ಬೆಂಗಳೂರು: ಕೊರೆಯುವ ಚಳಿ ಮತ್ತು ಮಂಗಳವಾರ ಸುರಿದ ಮಳೆಯಿಂದ ಹೈರಾಣಾದ ಆಶಾ ಕಾರ್ಯಕರ್ತೆಯರು ಮತ್ತು ಅವರ ಕಂದಮ್ಮಗಳು ಧರಣಿಯ ಜಾಗ ಬಿಟ್ಟು ಕದಲಿಲ್ಲ. ಈ ಮೂಲಕ ಇವರ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಪಾನ್ನಿಂದ ವಿಡಿಯೊ ಕರೆ ಮೂಲಕ ಮಾಡಿದ ಮನವಿಗೂ ಇವರು ಮಣಿಯಲಿಲ್ಲ.
ಮಧ್ಯಾಹ್ನ ಹಾಗೂ ಸಂಜೆ ಸುರಿದ ಜೋರು ಮಳೆಯಿಂದ ರಕ್ಷಣೆ ಪಡೆಯಲು ಆಶಾ ಕಾರ್ಯಕರ್ತೆಯರು ಕೊಡೆ ಹಾಗೂ ಟಾರ್ಪಲ್ಗಳ ಮೊರೆ ಹೊಕ್ಕರು. ಮಳೆಯಿಂದ ಕುಳಿತುಕೊಳ್ಳಲು ಆಗದೆ ಒಂದು ಗಂಟೆಗೂ ಹೆಚ್ಚು ನಿಂತು, ‘ಬಿಸಿಲೇ ಇರಲಿ, ಮಳೆಯೇ ಬರಲಿ, ಹೋರಾಟ ನಿಲ್ಲೋದಿಲ್ಲ’ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು. ಟಾರ್ಪಲ್ನಿಂದ ನೀರು ಸೋರಿ, ಹಲವರು ತೊಯ್ದರು.
ಮನೆ, ಶಾಲೆಯಲ್ಲಿ ಇರಬೇಕಾದ ಕಂದಮ್ಮಗಳು ಅಮ್ಮಂದಿರ ಜತೆ ಸಪ್ಪೆ ಮೋರೆ ಹಾಕಿ ಸ್ವಾತಂತ್ರ್ಯ ಉದ್ಯಾನದಲ್ಲಿ ಚಳಿ, ಗಾಳಿ, ಬಿಸಿಲಿನಲ್ಲಿ ಬಳಲುತ್ತಿವೆ. ಮಹಿಳೆಯರು ಕೊರೆಯುವ ಚಳಿಯಲ್ಲಿಯೇ ಸಂಕಷ್ಟ ಅನುಭವಿಸುತ್ತಿದ್ದು, ಜ್ವರ, ಹೊಟ್ಟೆ ನೋವು, ರಕ್ತದೊತ್ತಡ, ಮಧುಮೇಹ ಹಾಗೂ ಮೈ, ಕೈ ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಿತ್ಯವೂ ಗಣ್ಯರು ಧರಣಿ ಸ್ಥಳಕ್ಕೆ ಬಂದು ನೈತಿಕ ಬೆಂಬಲ ಸೂಚಿಸಿ ಹೋಗುತ್ತಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ನೀರಿನ ಕೊರತೆ ಇರುವುದರಿಂದ, ಮಲ, ಮೂತ್ರ ವಿಸರ್ಜನೆಗೆ ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿ ಇದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿ ವೇಳೆ ತಾಪಮಾನ 18 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುತ್ತಿದೆ. ಇದು ಕೂಡ ಧರಣಿ ನಿರತರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಇಷ್ಟಾದರೂ ಬೇಡಿಕೆ ಈಡೇರದೇ ಜಾಗ ಬಿಟ್ಟು ಕದಲುವುದಿಲ್ಲ ಎಂಬ ಸಂಕಲ್ಪ ತೊಟ್ಟಿದ್ದಾರೆ. ಈ ನಡುವೆ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿಯವರು ವಿಡಿಯೊ ಕರೆ ಮೂಲಕ ಮನವೊಲಿಕೆಗೆ ಯತ್ನಿಸಿ ವಿಫಲರಾದರು.
‘ಬೇಡಿಕೆ ಈಡೇರಿಸುವವರೆಗೂಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಸ್ವಾತಂತ್ರ್ಯ ಉದ್ಯಾನ ಬಿಟ್ಟು ಹೋಗುವುದಿಲ್ಲ’ ಎಂದು ಪ್ರತಿಭಟನಕಾರರು ಘೋಷಿಸಿದರು.
‘ಬೆಲೆ ಏರಿಕೆ ಕಾರಣದಿಂದಾಗಿ ಈ ಗೌರವಧನದಲ್ಲಿ ಸಂಸಾರ ನಿಭಾಯಿಸುವುದು ಕಷ್ಟ. ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಭರಿಸುವುದು ಅಸಾಧ್ಯವಾಗಿದೆ. ಸತ್ತರೂ ಸರಿಯೆ ಹೋರಾಟ ಕೈಬಿಡುವುದಿಲ್ಲ’ ಎಂದು ಕಾರ್ಯಕರ್ತೆಯರು ಎಚ್ಚರಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವುದು ನಿಜವೇ? ‘ಬೆಂಗಳೂರು ಹಬ್ಬ’ಕ್ಕೆ ರಾಜ್ಯ ಸರ್ಕಾರ ₹20 ಕೋಟಿ ನೀಡಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ನೀಡಲು ದುಡ್ಡಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೂರಾರು ಕೋಟಿ, ಬಿಎಂಟಿಸಿ ಬಸ್ ಖರೀದಿಗೆ ₹4,000 ಕೋಟಿ, ಆರೋಗ್ಯ ಇಲಾಖೆಗೆ ₹17,000 ಕೋಟಿ ನೀಡಲಾಗಿದೆ. ಕೇರಳಂ ಸರ್ಕಾರ ₹12,000 ಗೌರವ ಧನ ನೀಡುತ್ತಿದೆ, ನಿಮಗೆ ಏಕೆ ಸಾಧ್ಯವಿಲ್ಲ?’ ಎಂದರು.
ಕೆಂಪೇಗೌಡ ಯುವವಾಹಿನಿ ಸಂಘದ ಸ್ಥಾಪಕ ಜಗನ್ನಾಥ ಗೌಡ, ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉಮೇಶ್ ಆವರೆಗೆರೆ ಮಾತನಾಡಿದರು.
ವಿಶ್ವಾಸವಿಡಿ, ಪ್ರತಿಭಟನೆ ಕೈಬಿಡಿ:ಸಿಎಂ ಮನವಿ
‘ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇವೆ, ಪ್ರತಿಭಟನೆ ಕೈಬಿಡಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.
ಜಪಾನ್ ಪ್ರವಾಸದಲ್ಲಿರುವ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ವಿಡಿಯೊ ಕರೆ ಮುಖಾಂತರ ಆಶಾ ಕಾರ್ಯಕರ್ತೆಯರ ಮುಖಂಡರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು.
‘ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ನನ್ನ ಮೇಲೆ ವಿಶ್ವಾಸವಿಡಿ. ಕೋಪ ಬಿಡಿ. ನಿರಶನ ಮುಂದುವರಿಸುತ್ತಿರುವುದರಿಂದ ಹೆಣ್ಣುಮಕ್ಕಳಿಗೆ ತೊಂದರೆ ಆಗುತ್ತಿದೆ’ ಎಂದರು.
‘ಅತ್ತ ಅಂಗನವಾಡಿ ಕಾರ್ಯಕರ್ತೆಯರು ದೆಹಲಿಗೆ ಹೋಗಲು ತಯಾರಿ ಮಾಡುತ್ತಿದ್ದಾರೆ. ಬೇರೆ ಇಲಾಖೆಗೆ ಸಂಬಂಧಿಸಿದಂತೆ ಬೇರೆ ಬೇರೆ ಬೇಡಿಕೆಗಳಿದ್ದು, ಅಧಿವೇಶನ ಸಂದರ್ಭದಲ್ಲಿ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುವೆ. ನಿಮ್ಮ ಶ್ರಮಕ್ಕೆ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
‘ನಿಮ್ಮ ಬಗ್ಗೆ ಕಾಳಜಿ ತೋರುತ್ತಿರುವ ರಾಜಕೀಯ ನಾಯಕರು ಸಹಾಯ ಮಾಡುವುದಿಲ್ಲ, ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ. ಅಧಿವೇಶನದವರೆಗೂ ಸಮಯ ಕೊಡಿ. ಹೆಣ್ಣುಮಕ್ಕಳು ಹಗಲು, ರಾತ್ರಿ, ಬಿಸಿಲು, ಚಳಿಯಲ್ಲಿ ಪರದಾಡುವುದು ಬೇಡ’ ಎಂದು ಮನವಿ ಮಾಡಿದರು.
‘ಬೆಲೆ ಏರಿಕೆ ಸಂದರ್ಭದಲ್ಲಿ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ಇದೇ ಕಾರಣಕ್ಕೆ ಗ್ಯಾರಂಟಿ ನೀಡಲು ಮುಂದಾಗಿದ್ದೇವೆ. ಆರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಬಾರದು ಎಂದು ಚರ್ಚೆಯಾಗಿತ್ತು. ಆದರೆ, ನಿಮ್ಮ ಶ್ರಮ ಪರಿಗಣಿಸಿ ಯೋಜನೆ ನೀಡಿದೆವು. ಪ್ರವಾಸದಿಂದ ಮರಳಿದ ಬಳಿಕ ನಿಮ್ಮನ್ನು ಭೇಟಿ ಮಾಡುವೆ’ ಎಂದರು.
ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗಲ್ಲ. ಯಾವ ಸರ್ಕಾರವೂ ಆರ್ಥಿಕವಾಗಿ ಅಷ್ಟು ಶಕ್ತವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮಾತನಾಡಿದ್ದು, ಅಧಿವೇಶನದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು
ಪಿ.ಎಂ. ನರೇಂದ್ರಸ್ವಾಮಿ, ಕೃಷಿ ಸಚಿವ
261125-4-976132184

