ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯಸ್ಥೆ ಕಾವ್ಯಾ ಮಾರನ್ ಅವರ ವಿವಾಹ ಮಹೋತ್ಸವವು ಗ್ರೀಸ್ ದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಆರಂಭವಾಗಿದೆ. ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು ಈ ಭವ್ಯ ಮದುವೆಗೆ ಸಾಕ್ಷಿಯಾಗಲು ಗ್ರೀಸ್‌ಗೆ ಪಯಣ ಬೆಳೆಸಿದ್ದಾರೆ.

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ಅವರು ರಜನಿಕಾಂತ್ ಅವರ ಸಹೋದರಿಯ ಮಗನಾಗಿದ್ದು, ಈ ಕುಟುಂಬದ ಮದುವೆಯಲ್ಲಿ ರಜನಿಕಾಂತ್ ಉಪಸ್ಥಿತಿ ವಿಶೇಷ ಗಮನ ಸೆಳೆದಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕೂಡ ಗ್ರೀಸ್ ಮದುವೆಗಾಗಿ ಚೆನ್ನೈನಿಂದ ಹೊರಟಿದ್ದಾರೆ. ದುಬೈ ಮಾರ್ಗವಾಗಿ ಗ್ರೀಸ್‌ಗೆ ತೆರಳಲಿರುವ ಈ ನಾಯಕರು ಇಂದು (ನವೆಂಬರ್ 11) ಬುಧವಾರ ನಡೆಯಲಿರುವ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ

ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ಆಪ್ತರು ಹಾಗೂ ಅತಿರಥ ಮಹಾರಥರ ಸಮಕ್ಷಮದಲ್ಲಿ ಈ ಮದುವೆ ನಡೆಯಲಿದೆ. ಇದರ ನಂತರ ನವೆಂಬರ್ 21 ರಂದು ಚೆನ್ನೈನಲ್ಲಿ ಗಣ್ಯರಿಗಾಗಿ ಅತ್ಯಂತ ಭವ್ಯವಾದ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿದೆ.

Maapillai veedu – Thalaivar off to Greece to #Anirudh wedding❤️‍🔥 https://t.co/J7woyMa0La

— Vikki | #CinemaMeter🎬 (@CinemaMeterOff) November 9, 2026

ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ರಾಜಕೀಯ ನಾಯಕರಿಗೆ ಖುದ್ದಾಗಿ ಆಹ್ವಾನ ನೀಡಲಾಗಿದೆ. ಸಿನಿಮಾದ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಚೆನ್ನೈ ಆರತಕ್ಷತೆಯಲ್ಲಿ ಬಹುತೇಕ ಗಣ್ಯರು ಹಾಜರಿ ಹಾಕುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.