ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಅವರು ಈಗ ‘ಕಿರಾತಕ’ ಚಿತ್ರದ ಸೀಕ್ವೆಲ್ ಮಾಡುವ ಆಸೆಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮುಂದುವರಿದ ಭಾಗಕ್ಕಾಗಿ ಸ್ಕ್ರಿಪ್ಟ್ ಬರೆದು ಶೂಟಿಂಗ್ ಕೂಡ ಆರಂಭಿಸಲಾಗಿತ್ತು. ಆದರೆ ಕೆಜಿಎಫ್ ಯಶಸ್ಸಿನ ಬಳಿಕ ಆ ಸಿನಿಮಾದ ಕೆಲಸ ನಿಂತು ಹೋದವು.

ಯಶ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜರ್ನಿ ಮತ್ತು ಸೀಕ್ವೆಲ್‌ಗಳ ಬಗ್ಗೆ ಮಾತನಾಡಿದ ಯಶ್, ‘ನಾನು ‘ಕಿರಾತಕ’ ಸಿನಿಮಾ ಮಾಡಿದ್ದೆ. ವಾಸ್ತವವಾಗಿ ಅದರ ಸೀಕ್ವೆಲ್ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಬರೆದಿದ್ದೆವು ಮತ್ತು ಚಿತ್ರೀಕರಣವನ್ನೂ ಆರಂಭಿಸಿದ್ದೆವು. ಅದನ್ನು ಮಾಡಲು ನನಗೆ ತುಂಬಾ ಇಷ್ಟ. ಅದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ’ ಎಂದು ಭಾವುಕರಾಗಿ ತಿಳಿಸಿದ್ದಾರೆ.

‘ಕಿರಾತಕ’ ಸಿನಿಮಾ ಹೇಗಿತ್ತು?

ಯಶ್ ಅವರ ವೃತ್ತಿಜೀವನದಲ್ಲಿ ‘ಕಿರಾತಕ’ ಚಿತ್ರ ಅತಿದೊಡ್ಡ ಗೆಲುವು ತಂದುಕೊಟ್ಟ ಸಿನಿಮಾಗಳಲ್ಲಿ ಒಂದಾಗಿದೆ. ಹಳ್ಳಿಯ ಮುಗ್ಧ ಯುವಕನೊಬ್ಬನ ಕಥೆಯನ್ನು ಇದು ಹೊಂದಿದೆ. ಕಾಮಿಡಿ ಮತ್ತು ಸೆಂಟಿಮೆಂಟ್ ಮಿಶ್ರಿತ ಕಥಾಹಂದರ ಹೊಂದಿದ್ದ ಈ ಚಿತ್ರ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸಿತ್ತು. ಯಶ್ ಅವರ ನಟನೆ ಮತ್ತು ಡೈಲಾಗ್ ಡೆಲಿವರಿ ಈ ಸಿನಿಮಾದಲ್ಲಿ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಮುಂದಿನ ನಡೆಯೇನು? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಮುಂದುವರಿದ ಭಾಗದ ನಿರೀಕ್ಷೆ

‘ಕಿರಾತಕ’ ಚಿತ್ರದ ಸೀಕ್ವೆಲ್ ಯೋಜನೆ ಈಗಾಗಲೇ ಶುರುವಾಗಿ ಅರ್ಧಕ್ಕೆ ನಿಂತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರಾಜೆಕ್ಟ್ ಮತ್ತೆ ಕೈಗೆತ್ತಿಕೊಳ್ಳುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಶ್ ಅವರ ಮನದ ಆಸೆಯಂತೆ ‘ಕಿರಾತಕ-2’ ಮತ್ತೆ ಸೆಟ್ಟೇರಲಿ ಎಂದು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಅವರು ಈ ವಿಷಯದ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.