ಬೆಂಗಳೂರು: ‘ಕನ್ನಡ ಮಾತೃಭಾಷೆ ಎಂಬ ಒಂದೇ ಕಾರಣಕ್ಕೆ ಉದ್ಯೋಗ ನಿರಾಕರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಸಚಿವರು, ‘ವ್ಯಕ್ತಿಯೊಬ್ಬರನ್ನು ಕನ್ನಡ ಭಾಷೆಯಲ್ಲಿ ಪರಿಚಯ ಮಾಡಿಕೊಟ್ಟ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಿರುವ ಬಗ್ಗೆ ಇತ್ತೀಚೆಗೆ ಮಹಿಳೆಯೊಬ್ಬರು ಹೇಳಿಕೆ ನೀಡಿದ್ದರು. ನಮ್ಮ ಸರ್ಕಾರ ಇಂತಹ ನಡೆಯನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆ ಮರುಕಳಿಸಿದರೆ, ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಾಮಫಲಕಗಳಲ್ಲಿ ಕನ್ನಡ: ‘ಐಟಿ ಕಂಪನಿಗಳು, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಕನ್ನಡಕ್ಕೆ ಸೂಕ್ತ ಆದ್ಯತೆ ನೀಡಬೇಕು. ಒಂದು ವೇಳೆ ಕನ್ನಡ ಭಾಷೆ ಕಡೆಗಣಿಸಿದರೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.

‘ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ 60 ರಷ್ಟು ಕನ್ನಡ ಇರಬೇಕು. ಈ ಸಂಬಂಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಕನ್ನಡ ಕಡೆಗಣಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಿಧಾನಸಭೆ ಅಧ್ಯಕ್ಷ ಜಿ.ಎಸ್. ಪಾಟೀಲ, ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ ಎನ್., ನಿರ್ದೇಶಕಿ ಕೆ.ಎಂ. ವಸುಂಧರಾ ಪಾಲ್ಗೊಂಡಿದ್ದರು.

‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’

‘ಕರ್ನಾಟಕದಲ್ಲಿ ಅನ್ಯಭಾಷೆಗಳು ಅತಿಥಿಯಾಗಿ ಇರಬೇಕು. ಕನ್ನಡ ಭಾಷೆ ಅಧಿಪತಿಯಾಗಿ ಇರಬೇಕು.‌ ಕನ್ನಡ ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡುವುದು. ಕಚೇರಿ, ವ್ಯಾಪಾರದ ಸಮಯದಲ್ಲಿ, ಸಾರ್ವಜನಿಕ ಜೀವನದಲ್ಲಿ, ಎಲ್ಲ ಕಡೆ ಕನ್ನಡ ಸಹಜವಾಗಿ ಬಳಕೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮನಾಗಿರಬೇಕು. ಕನ್ನಡ ಜನರ ಬದುಕಿನ ಭಾಷೆಯಾಗಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು

‘ನಮ್ಮನ್ನು ಉಳಿಸಿರುವ ಕನ್ನಡವನ್ನು ನಾವುಗಳೇ ಬಳಸಿ, ಬೆಳಸಬೇಕು. ಭಾಷೆ ಉಳಿಯಬೇಕು ಅಂದರೆ ನಾವು ಅದನ್ನು ಹೆಚ್ಚು ಬಳಸಬೇಕು. ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿ ಮಾಡಬೇಕು. ಕನ್ನಡದ ಬಲದೊಂದಿಗೆ ಜಗತ್ತನ್ನು ಗೆಲ್ಲಬೇಕು. ಕನ್ನಡ ಕೃತಕ ಬುದ್ಧಿಮತ್ತೆಯ (ಎಐ) ಭಾಷೆಯಾಗಿ ಬೆಳೆಯಬೇಕು. ವಿಜ್ಞಾನದ, ನವೋದ್ಯಮಗಳ, ಡಿಜಿಟಲ್ ಯುಗದ ಭಾಷೆಯಾಗಬೇಕು’ ಎಂದರು.

ಐವರು ಸಾಧಕರು ಗೈರು

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ 71 ಸಾಧಕರಲ್ಲಿ ಐವರು ಗೈರಾಗಿದ್ದರು. ಇದರಿಂದಾಗಿ 66 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಗೋಡು ತಿಮ್ಮಪ್ಪ, ಎಂ.ಆರ್. ಜೈಶಂಕರ್, ರಾಜಶೇಖರಮೂರ್ತಿ, ಅನ್ನದಾನೇಶ್ವರ ಮಹಾಶಿವಯೋಗಿ ಹಾಗೂ ಫಾದರ್ ಜೋಸೆಫ್ ಗೈರಾಗಿದ್ದರು.

‘ಅನಾರೋಗ್ಯ, ವಿದೇಶ ಪ್ರವಾಸ ಸೇರಿ ವಿವಿಧ ಕಾರಣಗಳಿಂದ ಗೈರಾದ ಇವರಿಗೆ, ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಅಥವಾ ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾಧಕರಿದ್ದಾರೆ. ನಮ್ಮ ಚೌಕಟ್ಟಿನಲ್ಲಿ ಸಾಧಕರನ್ನು ಆಯ್ಕೆ ಮಾಡಿದ್ದೇವೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

261102-29-176575076