ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್, ಮುಂಬರುವ IPL 2027 ಮಿನಿ ಹರಾಜಿಗೆ ಅಧಿಕೃತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಗೋವಾದಲ್ಲಿ ಡಿಸೆಂಬರ್ 16, 2026 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ಧಪಡಿಸಿರುವ ಸುಮಾರು 1,220 ಆಟಗಾರರ ಆರಂಭಿಕ ಪಟ್ಟಿಯಲ್ಲಿ ಸ್ಟೋಕ್ಸ್ ಹೆಸರು ಸೇರ್ಪಡೆಯಾಗಿದ್ದು, ಅವರು ಗರಿಷ್ಠ ₹2 ಕೋಟಿ ಮೂಲಬೆಲೆ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ರೈಸಿಂಗ್ ಪುಣೆ ಸೂಪರ್‌ಜೈಂಟ್ (2017 – ₹14.5 ಕೋಟಿ), ರಾಜಸ್ಥಾನ್ ರಾಯಲ್ಸ್ (2018-2021 – ₹12.5 ಕೋಟಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (2023 – ₹16.25 ಕೋಟಿ) ತಂಡಗಳನ್ನು ಪ್ರತಿನಿಧಿಸಿರುವ ಸ್ಟೋಕ್ಸ್, ಒಟ್ಟು 45 ಐಪಿಎಲ್ ಪಂದ್ಯಗಳಿಂದ 935 ರನ್ ಹಾಗೂ 28 ವಿಕೆಟ್ ಕಬಳಿಸಿದ್ದಾರೆ.
ಆದರೆ, 2023ರ ಬಳಿಕ (2024, 2025 ಮತ್ತು 2026) ಸ್ಟೋಕ್ಸ್ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊಣಕಾಲಿನ ಶಸ್ತ್ರಚಿಕಿತ್ಸೆ, ಫಿಟ್‌ನೆಸ್ ಸಮಸ್ಯೆ ಹಾಗೂ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅವರು 2024ರ ಆವೃತ್ತಿಯಿಂದ ಹಿಂದೆ ಸರಿದಿದ್ದರು.
ಅಲ್ಲದೆ, 2025ರ ಐಪಿಎಲ್ ಮೆಗಾ ಹರಾಜಿಗೂ ಹೆಸರು ನೋಂದಾಯಿಸದೆ ದೂರ ಉಳಿದಿದ್ದರು. ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಮೆಗಾ ಹರಾಜು ತಪ್ಪಿಸಿಕೊಂಡ ಆಟಗಾರರಿಗೆ ಮುಂದಿನ ಮಿನಿ ಹರಾಜಿನಲ್ಲಿ ಆಡಲು ನಿರ್ಬಂಧವಿರುವುದರಿಂದ 2026ರ ಆವೃತ್ತಿಯಲ್ಲೂ ಅವರಿಗೆ ಅವಕಾಶವಿರಲಿಲ್ಲ. ಇದೀಗ ವಿಶೇಷ ಅನುಮತಿಯೊಂದಿಗೆ 2027ರ ಆವೃತ್ತಿಯ ಮೂಲಕ ಮತ್ತೆ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದಾರೆ.
ಸಂಪೂರ್ಣ ಟೂರ್ನಿಗೆ ಲಭ್ಯತೆ:
ಬೆನ್ ಸ್ಟೋಕ್ಸ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ, ಅವರಿಗೆ ಇನ್ನು ಮುಂದೆ ರಾಷ್ಟ್ರೀಯ ತಂಡದ ಪಂದ್ಯಗಳ ಯಾವುದೇ ಅಡ್ಡಿಯಿಲ್ಲದೆ ಸಂಪೂರ್ಣ ಐಪಿಎಲ್ ಟೂರ್ನಿಗೆ ಲಭ್ಯವಿರಲಿದ್ದಾರೆ. ಅದರಂತೆ ಈ ಬಾರಿ ಸ್ಟೋಕ್ಸ್ ಆದರೆ ಸಂಪೂರ್ಣ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಂಬ್ಯಾಕ್ಗೆ ಸಜ್ಜು:
ಮಂಡಿರಜ್ಜು ಮತ್ತು ಮೊಣಕಾಲಿನ ಗಾಯಗಳಿಂದಾಗಿ 2024ರ ‘ದಿ ಹಂಡ್ರೆಡ್’ ಟೂರ್ನಿಯ ಬಳಿಕ ಸ್ಟೋಕ್ಸ್ ಯಾವುದೇ ಸ್ಪರ್ಧಾತ್ಮಕ ಟಿ20 ಪಂದ್ಯವನ್ನಾಡಿಲ್ಲ. ಆದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಬಿಗ್ ಬ್ಯಾಷ್ ಲೀಗ್‌ನ ಅಡಿಲೇಡ್ ಸ್ಟ್ರೈಕರ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮತ್ತೆ ಚುಟುಕು ಕ್ರಿಕೆಟ್‌ಗೆ ಮರಳುವ ಮುನ್ಸೂಚನೆ ನೀಡಿದ್ದರು. ಅದರಂತೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಫ್ರಾಂಚೈಸಿಗಳ ಹಾಟ್ ಫೇವರಿಟ್:
ಈ ಬಾರಿಯ ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಸೇರಿ ಕೇವಲ 25 ವಿದೇಶಿ ಆಟಗಾರರ ಸ್ಥಾನಗಳನ್ನು ಮಾತ್ರ ಭರ್ತಿ ಮಾಡಬೇಕಿದೆ. ಹರಾಜು ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರ ಕೊರತೆಯಿರುವುದರಿಂದ, 35 ವರ್ಷದ ಸ್ಟೋಕ್ಸ್ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿಯಷ್ಟೇ ಅಲ್ಲದೆ, ಅನುಭವಿ ನಾಯಕತ್ವದ ಆಯ್ಕೆಯಾಗಿಯೂ ತಂಡಗಳ ನಡುವೆ ಭಾರಿ ಪೈಪೋಟಿಗೆ ಕಾರಣವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ಎಬಿಡಿಯ ವಿಶ್ವ ದಾಖಲೆಯೇ ನುಚ್ಚುನೂರು!
ಒಟ್ಟಾರೆಯಾಗಿ, ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಬೆನ್ ಸ್ಟೋಕ್ಸ್ ಐಪಿಎಲ್ ಅಂಗಳಕ್ಕೆ ಮರಳುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡವಿಲ್ಲದೆ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಕಣಕ್ಕಿಳಿಯುತ್ತಿರುವ ಈ ಅನುಭವಿ ಆಲ್‌ರೌಂಡರ್‌ಗೆ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯುವ ಹರಾಜಿನಲ್ಲಿ ಯಾವ ಫ್ರಾಂಚೈಸಿ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

