ಶಿವಮೊಗ್ಗ, ನವೆಂಬರ್ 11: ದೀಪಾವಳಿ ಸಂಭ್ರಮದ ನಡುವೆಯೇ ಶಿವಮೊಗ್ಗ ಹೊರವಲಯದ ಹರಿಗೆ ಗ್ರಾಮದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಪುಡಿರೌಡಿ ನಿರಂಜನ್ ಅಲಿಯಾಸ್ ಶಕೆ ಎಂಬಾತ ಯುವತಿಯರ ಮೇಲೆ ಪಟಾಕಿ ಎಸೆದಿದ್ದಾನೆ. ಅಷ್ಟೇ ಅಲ್ಲದೆ, ರಘು ಎಂಬುವರ ಮನೆಗೆ ರಾಕೆಟ್ ಪಟಾಕಿ ಬಿಟ್ಟಿದ್ದು, ಅದು ತಗುಲಿ ಪಕ್ಕದ ಮನೆಯ ಮಹಿಳೆಗೆ ಗಾಯಗಳಾಗಿವೆ. ಘಟನೆ ಕುರಿತು ಮಾಹಿತಿ ಪಡೆದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ನಿರಂಜನ್ ಯುವತಿಯರ ಮೇಲೆ ಪಟಾಕಿ ಎಸೆದಿದ್ದಲ್ಲದೆ ಅದಕ್ಕೂ ಮುನ್ನ, ಪಟಾಕಿ ಹೊಡೆಯಬೇಡಿ ಎಂದು ಹೇಳಿದವರ ಜತೆ ಗುಂಡಾಗಿರಿ ಪ್ರದರ್ಶಿಸಿದ್ದಾನೆ. ಅಲ್ಲದೆ, ‘‘ನನ್ನನ್ನು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ, ಮೂರು ದಿನದಲ್ಲಿ ಕೊಲೆ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ನಿರಂಜನ್, ರಿತು ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ನಿರಂಜನ್ ಕಳೆದ ನಾಲ್ಕು ವರ್ಷಗಳಿಂದ ರೌಡಿಶೀಟರ್ ಆಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗಡಿಪಾರಾಗಿದ್ದರೂ ಸಹ, ಹರಿಗೆ ಬೀದಿ ಒಳಗೆ ಬಂದು ಯುವತಿಯರ ಮೇಲೆ ಪಟಾಕಿ ಬಿಸಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ದೂರು ಸ್ವೀಕರಿಸದೆ ಎಸ್‍ಪಿ ಕಚೇರಿಗೆ ಹೋಗುವಂತೆ ವಾಪಸ್ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪುಡಿರೌಡಿ ನಿರಂಜನ್ ಅನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶಿವಮೊಗ್ಗ ಎಸ್‍ಪಿ ಕಚೇರಿ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ