ವೇರುಪೇಟೆಯ ವ್ಯವಹಾರ ಈಗ ಸುಲಭವಾಗಿದೆ. ಮೊಬೈಲ್, ಕಂಪ್ಯೂಟರ್ ಇದ್ದರೆ ಸಾಕು. ಒಂದು ಬ್ರೋಕರೇಜ್ ಆ್ಯಪ್ ಲಾಗಿನ್ ಮಾಡಿಕೊಂಡು ಇದ್ದಲ್ಲಿಂದಲೇ ಷೇರು ಖರೀದಿ, ಮಾರಾಟ, ಮ್ಯೂಚುವಲ್ ಫಂಡ್ ಹೂಡಿಕೆ, ಐಪಿಒ ಇವೇ ಮುಂತಾದ ಷೇರುಪೇಟೆ ವ್ಯವಹಾರ ಮಾಡಬಹುದು.
ಆದರೆ, ಹಿಂದೆ ಆಗಿರಲಿಲ್ಲ. ಷೇರು ಖರೀದಿಸಲು ಗ್ರಾಹಕರು, ಬ್ರೋಕರೇಜ್ ಸಂಸ್ಥೆಗಳಿಗೆ ಎಡತಾಕಬೇಕಿತ್ಯು. ಜೊತೆಗೆ, ದುಬಾರಿ ಶುಲ್ಕ ಬೇರೆ. ಆದರೆ ಈ ವ್ಯವಸ್ಥೆಯನ್ನೇ ಬದಲಿಸುವ ಪ್ರಯತ್ನಕ್ಕೆ ಕೈಹಾಕಿದ ರಾಜ್ಯದ ಇಬ್ಬರು ಸಹೋದರರು ಇಂದು ಭಾರತದ ಷೇರುಪೇಟೆಯ ಪ್ರಮುಖ ಉದ್ಯಮಿಗಳಾಗಿ ಬೆಳೆದಿದ್ದಾರೆ. ಅವರೇ ಝೆರೋಧಾ(Zerodha) ಬ್ರೋಕರೇಜ್ ಸಂಸ್ಥೆಯ ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್.
2010ರ ಆಗಸ್ಟ್ 15ರಂದು ಝೆರೋಧಾ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿತ್ತು. ಅಂದಿನ ಬ್ರೋಕರೇಜ್ ವ್ಯವಸ್ಥೆಯಲ್ಲಿದ್ದ ಹಲವು ಸಮಸ್ಯೆಗಳು, ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿದ್ದ ನಿತಿನ್ ಕಾಮತ್ ಕಣ್ಣಿಗೆ ಬಿದ್ದಿದ್ದವು. ಗ್ರಾಹಕ ಸೇವೆಯ ಕೊರತೆ, ಹೆಚ್ಚಿನ ಬ್ರೋಕರೇಜ್ ಶುಲ್ಕ ಮತ್ತು ತಾಂತ್ರಿಕ ದೋಷಗಳು ವ್ಯಾಪಕವಾಗಿದ್ದವು. ಇದರಿಂದ ಹೂಡಿಕೆದಾರರು ಪರಿತಪಿಸುತ್ತಿದ್ದದ್ದನ್ನು ಗಮನಿಸಿದ್ದ ನಿತಿನ್ ಕಾಮತ್, ಸಹೋದರ ನಿಖಿಲ್ ಜೊತೆ ಸೇರಿ ಬ್ರೋಕರೇಜ್ ಸಂಸ್ಥೆ ಆರಂಭಿಸುವತ್ತ ಹೆಜ್ಜೆ ಇಟ್ಟರು.
ಹೂಡಿಕೆದಾರರ ಸಮಸ್ಯೆ ಬಗೆಹರಿಸುವುದೇ ಮೂಲ ಉದ್ದೇಶ
ಗ್ರಾಹಕರ ಸಮಸ್ಯೆ ಬಗೆಹರಿಸಲೆಂಬ ಉದ್ದೇಶದಿಂದಲೇ ಆರಂಭವಾದ ಸಂಸ್ಥೆಗೆ ಉದ್ದೇಶಕ್ಕೆ ತಕ್ಕಂತ ಹೆಸರು ಇಡಲು ನಿರ್ಧರಿಸಿದ್ದರು. ಅದರಂತೆ, ಝೆರೋಧಾ ಎಂದು ನಾಮಕರಣ ಮಾಡಿದರು. ಝೆರೋಧಾ ಎಂಬ ಹೆಸರು Zero ಮತ್ತು ಸಂಸ್ಕೃತದ ‘ರೋಧ’ (ಅಡೆತಡೆ) ಪದಗಳ ಸಂಯೋಜನೆಯಾಗಿದೆ. ಶೂನ್ಯ ಸಮಸ್ಯೆ ಎಂಬ ಅರ್ಥವನ್ನು ಇದು ಕೊಡುತ್ತದೆ.
ಅಗ್ಗದ ಬ್ರೋಕರೇಜ್
ಹೂಡಿಕೆದಾರರಿಗೆ ಷೇರುಪೇಟೆಯಲ್ಲಿ ಎದುರಾಗುತ್ತಿದ್ದ ಅಧಿಕ ವೆಚ್ಚ, ತೊಡಕುಗಳನ್ನು ನಿವಾರಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ಅಂದಿನ ಬ್ರೋಕರೇಜ್ ಸಂಸ್ಥೆಗಳು ವಹಿವಾಟು ಮೌಲ್ಯದ ಆಧಾರದ ಮೇಲೆ ಶುಲ್ಕ ಹಾಕುತ್ತಿದ್ದವು. ಝೆರೋಧಾ ಸಂಸ್ಥೆಯು ಕಡಿಮೆ ವೆಚ್ಚದ ಡಿಸ್ಕೌಂಟ್ ಬ್ರೋಕರೇಜ್ ಮಾದರಿ ಪರಿಚಯಿಸಿತು. ಪ್ರತಿ ಆರ್ಡರ್ಗೆ ಗರಿಷ್ಠ ₹20 ಅಥವಾ ವಹಿವಾಟು ಮೌಲ್ಯದ ಶೇ 0.03ರಷ್ಟು ಶುಲ್ಕ ಎಂಬ ಮಾದರಿ ಗ್ರಾಹಕರ ಗಮನ ಸೆಳೆಯಿತು. ಹೂಡಿಕೆದಾರರ ಗಮನ ಇತ್ತ ಹರಿಯಿತು. ಕಡಿಮೆ ಶುಲ್ಕದ ಹಿನ್ನೆಲೆ ದೇಶದ ಕೋಟ್ಯಂತರ ಹೂಡಿಕೆದಾರರು ಝೆರೋಧಾ ಮೊರೆಹೋದರು.
ಹೊಸ ಸಂಸ್ಥೆಗೆ ಗ್ರಾಹಕರನ್ನು ಸೆಳೆಯುವುದು ಸುಲಭವಾಗಿರಲಿಲ್ಲ. ದೊಡ್ಡ ದೊಡ್ಡ ಬ್ರೋಕರೇಜ್ ಸಂಸ್ಥೆಗಳ ನಡುವೆ ಗುರುತಿಸಿಕೊಳ್ಳುವುದು ಮತ್ತೊಂದು ಸವಾಲಾಗಿತ್ತು. ಆದರೆ, ಝೆರೋಧಾ ಜಾಹೀರಾತು ಮೊರೆ ಹೋಗಲಿಲ್ಲ. ಬದಲಾಗಿ, ತನ್ನ ಸೇವೆಯ ಗುಣಮಟ್ಟ, ತಂತ್ರಜ್ಞಾನ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ವಿಶ್ವಾಸ ಗಳಿಸಿತು.
‘ಕೈಟ್’ ಆರಂಭಿಸಿ ಗ್ರಾಹಕರಿಗೆ ಮತ್ತಷ್ಟು ಸನಿಹ
2013ರ ವೇಳೆಗೆ ಸಂಸ್ಥೆ ತಂತ್ರಜ್ಞರ ತಂಡ ಕಟ್ಟಿಕೊಂಡಿತು. ಬಳಿಕ, ಷೇರು ವಹಿವಾಟಿಗೆ ಅನುಕೂಲವಾಗುವಂತೆ ‘ಕೈಟ್’ (Kite) ಎಂಬ ಡಿಜಿಟಲ್ ಟ್ರೇಡಿಂಗ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿತು. ಇದು ಈಗಲೂ ದೇಶದಲ್ಲಿ ಅತಿ ಹೆಚ್ಚು ಜನರು ಬಳಸುವ ಬ್ರೋಕರೇಜ್ ಆ್ಯಪ್ ಆಗಿದೆ. ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕವೇ ಷೇರುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಹಾಗೂ ಹೂಡಿಕೆಗಳನ್ನು ನಿರ್ವಹಿಸುವುದು ಇದರಿಂದ ಸುಲಭವಾಗಿದೆ.
ಹೂಡಿಕೆದಾರರಿಗೆ ಷೇರುಪೇಟೆಯ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ‘ವರ್ಸಿಟಿ’ (Varsity) ಎಂಬ ಉಚಿತ ಆನ್ಲೈನ್ ಶಿಕ್ಷಣ ವೇದಿಕೆಯನ್ನೂ ಪರಿಚಯಿಸಲಾಗಿದೆ.
ಹೊರಗಿನ ಹೂಡಿಕೆ ಇಲ್ಲದೆ ಬೆಳೆದ ಸಂಸ್ಥೆ
ಸ್ಟಾರ್ಟ್ಅಪ್ ಬೆಳೆಯಲು ವೆಂಚರ್ ಕ್ಯಾಪಿಟಲ್ ಮತ್ತು ಹೊರಗಿನ ಹೂಡಿಕೆಗಳನ್ನು ಅವಲಂಬಿಸುವುದು ಸಾಮಾನ್ಯ. ಆದರೆ, ಝೆರೋಧಾ ತನ್ನದೇ ಆದ ಸಂಪನ್ಮೂಲ ಆಧಾರದಲ್ಲಿ ಬೆಳೆಯುವ ಮಾರ್ಗ ಆಯ್ಕೆ ಮಾಡಿಕೊಂಡಿತ್ತು. 2020ರಲ್ಲಿ ಝೆರೋಧಾ ಒಂದು ಬಿಲಿಯನ್ ಡಾಲರ್ಗೂ ಅಧಿಕ ಮೌಲ್ಯಮಾಪನ ಹೊಂದಿದ ಯುನಿಕಾರ್ನ್ ಕಂಪನಿಯಾಗಿತ್ತು. ಈಗ ಅದರ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ
2019ರ ಜನವರಿಯಲ್ಲಿ ಭಾರತದ ಅತಿದೊಡ್ಡ ಬ್ರೋಕರೇಜ್ ಸಂಸ್ಥೆಯಾಗಿ ಹೊರಹೊಮ್ಮಿದ ಝೆರೋಧಾ, ಕ್ರಮೇಣ ತನ್ನ ಗ್ರಾಹಕರ ಸಂಖ್ಯೆಯನ್ನು ಕೋಟಿಗಳ ಮಟ್ಟಕ್ಕೆ ಹೆಚ್ಚಿಸಿಕೊಂಡಿದೆ. ಕಂಪನಿಯ ಅಧಿಕೃತ ಮಾಹಿತಿಯ ಪ್ರಕಾರ, 2026ರ ವೇಳೆಗೆ ಝೆರೋಧಾ 1.8 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಭಾರತದ ಚಿಲ್ಲರೆ ಷೇರು ವಹಿವಾಟಿನ ಶೇ 15ಕ್ಕೂ ಅಧಿಕ ಪಾಲು ಈ ಸಂಸ್ಥೆಯ ವೇದಿಕೆಗಳ ಮೂಲಕ ನಡೆಯುತ್ತದೆ.
ಉದ್ಯಾನನಗರಿಯಿಂದ ದೇಶದ ಇತರೆಡೆಗೆ
ತಂತ್ರಜ್ಞಾನ ಬಳಸಿಕೊಂಡು ಸಾಂಪ್ರದಾಯಿಕ ವಿಧಾನಗಳನ್ನು ಹೇಗೆ ಅಪ್ಡೇಟ್ ಮಾಡಬಹುದು ಎಂಬುದಕ್ಕೆ ಝೆರೋಧಾ ಉತ್ತಮ ಉದಾಹರಣೆ. ಗ್ರಾಹಕರ ಸಮಸ್ಯೆಯನ್ನು ಅವಕಾಶ ಮಾಡಿಕೊಂಡು ಬೆಳೆದ ಈ ಸಂಸ್ಥೆ ಇತರರಿಗೆ ಮಾದರಿ. ಅದರಲ್ಲೂ ಉದ್ಯಮಕ್ಕೆ ದೊಡ್ಡ ಬಂಡವಾಳವೇ ಬೇಕೆನ್ನುವವರಿಗೂ ಇದು ಪಾಠ.
ಮಾಹಿತಿ: ಝೆರೋಧಾ ಜಾಲತಾಣ ಮತ್ತು ಇತರೆ ಸುದ್ದಿ ಮೂಲಗಳು

