ಬೆಂಗಳೂರು: ಜಪಾನ್‌ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗವು ಒಸಾಕಾದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಯೋಜಿತ ನಗರ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಪರಿಶೀಲಿಸಿತು.

ಈ ವೇಳೆ ಮಾತನಾಡಿದ ಶಿವಕುಮಾರ್‌, ‘ನಮ್ಮ‌ ನಗರ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರ ಗಳನ್ನು ಹುಡುಕುವುದು, ತ್ಯಾಜ್ಯದಿಂದ ವಿದ್ಯುತ್ ತಯಾರಿ ಸುವ ಜಾಗತಿಕ ವಿನೂತನ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡುವುದು ಈ ಭೇಟಿಯ ಉದ್ದೇಶ’ ಎಂದರು.

ಮೈಶಿಮಾ ದ್ವೀಪದಲ್ಲಿರುವ ತ್ಯಾಜ್ಯ ದಹನ ಘಟಕವು 2001ರಿಂದ ಕಾರ್ಯನಿರ್ವಹಿಸುತ್ತಿದ್ದು,ಇಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಎರಡು ದಹನ ಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಘಟಕವು ತನ್ನ ಸ್ವಂತಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿ ಕೊಂಡು,ಉಳಿದ ವಿದ್ಯುತ್‌ನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ.

ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸು ತ್ತದೆ. ಇದರಿಂದ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕವಾಗಿ ನಡೆದು, ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗುತ್ತದೆ. ಈ ಘಟಕ ತನ್ನ ತಂತ್ರಜ್ಞಾನದ ಜೊತೆಗೆ ವಿಶಿಷ್ಟ ವಿನ್ಯಾಸಕ್ಕೂ ಪ್ರಸಿದ್ಧವಾಗಿದೆ. ಆಸ್ಟ್ರಿಯನ್ ಕಲಾವಿದ ಫ್ರೀಡೆನ್ಸ್‌ರೈಕ್ ಹಂಡರ್ಟ್‌ವಾಸರ್ ಇದನ್ನು ವಿನ್ಯಾಸಗೊಳಿಸಿದ್ದು, ವರ್ಣರಂಜಿತ ಹೊರನೋಟ, ವಿಭಿನ್ನ ಆಕಾರಗಳು ಮತ್ತು ವ್ಯಾಪಕ ಹಸಿರು ಇದರಲ್ಲಿದೆ. ಈ ವಿನ್ಯಾಸ ಕಲೆ, ಪರಿಸರ ಮತ್ತು ಕೈಗಾರಿಕಾ ಮೂಲಸೌಕರ್ಯದ ಸಂಗಮವಾಗಿದೆ. ನಗರದ ಅಗತ್ಯ ಸೌಲಭ್ಯಗಳು ಪರಿಸರ ಜಾಗೃತಿ ಮೂಡಿಸುವ ಸ್ಥಳಗಳನ್ನಾಗಿಯೂ ರೂಪಿಸಬಹುದು ಎಂಬುದನ್ನು ಇದು ತೋರಿಸುತ್ತದೆ.

‘ರಾಜ್ಯದ ಮೂಲಸೌಕರ್ಯ ಬಲಪಡಿಸಲು ಸಹಾಯಕ’

‘ನಗರ ಯೋಜನೆ, ಮೂಲಸೌಕರ್ಯ ಮತ್ತು ಪರಿಸರ ನಿರ್ವಹಣೆಯಲ್ಲಿ ಜಾಗತಿಕ‌ ಮನ್ನಣೆ ಪಡೆದ ಮಾದರಿಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಗುರಿಯಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಮೈಶಿಮಾ ತ್ಯಾಜ್ಯ ದಹನ ಘಟಕಗಳ ಅಧ್ಯಯನ ಮಾಡುವುದರಿಂದ ಕರ್ನಾಟಕದ ನಗರಗಳ ಮೂಲಸೌಕರ್ಯವನ್ನು ಬಲಪಡಿಸಲು, ವೈಜ್ಞಾನಿಕ ಮತ್ತು ದಕ್ಷ ತ್ಯಾಜ್ಯ ವಿಲೇವಾರಿಯನ್ನು ಉತ್ತೇಜಿಸಬಹುದು. ತ್ಯಾಜ್ಯದಿಂದ ಇಂಧನ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಸ್ವಚ್ಛ, ಸುಸ್ಥಿರ ಹಾಗೂ ವಾಸಯೋಗ್ಯ ನಗರಗಳನ್ನು ನಿರ್ಮಿಸಲು ನೆರವಾಗುತ್ತದೆ’ ಎಂದರು.

261125-51-1480302574