ಬೆಂಗಳೂರು, ನವೆಂಬರ್ 11: ಸಾಮಾಜಿಕ ಜಾಲತಾಣದಲ್ಲಿ ಎಐ ಮೂಲಕ ಎಡಿಟ್ ಮಾಡಲಾದ ಫೋಟೋ ಹಂಚಿಕೊಂಡ ಆರೋಪದ ಮೇಲೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದ್ದಾರೆ. ಬಿಹಾರ ಮತ್ತು ಹರಿಯಾಣದಲ್ಲಿ ನಡೆದ ಭಾರೀ ಪ್ರಮಾಣದ ಮದ್ದುಗುಂಡು ವಶ ಪ್ರಕರಣದಲ್ಲಿ ಆರ್‌ಎಸ್‌ಎಸ್ ನಂಟಿನ ಬಗ್ಗೆ ಪ್ರಶ್ನಿಸಿ ಅವರು ಹಂಚಿಕೊಂಡಿದ್ದ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಮೂಲ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿದ್ದರೆ, ಎಡಿಟ್ ಮಾಡಿದ ಚಿತ್ರದಲ್ಲಿ ಇತರರನ್ನೂ ಅದೇ ಸಮವಸ್ತ್ರದಲ್ಲಿ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

AI ಫೋಟೋ ಮೂಲಕ RSS ಹೆಸರು ಎಳೆದು ತಂದ ಆರೋಪ!

ಪ್ರಿಯಾಂಕ್ ಖರ್ಗೆ ನವೆಂಬರ್ 10ರಂದು ತಮ್ಮ ಎಕ್ಸ್ ಖಾತೆಯಲ್ಲಿ ಕಾರ್ಟ್ರಿಡ್ಜ್ ವಶ ಪ್ರಕರಣದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಅಂತರರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಕೆಲವರು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಬಗ್ಗೆ ವರದಿಗಳು ಮತ್ತು ಫೋಟೋಗಳಿವೆ ಎಂದು ಉಲ್ಲೇಖಿಸಿದ್ದರು. ಆದರೆ ವೈರಲ್ ಆಗಿರುವ ಫೋಟೋವನ್ನು ಪರಿಶೀಲಿಸಿದ ವರದಿಗಳ ಪ್ರಕಾರ, ಮೂಲ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿದ್ದರೆ, ನಂತರದ ಚಿತ್ರದಲ್ಲಿ ಇತರರನ್ನೂ ಅದೇ ರೀತಿಯಲ್ಲಿ ತೋರಿಸಲಾಗಿದೆ. ಈ ಬದಲಾವಣೆಗೆ AI ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಖರ್ಗೆ ಪೋಸ್ಟ್​ಗೆ ನೆಟ್ಟಿಗರು ಗರಂ!

ಖರ್ಗೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಮನಹರಿಸುವ ಬದಲು ಅನಗತ್ಯವಾಗಿ ಆರ್‌ಎಸ್‌ಎಸ್‌ ವಿಚಾರವನ್ನು ಪ್ರಸ್ತಾಪಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯೋತ್ಪಾದಕನೊಂದಿಗೆ ಕೈಕುಲುಕಿದ ಉದಾಹರಣೆಯನ್ನು ಮುಂದಿಟ್ಟುಕೊಂಡು, ಇದೇ ತರ್ಕವನ್ನು ಅನ್ವಯಿಸಿದರೆ ಅದಕ್ಕೆ ಖರ್ಗೆ ಏನು ಉತ್ತರ ನೀಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಖರ್ಗೆ ಅವರೇ ಈಗ ತಪ್ಪು ಮಾಹಿತಿ ಹರಡುತ್ತಿದ್ದಾರೆಯೇ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

@PriyankKharge You have no serious issues to discuss, yet you unnecessarily bring up the RSS. Instead, focus on the law and order situation in our state. Following your reasoning, why did former Prime Minister Manmohan Singh shake hands with a terrorist? Please answer, Sir. https://t.co/AszDZj49Wc

— @ಸ್ವಾಭಿಮಾನಿ ಹಿಂದೂ (@maheshsmysuru) November 10, 2026

ಇನ್ನೊಬ್ಬರು, ಜವಾಬ್ದಾರಿಯುತ ಗೃಹಮಂತ್ರಿಯ ಸ್ಥಾನದಲ್ಲಿರುವವರು ಎಐ ಮೂಲಕ ಸೃಷ್ಟಿಸಲಾದ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆರ್‌ಎಸ್‌ಎಸ್‌ ವಿರುದ್ಧ ಆರೋಪ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕಿತ್ತು. ಗೃಹಮಂತ್ರಿಯ ಆದ್ಯತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿರಬೇಕು; ಆಧಾರರಹಿತ ಆರೋಪಗಳ ಮೂಲಕ ರಾಜಕೀಯ ಪ್ರಚಾರ ಮಾಡುವುದಲ್ಲ ಎಂದು ಕಾಮೆಂಟ್‌ಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಒಬ್ಬ ಜವಾಬ್ದಾರಿಯುತ ಗೃಹಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿ AI ಮೂಲಕ ಸೃಷ್ಟಿಸಲಾದ ಚಿತ್ರವೊಂದನ್ನು ಹಿಡಿದುಕೊಂಡು, ಅದರ ಆಧಾರದಲ್ಲಿ RSS ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲು ಮುಂದಾಗಿರುವುದು ನಿಜಕ್ಕೂ ಖಂಡನೀಯ!

ಗೃಹಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವ ಪ್ರತಿಯೊಂದು ಮಾತಿಗೂ ಸಾಕ್ಷ್ಯ, ಸತ್ಯಾಂಶ ಮತ್ತು ಹೊಣೆಗಾರಿಕೆ ಇರಬೇಕು. AI ಚಿತ್ರವನ್ನು ಹಿಡಿದುಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುವುದು ಯಾವ ರೀತಿಯ ರಾಜಕೀಯ ಜವಾಬ್ದಾರಿ?

ಆರೋಪ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸುವ ಕನಿಷ್ಠ ಪ್ರಜ್ಞೆಯೂ ಬೇಡವೇ?

RSS ಮೇಲೆ ಆರೋಪ ಮಾಡುವುದೇ ನಿಮ್ಮ ರಾಜಕೀಯ ಅಜೆಂಡಾ ಆಗಿದ್ದರೆ, ಅದಕ್ಕೆ ಜನರು ಮರುಳಾಗುತ್ತಾರೆ ಎಂದು ಭಾವಿಸಬೇಡಿ. ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ಚಿತ್ರಗಳನ್ನು ಸೃಷ್ಟಿಸುವುದು ಸುಲಭ. ಆದರೆ ಆ ಚಿತ್ರವನ್ನೇ ಸತ್ಯವೆಂದು ಬಿಂಬಿಸಿ ಜನರನ್ನು ದಾರಿ ತಪ್ಪಿಸುವುದು ಅತ್ಯಂತ ಬೇಜವಾಬ್ದಾರಿಯ ಕೆಲಸ.

ಗೃಹಮಂತ್ರಿಯ ಕೆಲಸ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧಿಗಳನ್ನು ಪತ್ತೆಹಚ್ಚುವುದು ಮತ್ತು ಜನರಿಗೆ ಭದ್ರತೆ ಒದಗಿಸುವುದು. ಹೊರತು ಆಧಾರರಹಿತ ಆರೋಪಗಳ ಮೂಲಕ ರಾಜಕೀಯ ಪ್ರಚಾರ ಮಾಡುವುದು ಅಲ್ಲ.

ನೆನಪಿರಲಿ, ಸುಳ್ಳಿಗೆ ರಾಜಕೀಯ ಬಣ್ಣ ಹಚ್ಚಬಹುದು, ಆದರೆ ಅದನ್ನು ಸತ್ಯವನ್ನಾಗಿ ಮಾಡಲು ಸಾಧ್ಯವಿಲ್ಲ!

ಪ್ರಶ್ನೆ RSS ಮೇಲಿನ ಆರೋಪದ ಬಗ್ಗೆ ಮಾತ್ರವಲ್ಲ; ಗೃಹಮಂತ್ರಿಯ ಕುರ್ಚಿಯ ಘನತೆ ಮತ್ತು ಜವಾಬ್ದಾರಿಯ ಬಗ್ಗೆಯೂ ಇದೆ.

ಸಾಕ್ಷ್ಯವಿದ್ದರೆ ತನಿಖೆ ಮಾಡಿ, ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಿ!

#Accountability
#TruthMatters
#RSS
#ResponsiblePolitics

— 𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺) (@Gururaj1972) November 10, 2026

ತೇಜಸ್ವಿ ಸೂರ್ಯ ವಾಗ್ದಾಳಿ, ರಾಜೀನಾಮೆಗೆ ಆಗ್ರಹ

ಈ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕದ ಗೃಹ ಸಚಿವರೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ನವೆಂಬರ್ 10ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ