಿ ಅನೌಪಚಾರಿಕವಾಗಿ ಹಲವು ಗುಂಪುಗಳು ಕನ್ನಡ ಸಾಹಿತ್ಯಕ್ಕೆ ಮುಖ್ಯ ಕೊಡುಗೆ ನೀಡಿವೆ. ಅವುಗಳಲ್ಲಿ ಮುಖ್ಯವಾದದ್ದು, ಧಾರವಾಡದಲ್ಲಿ 1920ರ ದಶಕದಲ್ಲಿ ದ.ರಾ.ಬೇಂದ್ರೆ ಅವರ ಮುಂದಾಳತ್ವದಲ್ಲಿ ಆರಂಭವಾದ ‘ಗೆಳೆಯರ ಬಳಗ’. ವಿ.ಕೃ.ಗೋಕಾಕ್, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಷಿ ಮುಂತಾದವರು ಈ ಕೂಟದ ಭಾಗವಾಗಿದ್ದರು. ಇದೇ ರೀತಿ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಧಾರೆಯೊಂದಕ್ಕೆ ಮುನ್ನುಡಿ ಬರೆದರು. ಮಧುರಚೆನ್ನ, ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಓಲೆಕಾರ ಮಾದಣ್ಣ ಇದರಲ್ಲಿದ್ದರು. ಗೋಪಾಲಕೃಷ್ಣ ಅಡಿಗ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಮುಂತಾದವರು ಮೈಸೂರಿನ ‘ಕಾಫಿ ಹೌಸ್’ನಲ್ಲಿ ನಡೆಸುತ್ತಿದ್ದ ಚರ್ಚೆಗಳೂ ಉಲ್ಲೇಖಾರ್ಹವಾಗಿವೆ.
ಲಂಡನ್ನ ಕಾಫಿ ಹೌಸ್ಗಳು
17 ಮತ್ತು 18ನೇ ಶತಮಾನಗಳಲ್ಲಿ ಲಂಡನ್ನಲ್ಲಿ ಕಾಫಿ ಹೌಸ್ಗಳು ಇಂಗ್ಲೆಂಡ್ನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸರದಲ್ಲಿ ಮಹತ್ವದ ಬದಲಾವಣೆಯನ್ನು ತಂದವು. ಅವು ಕೇವಲ ಕಾಫಿ ಸೇವಿಸುವ ತಾಣಗಳಾಗಿರಲಿಲ್ಲ; ಬದಲಾಗಿ, ಬೌದ್ಧಿಕ ವಿನಿಮಯ, ರಾಜಕೀಯ ಚರ್ಚೆ ಮತ್ತು ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದ್ದವು. ಇಂಗ್ಲಿಷ್ ಸಮಾಜವನ್ನು ರೂಪಿಸುವಲ್ಲಿ ಕಾಫಿ ಹೌಸ್ಗಳ ಐತಿಹಾಸಿಕ ಮಹತ್ವ ಮತ್ತು ಆಧುನಿಕ ಇಂಗ್ಲೆಂಡ್ನ ಸಾಮಾಜಿಕ ಜೀವನದಲ್ಲಿ ಅವು ಉಳಿಸಿಹೋಗಿರುವ ಹೆಜ್ಜೆಗುರುತುಗಳ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ.

