ಬೆಂಗಳೂರು: ‘ನಗರದಲ್ಲಿ ಡಿಸೆಂಬರ್ 4ರಿಂದ 13ರವರೆಗೆ ಹತ್ತು ದಿನ ₹20 ಕೋಟಿ ಅಂದಾಜು ವೆಚ್ಚದಲ್ಲಿ ‘ಬೆಂಗಳೂರು ಜಾತ್ರೆ’ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಸಮಯದಲ್ಲಿ, ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಶಾಸಕರು ಯಾವುದರಲ್ಲಿ ಭಾಗವಹಿಸಬೇಕು’ ಎಂದು ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಜಾಲತಾಣದಲ್ಲಿ, ಕೃಷ್ಣ ಬೈರೇಗೌಡರಿಗೆ ಪ್ರಶ್ನೆ ಕೇಳಿರುವ ಅವರು, ‘ಡಿ.2ರಿಂದ 11ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಬಾರಿ ಶನಿವಾರವೂ ಸದನದ ಕಲಾಪ ನಡೆಯಲಿದೆ. ಕೃಷ್ಣ ಬೈರೇಗೌಡರು ಬೆಂಗಳೂರಿನ ಶಾಸಕರು ಹಾಗೂ ಸಂಸದೀಯ ವ್ಯವಹಾರಗಳ ಸಚಿವರೂ ಹೌದು. ಅವರೂ ಸೇರಿ, ಬೆಂಗಳೂರಿನ ಶಾಸಕರು ಒಂದೇ ಸಮಯದಲ್ಲಿ ಅಧಿವೇಶನದಲ್ಲಿ ಭಾಗವಹಿಸಬೇಕೋ ಅಥವಾ ಬೆಂಗಳೂರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೋ’ ಎಂದಿದ್ದಾರೆ.
261125-4-301703213

