ಬೆಂಗಳೂರು: ಬಸವಣ್ಣನನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಹಾಗೂ ‘ಬಸವ ಮಂಟಪ‘ ಪುಸ್ತಕದ ಪ್ರಕಾಶಕರೂ ಆದ ಪತ್ರಕರ್ತ ವಿಶ್ವೇಶ್ವರ ಭಟ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಇಬ್ಬರೂ ಸಲ್ಲಿಸಿರುವ ಅರ್ಜಿಗಳನ್ನು ನಗರದ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮೋಹನ್ ಪ್ರಭು ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿದ ಪ್ರಾಸಿಕ್ಯೂಷನ್ ‘ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಬಾರದು’ ಎಂದು ಮನವಿ ಮಾಡಿತು. ಅಂತಿಮವಾಗಿ ನ್ಯಾಯಾಧೀಶರು ಆದೇಶವನ್ನು ಬುಧವಾರ (ನ.25) ಪ್ರಕಟಿಸುವುದಾಗಿ ತಿಳಿಸಿದರು.
ಪ್ರಕರಣ: ರವಿ ಹಂಜ್, ‘ವಚನವೊಂದನ್ನು ಉಲ್ಲೇಖಿಸಿ ಬಸವಣ್ಣನನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಬಿಂಬಿಸಿ ಅವಹೇಳನ ಮಾಡಿರುವುದು ಹಾಗೂ ಲಿಂಗಾಯತ ಪದವನ್ನು ಲಿಂಗಾಹತ ಎಂದು ತಿರುಚಿದ ಹಾಗೂ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪ ಎದುರಿಸುತ್ತಿದ್ದರೆ, ಇವರು ಬರೆದ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕುಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪವನ್ನು ವಿಶ್ವೇಶ್ವರ ಭಟ್ ಎದುರಿಸುತ್ತಿದ್ದಾರೆ.
ಈ ಸಂಬಂಧ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ನೀಡಿರುವ ದೂರಿನ ಆಧಾರದಡಿ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಇಬ್ಬರ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 192, 196 (1), 353(2) ಹಾಗೂ 299ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

