ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸುವ ಮಹತ್ವದ ಯೋಜನೆಯಾದ ನಮ್ಮ ಮೆಟ್ರೊ ನೀಲಿ ಮಾರ್ಗದ ಫೇಸ್ 2ಎ ಯೋಜನೆಯಡಿ ಕೆ.ಆರ್.ಪುರದಿಂದ ಮಹದೇವಪುರದ ಕಡೆಗೆ ಪರೀಕ್ಷಾರ್ಥ ಸಂಚಾರ (ಟ್ರಯಲ್ ರನ್) ಆರಂಭವಾಗಿದೆ.

ಕೆ.ಆರ್. ಪುರದಿಂದ ನಾಲ್ಕು ಮೆಟ್ರೊ ನಿಲ್ದಾಣಗಳವರೆಗೆ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ನಿಲ್ದಾಣಗಳಿಗೂ ‘ಟ್ರಯಲ್ ರನ್’ ವಿಸ್ತರಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ದೊಡ್ಡನೆಕ್ಕುಂದಿ ಮೆಟ್ರೊ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ ಪರೀಕ್ಷಾರ್ಥ ಸಂಚಾರದ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ನಗರದ ಸಂಚಾರ ವ್ಯವಸ್ಥೆಯ ದೃಷ್ಟಿಯಿಂದ ಹೊರ ವರ್ತುಲ ರಸ್ತೆ ಅತ್ಯಂತ ಪ್ರಮುಖ ಕಾರಿಡಾರ್ ಆಗಿದೆ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ಪ್ರದೇಶದಲ್ಲಿ ಸುಮಾರು 11 ಲಕ್ಷದಿಂದ 12 ಲಕ್ಷ ಜನರು ಉದ್ಯೋಗ ನಿರ್ವಹಿಸುತ್ತಿದ್ದು, ಸಾರ್ವಜನಿಕರ ದೈನಂದಿನ ಸಂಚಾರ, ಉದ್ಯೋಗಾವಕಾಶ ಹಾಗೂ ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಕಾರಿಡಾರ್ ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದರು.

ಫೇಸ್ 2ಎ ಮತ್ತು ಫೇಸ್ 2ಬಿ ಯೋಜನೆಗಳನ್ನು ಸಿದ್ಧಪಡಿಸಿ, 2017ರಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. 2020ರಿಂದ ಕಾಮಗಾರಿಗಳು ಆರಂಭಗೊಂಡಿವೆ ಎಂದು ವಿವರಿಸಿದರು.

ಕೆ.ಆರ್. ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 19 ಕಿ.ಮೀ. ಉದ್ದದ ಫೇಸ್ 2ಎ ಮೆಟ್ರೊ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಅಕ್ಟೋಬರ್ ಅಂತ್ಯದ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭಿಸುವ ಗುರಿ ಹೊಂದಲಾಗಿತ್ತು.

ಈ ತಿಂಗಳು ಪೂರ್ತಿ ಪರೀಕ್ಷಾರ್ಥ ಸಂಚಾರ ಮುಂದುವರಿಯಲಿದ್ದು, ಮುಂದಿನ ತಿಂಗಳು ಇನ್ನೂ ನಾಲ್ಕು ನಿಲ್ದಾಣಗಳವರೆಗೆ ‘ಟ್ರಯಲ್ ರನ್’ ವಿಸ್ತರಿಸಲಾಗುವುದು. ಪ್ರಸ್ತುತ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಬಾಕಿಯಿದ್ದು, ಮುಂದಿನ ಎರಡು-ಮೂರು ತಿಂಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಮುಂದಿನ ವರ್ಷ ಸಂಚಾರಕ್ಕೆ ಮುಕ್ತ: ಜನವರಿ ವೇಳೆಗೆ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಪೂರ್ಣಗೊಳಿಸಿ, ಫೆಬ್ರುವರಿ ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗೆ ಮುಂದಾಗುವ ಉದ್ದೇಶವಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸುಮಾರು ಏಳೆಂಟು ತಿಂಗಳ ಕಾಲಾವಕಾಶ ಅಗತ್ಯವಿದ್ದು, ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಮೆಟ್ರೊ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ನೀಲಿ ಮಾರ್ಗ ಯೋಜನೆಯ ಫೇಸ್ 2ಬಿ ಅಡಿಯಲ್ಲಿಯೂ ಕಾಮಗಾರಿಗಳು ಪ್ರಗತಿಯಲ್ಲಿವೆ. ವಿಶೇಷವಾಗಿ ಕೆ.ಆರ್. ಪುರದಿಂದ ಹೆಬ್ಬಾಳದ ನಡುವಿನ ಕಾಮಗಾರಿಗಳ ವೇಗ ಇನ್ನಷ್ಟು ಹೆಚ್ಚಾಗಬೇಕಿದೆ ಎಂದರು.

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ, ಕೆ.ಆರ್. ಪುರದಿಂದ ಹೆಬ್ಬಾಳ ಹಾಗೂ ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58.2 ಕಿ.ಮೀ. ಉದ್ದದ ನೀಲಿ ಮಾರ್ಗ ನಿರ್ಮಾಣವಾಗುತ್ತಿದೆ. ಸುಮಾರು ₹20,000 ಕೋಟಿ ವೆಚ್ಚದ ಈ ಯೋಜನೆಯನ್ನು ಮುಂದಿನ ಒಂದೂವರೆ ವರ್ಷದೊಳಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಾಲ ಪಡೆಯುವ ಸಂದರ್ಭದಲ್ಲಿ ಡಾಲರ್ ಮೌಲ್ಯ ಸುಮಾರು ₹70ರಿಂದ ₹80 ಇತ್ತು, ಇದೀಗ ಸುಮಾರು ₹100ಕ್ಕೆ ಏರಿಕೆಯಾಗಿರುವುದರಿಂದ ಸಾಲ ಮರುಪಾವತಿಯ ಹೊರೆ ಸುಮಾರು ಶೇಕಡ 30ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಯೋಜನೆಗಳ ಅನುಮೋದನೆಗೆ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವುದರಿಂದ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಹಾಗೂ ಕಾಮಗಾರಿಗಳ ವೆಚ್ಚವೂ ಹೆಚ್ಚಾಗುತ್ತಿದೆ. ಈ ಹೆಚ್ಚುವರಿ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಬೇಕಾಗಿದೆ ಎಂದು ವಿವರಿಸಿದರು.

ಹೊರ ವರ್ತುಲ ರಸ್ತೆಯಲ್ಲಿ ಉದ್ಯೋಗಕ್ಕಾಗಿ ಪ್ರತಿದಿನ ಸಂಚರಿಸುವ ಲಕ್ಷಾಂತರ ಜನರಿಗೆ ನೀಲಿ ಮಾರ್ಗವು ಅನುಕೂಲವಾಗಲಿದೆ ಎಂದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್, ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್, ಜಂಟಿ ಆಯುಕ್ತೆ ಡಾ. ದಾಕ್ಷಾಯಿಣಿ ಕೆ. ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಂಪು ಮಾರ್ಗ: ಸಿಗದ ಒಪ‍್ಪಿಗೆ

ರಾಜ್ಯ ಸರ್ಕಾರ ಸಲ್ಲಿಸಿರುವ ನಮ್ಮ ಮೆಟ್ರೊ ಕೆಂಪು ಮಾರ್ಗದ ಪ್ರಸ್ತಾವದ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ತಾವು ಪ್ರಧಾನಿಗೆ ಮನವಿ ಸಲ್ಲಿಸಿ ಸುಮಾರು 22 ತಿಂಗಳು ಕಳೆದಿದ್ದರೂ, ಈವರೆಗೆ ಅಂತಿಮ ಅನುಮೋದನೆ ದೊರೆತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆದಿದ್ದು, ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರಸ್ತಾವದ ವಿವಿಧ ಅಂಶಗಳನ್ನು ವಿವರಿಸಿದ್ದಾರೆ. ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೂ, ರಾಜ್ಯದ ಅಹವಾಲುಗಳನ್ನು ಆಲಿಸಿ ಸಕಾರಾತ್ಮಕ ಹಾಗೂ ರಚನಾತ್ಮಕ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ ಸರ್ಜಾಪುರದಿಂದ ಇಬ್ಬಲೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ಡಬಲ್ ಡೆಕರ್ ವ್ಯವಸ್ಥೆ ನಿರ್ಮಿಸುವ ಪ್ರಸ್ತಾವವನ್ನೂ ಕೇಂದ್ರ ಸರ್ಕಾರದ ಮುಂದೆ ಮಂಡಿಸಲಾಗಿದೆ ಎಂದರು.

₹600 ಕೋಟಿಯಿಂದ ₹700 ಕೋಟಿ ನಷ್ಟ

ಪ್ರಸ್ತುತ ಟಿಕೆಟ್ ಆದಾಯದಿಂದ ನಿರ್ವಹಣಾ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಾಗುತ್ತಿಲ್ಲ. ಸವಕಳಿ ವೆಚ್ಚವನ್ನು ಪರಿಗಣಿಸಿದರೆ ಸಂಸ್ಥೆಯು ವಾರ್ಷಿಕ ಸುಮಾರು ₹600 ಕೋಟಿಯಿಂದ ₹700 ಕೋಟಿ ನಷ್ಟ ಅನುಭವಿಸುತ್ತಿದೆ. ಸವಕಳಿ ವೆಚ್ಚ ಹೊರತುಪಡಿಸಿ ಲೆಕ್ಕಾಚಾರದಲ್ಲಿ ಪ್ರಸ್ತುತ ಸುಮಾರು ₹50 ಕೋಟಿಯಿಂದ ₹60 ಕೋಟಿ ಲಾಭದಲ್ಲಿದ್ದರೂ, ನೀಲಿ ಮಾರ್ಗದ ಕಾರ್ಯಾಚರಣೆ ಆರಂಭವಾದ ನಂತರ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರಸ್ತುತ ಮೆಟ್ರೊ ಟಿಕೆಟ್ ದರ ಏರಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ದೆಹಲಿ ಮೆಟ್ರೊಗೆ ಹೋಲಿಕೆ ಮಾಡುವಾಗ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು, ಮೆಟ್ರೊ ಜಾಲದ ಉದ್ದ ಹಾಗೂ ಪ್ರಯಾಣಿಕರ ಸಂಖ್ಯೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂದು ಹೇಳಿದರು.

261125-4-443105049