ಇಂಗ್ಲೆಂಡ್ ಲಯನ್ಸ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ 50 ಓವರ್‌ಗಳಲ್ಲಿ ಬರೋಬ್ಬರಿ 487 ರನ್ ಚಚ್ಚುವ ಮೂಲಕ. ಈ ಬೃಹತ್ ಮೊತ್ತದೊಂದಿಗೆ ಇಂಗ್ಲೆಂಡ್ ಲಯನ್ಸ್ (ಇಂಗ್ಲೆಂಡ್ ‘ಎ’) ತಂಡವು ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ವೆಸ್ಟ್ ಇಂಡೀಸ್‌ನ ಸೇಂಟ್ ಕಿಟ್ಸ್​ನಲ್ಲಿರುವ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕನಾಗಿ ಕಣಕ್ಕಿಳಿದ 22 ವರ್ಷದ ಬೆನ್ ಮ್ಯಾಕಿನ್ನಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕಿನ್ನಿ ಕೇವಲ 65 ಎಸೆತಗಳಲ್ಲಿ 15 ಫೋರ್ ಹಾಗೂ 10 ಸಿಕ್ಸರ್​ಗಳೊಂದಿಗೆ 145 ರನ್ ಚಚ್ಚಿ ಔಟಾದರು.

ಮ್ಯಾಕಿನ್ನಿ ಔಟಾದ ನಂತರ ಆಗಮಿಸಿದ ಜೇಮ್ಸ್ ರೀವ್ ಕೇವಲ 56 ಎಸೆತಗಳಲ್ಲಿ ಅಜೇಯ 107 ರನ್ (15 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 400 ರನ್​ಗಳ ಗಡಿ ದಾಟಿಸಿದರು. ಅಲ್ಲದೆ ಬೆನ್ ಮೇಯಸ್ 6ನೇ ವಿಕೆಟ್‌ಗೆ ಕೇವಲ ಕೆಲವೇ ಓವರ್‌ಗಳಲ್ಲಿ 166 ರನ್‌ಗಳ ಬೃಹತ್ ಜೊತೆಯಾಟ ಆಡಿ ಇಂಗ್ಲೆಂಡ್ ಲಯನ್ಸ್ ತಂಡದ ಮೊತ್ತವನ್ನು 50 ಓವರ್​ಗಳಲ್ಲಿ 487/5 ಕ್ಕೆ ತಂದು ನಿಲ್ಲಿಸಿದರು.

ಲಯನ್ಸ್​ ಪಡೆಗೆ ಭರ್ಜರಿ ಜಯ:

488 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ‘ಎ’ ತಂಡ ಇಂಗ್ಲೆಂಡ್‌ನ ಬೌಲಿಂಗ್ ದಾಳಿಗೆ ತತ್ತರಿಸಿತು. ಇಂಗ್ಲೆಂಡ್‌ ಲಯನ್ಸ್ ತಂಡದ ವೇಗದ ಬೌಲರ್ ಎಡ್ಡಿ ಜಾಕ್ ಕೇವಲ 44 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರು. ಇದರೊಂದಿಗೆ ಇಂಗ್ಲೆಂಡ್ ಲಯನ್ಸ್ 276 ರನ್‌ಗಳ ಬೃಹತ್ ಜಯ ಸಾಧಿಸಿ, 50 ಓವರ್‌ಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

ಹೊಸ ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಕಲೆಹಾಕಿದ 487 ರನ್​ ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಭಾರತ ಎ ತಂಡದ ಹೆಸರಿನಲ್ಲಿತ್ತು.

2013 ರಲ್ಲಿ ಪ್ರೆಟೋರಿಯಾದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 3 ವಿಕೆಟ್ ನಷ್ಟಕ್ಕೆ 433 ರನ್ ಕಲೆಹಾಕಿ ವಿಶ್ವ ದಾಖಲೆ ಬರೆದಿತ್ತು. ಆ ಪಂದ್ಯದಲ್ಲಿ ಭಾರತದ ಪರ ಶಿಖರ್ ಧವನ್ ಕೇವಲ 150 ಎಸೆತಗಳಲ್ಲಿ 248 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು.

ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಟೀಮ್ ಇಂಡಿಯಾ ಬರೆದಿದ್ದ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಇಂಗ್ಲೆಂಡ್ ಲಯನ್ಸ್ ಯಶಸ್ವಿಯಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಕಲೆಹಾಕಿದ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.