ಬೆಂಗಳೂರು, ನವೆಂಬರ್ 11: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿತದಿಂದ ಬೆಂಗಳೂರಿನ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಸತತ ಮೂರು ದಿನಗಳ ಕಾಲ ನಡೆದ ಪಟಾಕಿ ಸಿಡಿತದ ಪರಿಣಾಮ ನಗರದ ಗಾಳಿಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರಿದೆ. ವಾಯುಮಾಲಿನ್ಯ ಪ್ರಮಾಣದಲ್ಲಿ ಸುಮಾರು ಶೇ30ರಷ್ಟು ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದೆ. ಅದರಲ್ಲೂ ಕೋರಮಂಗಲ, ಸರ್ಜಾಪುರ, ಲಾಲ್‌ಬಾಗ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯ ಎದುರಾಗಿದೆ.

ಪಟಾಕಿ ಹೊಗೆಯಿಂದ ಬೆಂಗಳೂರಿನ ಗಾಳಿ ಕಲುಷಿತ

ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಹೊರಬರುವ ಹೊಗೆ, ಧೂಳು ಮತ್ತು ಸೂಕ್ಷ್ಮ ಕಣಗಳು ವಾತಾವರಣದಲ್ಲಿ ಸೇರಿಕೊಂಡಿವೆ. ಇದರ ಪರಿಣಾಮ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 180ರ ಗಡಿ ದಾಟಿದ್ದು, ಆರೋಗ್ಯದ ದೃಷ್ಟಿಯಿಂದ ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ 9ರಂದು ವಾಯು ಗುಣಮಟ್ಟ ಸೂಚ್ಯಂಕ 186ಕ್ಕೆ ತಲುಪಿರುವುದು ಮಾಲಿನ್ಯದ ತೀವ್ರತೆಯನ್ನು ತೋರಿಸುತ್ತದೆ.

ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟಿದೆ AQI?

ನಗರದ ಹಲವು ಪ್ರದೇಶಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಕೋರಮಂಗಲದಲ್ಲಿ ಅತಿ ಹೆಚ್ಚು 186 AQI ದಾಖಲಾಗಿದ್ದರೆ, ಸರ್ಜಾಪುರದಲ್ಲಿ 181, ಲಾಲ್‌ಬಾಗ್ ವೆಸ್ಟ್ ಗೇಟ್‌ನಲ್ಲಿ 179 ಹಾಗೂ ರಿಚರ್ಡ್ ಟೌನ್‌ನಲ್ಲಿ 170 ದಾಖಲಾಗಿದೆ. ಸಿಲ್ಕ್ ಬೋರ್ಡ್‌ನಲ್ಲಿ 160 ಮತ್ತು ವರ್ತೂರಿನಲ್ಲಿ 145ರಷ್ಟು ವಾಯು ಗುಣಮಟ್ಟ ಸೂಚ್ಯಂಕ ಕಂಡುಬಂದಿದೆ.

ಇನ್ನು ಬಾಣಸವಾಡಿಯಲ್ಲಿ 111, ಹೆಬ್ಬಾಳದಲ್ಲಿ 106, ಪೀಣ್ಯದಲ್ಲಿ 115 ಹಾಗೂ ಆರ್.ಆರ್. ನಗರದಲ್ಲಿ 117 AQI ದಾಖಲಾಗಿದೆ. ನಿಮ್ಹಾನ್ಸ್ ಆಸ್ಪತ್ರೆ ಡೈರಿ ಸರ್ಕಲ್, ಜಯನಗರ 5ನೇ ಹಂತ ಮತ್ತು ಬಿಟಿಎಂ ಲೇಔಟ್‌ನಲ್ಲಿ ತಲಾ 114, ಮಲ್ಲಸಂದ್ರದಲ್ಲಿ 117ರಷ್ಟು ಮಾಲಿನ್ಯ ಪ್ರಮಾಣ ವರದಿಯಾಗಿದೆ. ಉಳಿದ ಬಹುತೇಕ ಪ್ರದೇಶಗಳಲ್ಲಿ AQI 110ರಿಂದ 140ರ ನಡುವೆ ಇದೆ.

ಮಕ್ಕಳೇ, ವೃದ್ಧರೇ ಎಚ್ಚರ!

ವಾಯುಮಾಲಿನ್ಯ ಹೆಚ್ಚಳದಿಂದ ಮುಖ್ಯವಾಗಿ ಮಕ್ಕಳು, ವೃದ್ಧರು, ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡುವುದು, ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ವ್ಯಾಯಾಮ ಮಾಡದಿರುವುದು ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮಾಸ್ಕ್ ಬಳಸುವುದು ಉತ್ತಮ. ಪಟಾಕಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿದಿರುವುದು ಪರಿಸರ ಸಂರಕ್ಷಣೆಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ