ಬೆಂಗಳೂರು, ನವೆಂಬರ್ 11: ನಗರದಲ್ಲಿ ದೀವಾಪವಳಿ ಸಂದರ್ಭ ಪಟಾಕಿ ಸಿಡಿತದಿಂದ ಗರ್ಭಿಣಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ 11, 14 ಮತ್ತು 9 ವರ್ಷದ ಮೂವರು ಬಾಲಕರು ಹಾಗೂ 9 ವರ್ಷದ ಬಾಲಕಿ ಸೇರಿದ್ದಾರೆ. ಜೊತೆಗೆ 21 ಮತ್ತು 27 ವರ್ಷದ ಇಬ್ಬರು ಮಹಿಳೆಯರೂ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ.
ಈ ಪೈಕಿ 21 ವರ್ಷದ ಗರ್ಭಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡಿದ್ದಾಗ ಕಿಡಿ ತಗುಲಿ, ಬಾಕ್ಸ್ನಲ್ಲಿದ್ದ ಪಟಾಕಿಗಳು ಸಿಡಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗರ್ಭಿಣಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಪಟಾಕಿ ಸಿಡಿದು ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ಮತ್ತೊಂದು ಘಟನೆಯಲ್ಲಿ ಮೂವರು ಮಕ್ಕಳ ಮುಖದ ಚರ್ಮ ಸುಟ್ಟಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಪಟಾಕಿ ಅವಘಡಗಳು ಸಂಭವಿಸುತ್ತಿವೆ. ಇದೀಗ ಮತ್ತೆ ಗರ್ಭಿಣಿ ಸೇರಿದಂತೆ ಆರು ಮಂದಿ ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಪಟಾಕಿ ಸಿಡಿಸುವ ವೇಳೆ ಮಾತ್ರವಲ್ಲದೆ, ರಸ್ತೆ ಬದಿಯಲ್ಲಿ ಸಂಚರಿಸುವವರೂ ಗಾಯಗೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಗಾಯಾಳುಗಳ ಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಎನ್.ಎ. ಯೋಗೇಶ್ವರಪ್ಪ ಮಾಹಿತಿ ನೀಡಿದ್ದಾರೆ.
ಪಟಾಕಿ ಹಚ್ಚಿದವರಿಗಿಂತ ನೋಡುತ್ತಿದ್ದವರಿಗೇ ಹೆಚ್ಚು ಅಪಾಯ!
ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವೆಡೆ ದೀಪಾವಳಿ ಪಟಾಕಿ ಅವಘಡಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವ ಬಗ್ಗೆ ಈಗಾಗಲೇ ವರದಿಯಾಗಿತ್ತು. 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಟಾಕಿ ಹಚ್ಚದವರೇ ಹೆಚ್ಚು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಹೋಗುವವರು, ನೋಡುವವರು, ಪುಟ್ಟ ಮಕ್ಕಳ ಕಣ್ಣುಗಳಿಗೆ ಪಟಾಕಿ ಕಿಡಿ ತಗುಲಿ ಗಂಭೀರ ಹಾನಿಯಾಗಿದೆ.
ಇದನ್ನೂ ಓದಿ: ಪಟಾಕಿ ಹಚ್ಚಿದವರಿಗಿಂತ ನೋಡುತ್ತಿದ್ದವರಿಗೇ ಹೆಚ್ಚು ಅಪಾಯ: ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಪ್ರಕರಣಗಳು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

