ಬೆಂಗಳೂರು, ನವೆಂಬರ್ 11: ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಸುಳಿವು ಹೊರಬಿದ್ದಿದೆ. ಕೊಲೆ ಬಳಿಕ ಕುಟುಂಬದ ಸದಸ್ಯರ ಮೊಬೈಲ್‌ಗಳಿಗೆ ಬರುತ್ತಿದ್ದ ಕರೆಗಳಿಗೆ ಆರೋಪಿ ಉತ್ತರಿಸುತ್ತಿದ್ದ ಸಂಗತಿ ಈಗಾಗಲೇ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಸಂಬಂಧಿಕರೊಂದಿಗೆ ಬಾಲಕ ಯತಿನ್ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಅಪ್ಪ-ಅಮ್ಮ ಎಲ್ಲಿ ಎಂದು ಸಂಬಂಧಿಕರು ಪ್ರಶ್ನಿಸಿದಾಗ, ಅವರನ್ನು ನಂಬಿಸಲು ಟ್ರಿಪ್‌ಗೆ ಬಂದಿರುವುದಾಗಿ ಬಾಲಕನಿಂದ ಹೇಳಿಸಲಾಗಿದೆ. ಈ ಆಡಿಯೋ ಪ್ರಕರಣದ ಕ್ರೌರ್ಯವನ್ನು ಮತ್ತಷ್ಟು ಬಯಲು ಮಾಡಿದೆ.

ಸಂಬಂಧಿಕರ ಕರೆಗಳಿಗೆ ಬಾಲಕನಿಂದ ಉತ್ತರ

ರಾಜಾಜಿನಗರದಲ್ಲಿ ಏಳು ಮಂದಿಯ ಹತ್ಯೆ ನಡೆದ ಬಳಿಕ ಆರೋಪಿ ಇಂದುಶೇಖರ್ ಮೃತರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಂಬಂಧಿಕರು ಕರೆ ಮಾಡಿದಾಗ, ಅನುಮಾನ ಬಾರದಂತೆ ಆರೋಪಿ ತಾನೇ ಉತ್ತರಿಸುತ್ತಿದ್ದ. ಕೆಲವೊಮ್ಮೆ ಬಾಲಕರ ಕೈಗೆ ಫೋನ್ ಕೊಟ್ಟು ಮಾತನಾಡಿಸುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.

ಶಿವಕುಮಾರ್ ಮತ್ತು ದಿವ್ಯ ದಂಪತಿಯ ಹತ್ಯೆಯ ಬಳಿಕ ಅವರ ಪುತ್ರ ಪುನೀತ್‌ನನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಆರೋಪಿ, ಆತನ ಮೂಲಕವೂ ಕರೆಗಳಿಗೆ ಉತ್ತರ ಕೊಡಿಸಿದ್ದ ಎನ್ನಲಾಗಿದೆ. ಬಳಿಕ ಆ ಬಾಲಕನನ್ನೂ ಹತ್ಯೆ ಮಾಡಿದ್ದ. ಇದೇ ರೀತಿ ಶಂಕರ್ ಮತ್ತು ನಳಿನಿ ದಂಪತಿಯ ಹತ್ಯೆಯ ನಂತರ ಅವರ ಪುತ್ರ ಯತಿನ್‌ನನ್ನು ತನ್ನೊಂದಿಗೆ ಕರೆದೊಯ್ದು ಸಂಬಂಧಿಕರ ಕರೆಗಳಿಗೆ ಮಾತನಾಡಿಸಿದ್ದಾನೆ.

ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ ಎಂದ ಬಾಲಕ!

ಸದ್ಯ ಬಹಿರಂಗವಾಗಿರುವ ಆಡಿಯೋದಲ್ಲಿ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವುದು ಕೇಳಿಬಂದಿದೆ. ಈ ವೇಳೆ ಸಂಬಂಧಿಕರು ನಳಿನಿ ಜೊತೆ ಒಮ್ಮೆಯಾದರೂ ಮಾತನಾಡಿಸು, ಸಮಾಧಾನವಾಗುತ್ತದೆ ಎಂದು ಮನವಿ ಮಾಡಿದ್ದಾರೆ. ನಳಿನಿಯ ತಾಯಿ ತುಂಗಮ್ಮ ಅವರು ತುಂಬಾ ಕುಗ್ಗಿಹೋಗಿದ್ದಾರೆ, ಅವರ ಬಳಿಯಾದರೂ ಮಾತನಾಡಿಸು ಎಂದು ಕೇಳಿಕೊಂಡಿದ್ದಾರೆ.

ಆದರೆ ಯತಿನ್, ತಾವು ಟ್ರಿಪ್‌ಗೆ ಬಂದಿರುವುದಾಗಿ, ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ, ಬಸ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾನೆ. ಅಲ್ಲದೆ, ಟ್ರಿಪ್ ಮುಗಿಸಿ ಬರಲು ಮೂರು ತಿಂಗಳು ಬೇಕಾಗುತ್ತದೆ ಎಂದೂ ಹೇಳಿದ್ದಾನೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ತಾನು ಹೋಗಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.

ಪುನೀತ್ ಕೂಡ ನಮ್ಮ ಜೊತೆ ಇದ್ದಾನೆ ಎಂದಿದ್ದ ಯತಿನ್

ಇದೇ ಮಾತುಕತೆಯಲ್ಲಿ ಸಂಬಂಧಿಕರು ಪುನೀತ್ ಬಗ್ಗೆಯೂ ವಿಚಾರಿಸಿದ್ದಾರೆ. ಅದಕ್ಕೆ ಪುನೀತ್ ಕೂಡ ನಮ್ಮ ಜೊತೆ ಇದ್ದಾನೆ, ಎಲ್ಲರೂ ಬಸ್‌ನಲ್ಲಿದ್ದೇವೆ ಎಂದು ಯತಿನ್ ಉತ್ತರಿಸಿದ್ದಾನೆ. ಕುಟುಂಬದ ಸದಸ್ಯರ ಹತ್ಯೆಯ ವಿಚಾರ ಸಂಬಂಧಿಕರಿಗೆ ತಿಳಿಯದಂತೆ ಆರೋಪಿ ಟ್ರಿಪ್ ಮತ್ತು ಬಸ್ ಪ್ರಯಾಣದ ಕಥೆಯನ್ನು ಬಾಲಕನಿಂದ ಹೇಳಿಸಿದ್ದಾನೆ ಎಂಬುದು ಈ ಆಡಿಯೋದಿಂದ ತಿಳಿದುಬಂದಿದೆ.

ಸದ್ಯ ಸಂಬಂಧಿಕರು ಈ ಆಡಿಯೋಗಳನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆಡಿಯೋಗಳ ಸತ್ಯಾಸತ್ಯತೆ ಹಾಗೂ ಅವುಗಳ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಹಲವು ಆಘಾತಕಾರಿ ಸಂಗತಿಗಳು ಹೊರಬಂದಿದ್ದು, ಈ ಹೊಸ ಆಡಿಯೋ ತನಿಖೆಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಆರೋಪಿಯ ಕೃತ್ಯಗಳ ಹಿಂದಿನ ಉದ್ದೇಶ ಮತ್ತು ಪ್ರಕರಣದ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ