ಬೆಂಗಳೂರು: ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಚಾಕು ಮತ್ತು ಕಠಾರಿಗಳನ್ನು ಕಳುಹಿಸಿರುವುದು, ಕಾಂಗ್ರೆಸ್ ಕಾರ್ಯಕರ್ತರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಅವರು ನೀಡಿದ್ದ ಬೆದರಿಕೆಗೆ ಪ್ರತಿಕ್ರಿಯೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಛಲವಾದ ನಾರಾಯಣಸ್ವಾಮಿ ಅವರ ಬೆದರಿಕೆ ಹಾಕಿದ ಪ್ರತಿಕ್ರಿಯೆಯಾಗಿ ಎನ್‌ಎಸ್‌ಯುಐ ಕಾರ್ಯಕರ್ತರ ಚಾಕು ಮತ್ತು ಕಠಾರಿಗಳನ್ನು ಕಳುಹಿಸಿದ್ದಾರೆ. ಆದರೆ, ಈ ಕೃತ್ಯವನ್ನು ನಾನು ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ.

ಅವರು (ನಾರಾಯಣಸ್ವಾಮಿ) ಅದನ್ನು ಕೇಳಿಕೊಂಡಿದ್ದಾರಲ್ಲವೇ? ಕಾಂಗ್ರೆಸ್‌ನವರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಹೇಳಿದ್ದರು. ಅದಕ್ಕೆ ಉಪಕರಣಗಳು ಬೇಕಲ್ಲವೇ? ನಮ್ಮನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದರೆ ಚಾಕುಗಳೂ ಬೇಕಾಗುತ್ತವೆ. ಹೀಗಾಗಿ ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರು ಅಗತ್ಯ ಕೆಲಸ ಮಾಡಿಕೊಳ್ಳಲು ಅವರಿಗೆ ಚಾಕುಗಳನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.

ಅವರು ಮಾಡಿರುವುದು ಸರಿ ಎಂದು ನಾನು ಹೇಳುತ್ತಿಲ್ಲ. ಆದರೆ, ಮೊದಲು ಮಾತನಾಡಿದ್ದು ನಾರಾಯಣಸ್ವಾಮಿ. ಅವರ ಹೇಳಿಕೆಗೆ ಇದು ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಹಿಂಸೆಗೆ ಪ್ರಚೋದನೆ ನೀಡಿದ್ದು ನಾರಾಯಣಸ್ವಾಮಿ ಎಂದು ಆರೋಪಿಸಿದ ಖರ್ಗೆ, ಕೊಲೆ ಮಾಡುವ ಬಗ್ಗೆ ಮಾತನಾಡಿದ್ದು ಬಿಜೆಪಿ ನಾಯಕನೇ ಹೊರತು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ತಿಳಿಸಿದರು.

ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಕಠಾರಿ ಹಾಗೂ ಇತರ ಮಾರಕ ವಸ್ತುಗಳನ್ನು ತ್ವರಿತ ವಾಣಿಜ್ಯ ಸೇವಾ ವೇದಿಕೆಯ ಮೂಲಕ ಕಳುಹಿಸಲು ಎನ್‌ಎಸ್‌ಯುಐ ಕಾರ್ಯಕರ್ತರು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಶನಿವಾರ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ದೇಶದಲ್ಲಿ ಅಶಾಂತಿ ಸೃಷ್ಟಿಸಿದರೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನವರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ನಾರಾಯಣಸ್ವಾಮಿ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಳಿಕ ತಮ್ಮ ಹೇಳಿಕೆ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿತ್ತೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧವಾಗಿರಲಿಲ್ಲ ಎಂದು ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಿಸುವ ಸಾಧ್ಯತೆ ಕುರಿತು ಕೇಳಿದಾಗ, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದ ಖರ್ಗೆ ಅವರು, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇಂತಹ ಹೇಳಿಕೆಗಳನ್ನು ಕರ್ನಾಟಕ ಸಹಿಸುವುದಿಲ್ಲ ಎಂದು ಹೇಳಿದರು.

ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ. ಮನಸ್ಸಿಗೆ ಬಂದಂತೆ ಮಾತನಾಡಿ ಯಾವುದೇ ಕಾನೂನು ಕ್ರಮ ಎದುರಿಸಬೇಕಾಗಿಲ್ಲ ಎಂದು ಭಾವಿಸಿದರೆ ಅದು ಉತ್ತರ ಪ್ರದೇಶ ಅಥವಾ ಗುಜರಾತ್‌ನಲ್ಲಿ ನಡೆಯಬಹುದೇನೋ, ಆದರೆ, ಕರ್ನಾಟಕದಲ್ಲಿ ಸಾಧ್ಯವಿಲ್ಲ" ಎಂದರು.

ಚಾಕುಗಳನ್ನು ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕೇಳಿದಾಗ, ದೂರು ನೀಡಲಾಗಿದೆ, ನೋಡೋಣ. ನಾರಾಯಣಸ್ವಾಮಿ ವಿರುದ್ಧವೂ ದೂರು ಇದೆ. ಮೊದಲು ಘಟನೆಗಳ ಕಾಲಾನುಕ್ರಮವನ್ನು ನೋಡೋಣ ಎಂದು ಹೇಳಿದರು.

ನವೆಂಬರ್ 10ರಂದು 18ನೇ ಶತಮಾನದ ಮೈಸೂರು ಸಂಸ್ಥಾನದ ಆಡಳಿತಗಾರ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಅಂಗವಾಗಿ ಟಿಪ್ಪು ಜಯಂತಿ ಆಚರಣೆಯನ್ನು ಮತ್ತೆ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ವರದಿಗಳು ಹಾಗೂ ಬಿಜೆಪಿಯ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಬಿಜೆಪಿ ಇತಿಹಾಸವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಮೊದಲು ತನ್ನ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಟಿಪ್ಪು ಸುಲ್ತಾನ್ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೋರಾಡಿದ್ದರು. ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಅಸಹಕಾರ ಚಳವಳಿ, ನಾಗರಿಕ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ದಂಡಿ ಯಾತ್ರೆ ಅಥವಾ ದುಂಡುಮೇಜಿನ ಸಭೆಗಳಲ್ಲಿ ಅವರು ಪಾಲ್ಗೊಂಡಿರಲಿಲ್ಲ. ಅವರು ಏನನ್ನೂ ಮಾಡಿಲ್ಲ. ಈಗ ಅವರೇ ಎಲ್ಲರಿಗೂ ನಿರ್ದೇಶನ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಟಿಪ್ಪು ಸುಲ್ತಾನ್ ಅವರನ್ನು ಪುಸ್ತಕವೊಂದರಲ್ಲಿ ಹೊಗಳಿದ್ದರು ಎಂದು ಖರ್ಗೆ ಪ್ರತಿಪಾದಿಸಿದರು.

ರಾಜ್ಯಕ್ಕೆ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆಗಳನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಇದೆಲ್ಲವೂ ರಾಜಕೀಯ. ಮತ ಬೇಕಾದಾಗ ಅಲ್ಪಸಂಖ್ಯಾತರ ಪರ ಮಾತನಾಡುತ್ತಾರೆ, ಬೇಡವಾದಾಗ ಈ ರೀತಿ ವರ್ತಿಸುತ್ತಾರೆ ಎಂದು ಟೀಕಿಸಿದರು.

ಸರ್ಕಾರ ಮತ್ತೆ ಟಿಪ್ಪು ಜಯಂತಿ ಆಚರಣೆಗೆ ಪರಿಗಣಿಸಲಿದೆಯೇ ಎಂಬ ಪ್ರಶ್ನೆಗೆ, ಈ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ ಎಂದು ಹೇಳಿದರು.

ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ಅವರು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೋರಾಡಿದ್ದು ದಾಖಲೆಯಲ್ಲಿರುವ ಸತ್ಯ. ಬ್ರಿಟಿಷರು ಟಿಪ್ಪು ಸುಲ್ತಾನ್ ಅವರನ್ನು ಕಂಡು ಭಯಪಡುತ್ತಿದ್ದರು ಎಂಬುದೂ ದಾಖಲೆಯಲ್ಲಿದೆ. ಈ ಸತ್ಯವನ್ನು ನಾನಾಗಲಿ, ಬಿಜೆಪಿಯಾಗಲಿ ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ಕೊಡುಗೆಗಳನ್ನು ಉಲ್ಲೇಖಿಸಿದ ಅವರು, ಲಾಲ್‌ಬಾಗ್ ಮತ್ತು ನಂದಿ ಬೆಟ್ಟದ ಬಗ್ಗೆಯೂ ಪ್ರಸ್ತಾಪಿಸಿದರು. ಲಾಲ್‌ಬಾಗ್ ಉದ್ಯಾನವನ್ನು ಟಿಪ್ಪು ಅವರ ತಂದೆ ಹೈದರ್ ಅಲಿ ಸ್ಥಾಪಿಸಿದ್ದು, ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು ಎಂದು ಹೇಳಿದರು.

ಎಲ್ಲರೂ ಲಾಲ್‌ಬಾಗ್ ಅನ್ನು ಹೊಗಳುತ್ತಾರೆ. ಅದನ್ನು ನಿರ್ಮಿಸಿದ್ದು ಯಾರು? ಅವರ ತಂದೆ ಹೈದರ್ ಅಲಿ. ಟಿಪ್ಪು ಸುಲ್ತಾನ್ ಅದನ್ನು ಅಭಿವೃದ್ಧಿಪಡಿಸಿದರು. ಹಾಗಾದರೆ ಅದನ್ನು ಸುಟ್ಟು ಹಾಕುತ್ತೀರಾ? ನಂದಿ ಬೆಟ್ಟಕ್ಕೆ ಹೋಗುತ್ತೀರಲ್ಲ, ಅಲ್ಲಿ ಕೋಟೆಯಿದೆ. ಅದನ್ನೂ ತೆಗೆದುಹಾಕುತ್ತೀರಾ? ಇವು ಅಳಿಸಲಾಗದ ಐತಿಹಾಸಿಕ ಸತ್ಯಗಳು. ಬಿಜೆಪಿಯವರು ಸರಿಯಾದ ಇತಿಹಾಸ ಓದುವ ಅಭ್ಯಾಸ ಹೊಂದಿಲ್ಲ. ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಲ್ಲಿ ಸಿಗುವುದನ್ನೇ ಓದುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥೆ ಕುರಿತು ಬಿಜೆಪಿ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಆತ್ಮಕಥೆ ಎಂಬುದು ವ್ಯಕ್ತಿಯ ಸ್ವಂತ ಅನುಭವಗಳು ಮತ್ತು ಅಭಿಪ್ರಾಯಗಳ ದಾಖಲೆಯಾಗಿದೆ ಎಂದರು.

ಅವರಿಗೆ ಇದರ ಬಗ್ಗೆ ಯಾಕೆ ಇಷ್ಟೊಂದು ಕಳವಳ? ಅದೊಂದು ಆತ್ಮಕಥೆ. ಅದು ಅವರ ಆಲೋಚನೆಗಳು ಮತ್ತು ಅವರ ಬದುಕಿನ ಕಥೆ. ಅದರಲ್ಲಿ ನಿಮಗೆ ಸಮಸ್ಯೆಯಿದ್ದರೆ ಅದನ್ನು ನೀವೇ ಎದುರಿಸಿ. ಬಿಜೆಪಿ ಈ ಪುಸ್ತಕವನ್ನು ಕೆಟ್ಟ ದೃಷ್ಟಿಕೋನದಿಂದ ನೋಡಲಿದೆ. ಅದಕ್ಕೆ ಕೋಮು ಬಣ್ಣ ಬಳಿದು ತಪ್ಪು ಹುಡುಕಲಿದೆ. ಮುಂದಿನ ಒಂದು ತಿಂಗಳು ಅವರು ಇದರ ಬಗ್ಗೆಯೇ ಮಾತನಾಡುತ್ತಾರೆ. ಅವರ ಬಳಿ ಬೇರೆ ಯಾವುದೇ ವಿಷಯವಿಲ್ಲ ಎಂದು ಹೇಳಿದರು.

ಅದು ಅವರ ದೃಷ್ಟಿಕೋನ. ಬಿಜೆಪಿಯ ಅಭಿಪ್ರಾಯಗಳ ಆಧಾರದ ಮೇಲೆ ನಾನು ನನ್ನ ಆತ್ಮಕಥೆ ಬರೆಯಲು ಸಾಧ್ಯವಿಲ್ಲ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನಾನು ದಾಖಲಿಸುತ್ತೇನೆ. ಅದರಲ್ಲಿ ನಿಮಗೆ ಸಮಸ್ಯೆಯಿದ್ದರೆ ಅದು ನಿಮ್ಮ ಸಮಸ್ಯೆ, ನನ್ನದಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.