ಬೆಂಗಳೂರು, ನ.10; ನಮ್ಮ ಮೆಟ್ರೋ ಪ್ರಯಾಣಿಕರು ಮಲ್ಲೇಶ್ವರಂನ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದ ಬಳಿ ತೀವ್ರ ಆತಂಕ ಎದುರಿಸುತ್ತಿದ್ದಾರೆ. ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಸ್ಥಗಿತಗೊಂಡಿರುವ ಎರಡು ಬೃಹತ್ ಅಪಾರ್ಟ್ಮೆಂಟ್ ಕಾಮಗಾರಿಗಳಿಂದಾಗಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗಿದೆ. ಹಲವು ವರ್ಷಗಳಿಂದ ಕಾಮಗಾರಿ ನಿಂತು ಹೋಗಿದ್ದರಿಂದ, ಅಪಾರ್ಟ್ಮೆಂಟ್ ಕಟ್ಟಡಗಳ ಮೇಲಿರುವ ಕಬ್ಬಿಣದ ಸರಳುಗಳು, ಇಟ್ಟಿಗೆಗಳು, ಮತ್ತು ಇತರ ನಿರ್ಮಾಣ ಸಾಮಗ್ರಿಗಳು ತುಕ್ಕು ಹಿಡಿದು ಮೆಟ್ರೋ ನಿಲ್ದಾಣದ ಕಾಲುದಾರಿ ಮೇಲೆ ಬೀಳುತ್ತಿವೆ. ಈಗಾಗಲೇ ಹಲವು ಬಾರಿ ಕಲ್ಲುಗಳು ಮತ್ತು ಕಬ್ಬಿಣದ ತುಂಡುಗಳು ಬಿದ್ದಿದ್ದು, ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಪ್ರಯಾಣಿಕರ ಆತಂಕ ಮಾತ್ರ ದೂರವಾಗಿಲ್ಲ. ಮೆಟ್ರೋ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಸಾವಿರಾರು ಪ್ರಯಾಣಿಕರು ಪ್ರತಿ ದಿನ ಈ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಲ್ಲೇಶ್ವರಂ ಮೆಟ್ರೋ ಸ್ಟೇಷನ್ ಅಧಿಕಾರಿಗಳು ಮತ್ತು ಪೊಲೀಸರು ಸಂಬಂಧಪಟ್ಟ ಇಲಾಖೆಗಳಿಗೆ ಈ ಬಗ್ಗೆ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಈ ಅವ್ಯವಸ್ಥೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಯಾಣಿಕರು ಮತ್ತು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

