ತೀರ್ಥಹಳ್ಳಿ: ‘ಶಿವಮೊಗ್ಗ ಡಿಸಿಸಿ ಬ್ಯಾಂಕ್ ದೇಶದಲ್ಲಿ ಕಿಸಾನ್‌ ಕ್ರಿಡಿಟ್‌ (ಕೆಸಿಸಿ) ಸಾಲ ವಿತರಿಸಿದ ಮೊದಲ ಸಂಸ್ಥೆಯಾಗಿದೆ. ನಾನು ಅಧ್ಯಕ್ಷನಾದ ಮೇಲೆ ಅನಿವಾರ್ಯ ಕಾರಣ ಹೊರತುಪಡಿಸಿ ಉಳಿದಂತೆ ಮನೆ ಹರಾಜು ಮಾಡಿಲ್ಲ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಹೇಳಿದರು.

ಸೋಮವಾರ ಮಾಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ, ವಸತಿಗೃಹ ಉದ್ಘಾಟನೆ, ಸುವರ್ಣ ಪಥ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಠೇವಣಿ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಸಾಲ ವಿತರಿಸಿದ್ದೇವೆ’ ಎಂದು ತಿಳಿಸಿದರು.

‘ಬಹುತೇಕ ಸಹಕಾರ ಸಂಘಗಳು ಕೇಂದ್ರ ಸರ್ಕಾರದ ಕಾನೂನಿನಡಿ ಸಿಲುಕಿ ನಲುಗುತ್ತಿವೆ. ರಿಸರ್ವ್‌ ಬ್ಯಾಂಕ್‌, ನಬಾರ್ಡ್‌ ಕೇವಲ ನೋಂದಣಿಗೆ ಮಾತ್ರ ಸೀಮಿತವಾಗಿದೆ. ಡಿಸಿಸಿ ಬ್ಯಾಂಕ್ ಶೇ 9ರಷ್ಟು ಬಡ್ಡಿಗೆ ಸಾಲ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ₹100 ಕೋಟಿ ಸಾಲ ವಿತರಿಸಿದರೆ ಡಿಸಿಸಿ ಬ್ಯಾಂಕ್‌ಗೆ ₹1.20 ಕೋಟಿ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ₹1 ಲಕ್ಷ ಸಾಲಕ್ಕೆ ₹10,000 ಸಬ್ಸಿಡಿ ನೀಡುತ್ತಿದೆ. ಏಷ್ಯಾದ ಮೊದಲ ಕಣಗಿನಹಾಳ ಸಹಕಾರ ಸಂಘ ಮುಚ್ಚುವ ಸ್ಥಿತಿಗೆ ತಲುಪಿದೆ. ಟೀಕೆ ಮಾಡುತ್ತಿದ್ದವರ ಸಂಘದಲ್ಲಿ ಹಣಕಾಸು ಅವ್ಯವಹಾರ ನಡೆದಿದೆ’ ಎಂದು ಕಾಲೆಳೆದರು.

‘ಬಹುತ್ವದ ಭಾರತ ಕಟ್ಟಲು ಸಹಕಾರ ರಂಗ ಬೆಳವಣಿಗೆಯಾಗಬೇಕು. ಕೇವಲ ಸರ್ಕಾರದ ಶ್ರಮದಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ವಾಣಿಜ್ಯ ಬ್ಯಾಂಕ್‌, ಮಂಡಿ ಸಾಲ ನಂಬಿದ್ದರೆ ಬಡವರ ಪರಿಸ್ಥಿತಿ ಬೀದಿಗೆ ಬರುತ್ತಿತ್ತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಮನುಷ್ಯತ್ವ, ಮಾನವೀಯತೆ ಮೇಲೆ ವ್ಯವಸ್ಥೆ ಕಟ್ಟಬೇಕು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

‘ಕೋಡ್ಲು, ಮಾಗರವಳ್ಳಿ, ಮುಳುಬಾಗಿಲು ಸಂಘಗಳನ್ನು ವಿಲೀನಗೊಳಿಸಿ 1977ರಲ್ಲಿ ಸಂಘ ಆರಂಭಗೊಂಡಿದೆ. ಟೀಕೆಯನ್ನು ಮೀರಿ ಸಹಕಾರ ಸಂಘವನ್ನು ಕಟ್ಟುವ ಪ್ರಯತ್ನ ಯಶಸ್ವಿಯಾಗುತ್ತಿದೆ. ವಸತಿಗೃಹ, ಕಾಂಪೌಂಡ್‌ ನಿರ್ಮಾಣ ಮಾಡಲಾಗಿದ್ದು. ನಿರ್ದೇಶಕರ ವೈಯಕ್ತಿಕ ಹಣದಲ್ಲಿ ಇಂಟರ್‌ ಲಾಕ್‌ ಹಾಕಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಈ.ಬಿ.ಶಶಿಧರ ಈಚಲಬೈಲು ಹೇಳಿದರು.

‘ಕಾನೂನು ತೊಡಕುಗಳನ್ನು ಸಂಸ್ಥೆ ಮೀರಿ ಬೆಳೆಯಬೇಕು. ಕಾನೂನು ಕಾಯುತ್ತಿದ್ದರೆ ಸಂಸ್ಥೆ ಹಾಳಾಗುತ್ತದೆ’ ಎಂದು ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್‌ ಹೇಳಿದರು.

ಉಪಾಧ್ಯಕ್ಷ ಮಹೇಂದ್ರ, ನಿರ್ದೇಶಕರಾದ ಅರುಣ್‌ ಶಂಕರಮನೆ, ಕೊರಕೋಟೆ ಶ್ರೀನಿವಾಸ್‌, ಸಂತೋಷ್‌ ಹೆಗ್ಡೆ, ಪ್ರಭಾಕರ್‌, ಹರೀಶ್‌, ಮಹೇಶ್‌, ಉಷಾ ಭಾಸ್ಕರ್‌, ಪ್ರೇಮಾ ಪಾಂಡೇಶ್‌, ದಯಾನಂದ್‌, ಸಿಇಒ ಮಂಜುನಾಥ್ ಇದ್ದರು.