ಬೆಂಗಳೂರು: ‘ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆ ವಿಸ್ತರಣೆಗೆ ಹೊಸ ಆಯಾಮ ನೀಡಲು ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ವಿಕಾಸಸೌಧದಲ್ಲಿನ ಸಚಿವರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 6,342 ಗ್ರಾಮ ಗ್ರಂಥಾಲಯಗಳನ್ನು ವರ್ಚ್ಯುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು. ‘ಗ್ರಾಮ ಗ್ರಂಥಾಲಯಗಳನ್ನು ತಲಾ ₹4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

‘ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5,888 ಅರಿವು ಕೇಂದ್ರಗಳು ಸಮುದಾಯ ಗ್ರಂಥಾಲಯ ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದ 6 ದಿನ ಕನಿಷ್ಠ 8 ಗಂಟೆ ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಗ್ರಾಮ ಗ್ರಂಥಾಲಯಗಳು ವಾರಾಂತ್ಯದ 2 ದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿವೆ’ ಎಂದು ಮಾಹಿತಿ ನೀಡಿದರು.

‘ಅರಿವು ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತ್ವ ಒದಗಿಸಲಾಗಿದ್ದು, ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದುವ ಅವಕಾಶ ಕಲ್ಪಿಸಲಾಗಿದೆ. ಈ ಉಪಕ್ರಮದ ಪರಿಣಾಮವಾಗಿ ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ. ಅರಿವು ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಓದುವ ಮನೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ವಿಕಾಸಸೌಧದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ನಂತರ ಈಶ್ವರ ಬಿ. ಖಂಡ್ರೆ ಅವರು ಬೆಂಗಳೂರು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ದೊಡ್ಡಜಾಲ ಅರಿವು ಕೇಂದ್ರ ಹಾಗೂ ಶೆಟ್ಟಿಗೆರೆ ಗ್ರಾಮ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

261125-51-481782448