ಗುವಾಹಟಿ(ನ.03): ರಣಜಿ ಟ್ರೋಫಿ 4ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನವೇ ಮುನ್ನಡೆ ಸಾಧಿಸಿದೆ. ಅಸ್ಸಾಂ ವಿರುದ್ಧ ಸೋಮವಾರ ಆರಂಭಗೊಂಡ ಪಂದ್ಯದಲ್ಲಿ ಆತಿಥೇಯ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 135 ರನ್ಗೆ ಆಲೌಟ್ ಮಾಡಿದ ಕರ್ನಾಟಕ, ರೋಹನ್ ಪಾಟೀಲ್ ಹಾಗೂ ಮಯಾಂಕ್ ಅಗರ್ವಾಲ್ರ ಅರ್ಧಶತಕಗಳ ನೆರವಿನಿಂದ ಮೊದಲ ದಿನದಂತ್ಯಕ್ಕೆ 2 ವಿಕೆಟ್ಗೆ 180 ರನ್ ಗಳಿಸಿ, 45 ರನ್ ಮುನ್ನಡೆ ಪಡೆದಿದೆ.
ಕರ್ನಾಟಕದ ದಾಳಿಗೆ ಅಸ್ಸಾಂ ಕಂಗಾಲು
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಸ್ಸಾಂ, 30 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ನ ಆರಂಭದಲ್ಲೇ ಸ್ಪಿನ್ನರ್ಗಳನ್ನು ದಾಳಿಗಿಳಿಸಿದ ಕರ್ನಾಟಕ, ಯಶಸ್ಸು ಸಾಧಿಸಿತು. ರಿತೇಶ್ ಭಟ್ಕಳ್ ಹಾಗೂ ಶಿಖರ್ ಶೆಟ್ಟಿ ಎದುರಾಳಿ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು.
4ನೇ ವಿಕೆಟ್ಗೆ ನಾಯಕ ದೆನಿಶ್ ದಾಸ್(26) ಹಾಗೂ ಸಿಬ್ಸಂಕರ್ ರಾಯ್ (37) ಕೆಲ ಕಾಲ ಕ್ರೀಸ್ನಲ್ಲಿ ನೆಲೆಯೂರಿದರು. ಇವರ ನಡುವೆ 63 ರನ್ ಜೊತೆಯಾಟ ಮೂಡಿಬಂತು. ರಾಯ್ ಔಟಾಗುತ್ತಿದ್ದಂತೆ, ಅಸ್ಸಾಂ ತಂಡದ ಪತನ ಶುರುವಾಯಿತು. ಕೇವಲ 42 ರನ್ಗೆ ಕೊನೆ 7 ವಿಕೆಟ್ ಕಳೆದುಕೊಂಡ ಅಸ್ಸಾಂ, 48.1 ಓವರಲ್ಲಿ 135 ರನ್ಗೆ ಆಲೌಟ್ ಆಯಿತು. ರಿತೇಶ್ ಹಾಗೂ ಶಿಖರ್ ತಲಾ 5 ವಿಕೆಟ್ ಕಬಳಿಸಿದರು. ಅಗ್ರ ಕ್ರಮಾಂಕವನ್ನು ರಿತೇಶ್ ಕೆಡವಿದರೆ, ಬಾಲಂಗೋಚಿಗಳನ್ನು ಶಿಖರ್ ಪೆವಿಲಿಯನ್ಗಟ್ಟಿದರು.
ಕರ್ನಾಟಕ ಭರ್ಜರಿ ಆರಂಭ:
ಕರ್ನಾಟಕಕ್ಕೆ ರೋಹನ್ ಪಾಟೀಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್ಗೆ 129 ರನ್ ಜೊತೆಯಾಟವಾಡಿ, ತಂಡವನ್ನು ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಸನಿಹಕ್ಕೆ ತಂದರು. 87 ಎಸೆತದಲ್ಲಿ 13 ಬೌಂಡರಿ, 1 ಸಿಕ್ಸರ್ನೊಂದಿಗೆ 89 ರನ್ ಗಳಿಸಿ ರೋಹನ್ ಔಟಾಗುವ ಮೂಲಕ ಶತಕದಿಂದ ವಂಚಿತರಾದರು. 3ನೇ ಕ್ರಮಾಂಕದಲ್ಲಿ ಆಡಿದ ಕೆ.ಎಲ್.ಶ್ರೀಜಿತ್ 19 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆಕರ್ಷಕ ಅರ್ಧಶತಕ ಗಳಿಸಿದ ಮಯಾಂಕ್ ಔಟಾಗದೆ 57 ರನ್ ಗಳಿಸಿದ್ದು, 7 ರನ್ ಗಳಿಸಿರುವ ಕೆ.ವಿ.ಅನೀಶ್ ಜೊತೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಬೋನಸ್ ಅಂಕ ಗಳಿಸಿದ್ದ ಕರ್ನಾಟಕ, ಮತ್ತೊಂದು ದೊಡ್ಡ ಜಯದೊಂದಿಗೆ ನಾಕೌಟ್ ರೇಸ್ನಲ್ಲಿ ಉಳಿಯಲು ಎದುರು ನೋಡುತ್ತಿದೆ.
ಸ್ಕೋರ್: ಅಸ್ಸಾಂ 48.1 ಓವರಲ್ಲಿ 135 (ರಾಯ್ 37, ದಾಸ್ 26, ರಿತೇಶ್ 5-35, ಶಿಖರ್ 5-53), ಕರ್ನಾಟಕ 180/2 (ರೋಹನ್ 89, ಮಯಾಂಕ್ 57*, ಅಮ್ಲಾನ್ಜ್ಯೋತಿ 2-51)

