ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಗಾಗಿ 473 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಜನರ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇವಲ ಮೂರು ವರ್ಷಗಳಲ್ಲಿ ಜಾಹೀರಾತುಗಳಿಗಾಗಿ ಬರೋಬ್ಬರಿ 473 ಕೋಟಿ ರೂ. ಖರ್ಚು ಮಾಡಿದೆ ಎನ್ನಲಾಗಿದೆ. ಅಂದರೆ ಪ್ರತಿದಿನ 43 ಲಕ್ಷ ರೂ.ಗೂ ಹೆಚ್ಚು ಹಣವನ್ನು ರಸ್ತೆ ನಿರ್ಮಾಣ, ಉದ್ಯೋಗ ಸೃಷ್ಟಿ ಅಥವಾ ರೈತರ ನೆರವಿಗೆ ಬಳಸದೆ, ತನ್ನದೇ ವರ್ಚಸ್ಸು ಹೆಚ್ಚಿಸಿಕೊಳ್ಳಲು ವ್ಯಯಿಸಿದೆ. ಆಡಳಿತದಲ್ಲಿ ವಿಫಲವಾಗಿದ್ದರೂ ಪ್ರಚಾರದ ಕಲೆಯಲ್ಲಿ ಈ ಸರ್ಕಾರ ಪರಿಣತಿ ಸಾಧಿಸಿದೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಜಯೇಂದ್ರ ಅವರು, ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರದ ಉತ್ತರವೆಂದರೆ 'ಹೆಚ್ಚಿನ ಜಾಹೀರಾತು, ಮತ್ತಷ್ಟು ಸ್ವಪ್ರಚಾರ ಮತ್ತು ಹೆಚ್ಚು ಸಬೂಬುಗಳು ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಾಜಧಾನಿಯನ್ನೇ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ತೋರಿಸುತ್ತಿವೆ. ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಈಗಿನ ರೈತರು 9 ತಿಂಗಳು ಕುಡಿದುಕೊಂಡು, ಇಸ್ಪೀಟು ಆಡ್ತಾ ಟೈಂಪಾಸ್ ಮಾಡ್ತಾರೆ! ವಿವಾದಕ್ಕೆ ಗುರಿಯಾದ ಬಿಜೆಪಿ ಸಂಸದ!

ಬಳಿಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಟೀಕಿಸಿರುವ ಅವರು, ಸರ್ಕಾರದ ಅತಿದೊಡ್ಡ ಸಾಧನೆ ಎಂದು ಬಿಂಬಿಸಲಾಗಿದ್ದ ಈ ಯೋಜನೆಗಳು ಈಗ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಅವುಗಳನ್ನು ಮುಂದುವರಿಸುವುದೂ ಕಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಜನರು ಇದಕ್ಕಾಗಿಯೇ ಮತ ಹಾಕಿದ್ದಾರೆಯೇ? ಪ್ರತಿ ದಿನಪತ್ರಿಕೆಯ ಪುಟದಲ್ಲೂ ಮುಖ್ಯಮಂತ್ರಿಯವರ ಫೋಟೋ ಕಾಣಿಸಿಕೊಳ್ಳಬೇಕೆಂದು ಜನರು ಕೇಳುತ್ತಿಲ್ಲ. ಉತ್ತಮ ರಸ್ತೆಗಳು, ಕೈಗೆಟುಕುವ ಜೀವನ ವೆಚ್ಚ, ಮಕ್ಕಳಿಗೆ ಉದ್ಯೋಗ, ಗುತ್ತಿಗೆದಾರರಿಗೆ ಸಕಾಲದಲ್ಲಿ ಬಾಕಿ ಪಾವತಿ ಮತ್ತು ರೈತರಿಗೆ ನೈಜ ನೆರವು ಬೇಕೆಂದು ಕೇಳುತ್ತಿದ್ದಾರೆ" ಎಂದು ಬರೆದಿದ್ದಾರೆ.

ಸಾರ್ವಜನಿಕರ ಹಣವನ್ನು ಜನರ ಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ರಾಜಕೀಯ ಸ್ವಪ್ರಚಾರಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಮತ್ತು ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹೊರಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.