ಚಾಮರಾಜನಗರ, ನವೆಂಬರ್ 03:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಾವು ಮತ್ತು ಬೇಟೆ ಪ್ರಕರಣಗಳು ಆತಂಕ ಮೂಡಿಸಿವೆ. ಕೆಲ ದಿನಗಳ ಹಿಂದಷ್ಟೇ ಹುಲಿ ಬೇಟೆ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕರಡಿಕಲ್ಲು ಗುಡ್ಡದ ಬಳಿ ದಂತಗಳೇ ನಾಪತ್ತೆಯಾಗಿದ್ದ ಆನೆಯ ಕಳೇಬರ ಪತ್ತೆಯಾಗಿತ್ತು. ಇದೀಗ ಚಾಮರಾಜನಗರದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಆನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.  ಸುಮಾರು 35 ವರ್ಷದ ಗರ್ಭಿಣಿ ಕಾಡಾನೆ ಮೃತಪಟ್ಟಿರುವುದು ವನ್ಯಜೀವಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.

ಖಾಸಗಿ ಜಮೀನಿನಲ್ಲಿ ಗರ್ಭಿಣಿ ಆನೆಯ ಕಳೇಬರ ಪತ್ತೆ!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಈ ಘಟನೆ ನಡೆದಿದೆ. ಅರಣ್ಯದ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 35 ವರ್ಷ ವಯಸ್ಸಿನ ಹೆಣ್ಣಾನೆ ಮೃತಪಟ್ಟಿರುವುದು ಗೊತ್ತಾಗಿದೆ. ಪಶುವೈದ್ಯ ಡಾ. ಮಿರ್ಜಾ ವಾಸಿಂ ಅವರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಮರಿ ಇರುವುದು ಪತ್ತೆಯಾಗಿದೆ. ಮರಿಯ ವಯಸ್ಸಿನ ಬಗ್ಗೆ ಪ್ರಾಥಮಿಕ ಮಾಹಿತಿಯಲ್ಲಿ ವ್ಯತ್ಯಾಸವಿದ್ದು, ಅಧಿಕೃತ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

ಕಾಡಾನೆಗಳ ಕಾದಾಟದಿಂದ ಸಾವು ಶಂಕೆ!

ಪ್ರಾಥಮಿಕ ಪರಿಶೀಲನೆ ವೇಳೆ ಎರಡು ಕಾಡಾನೆಗಳ ನಡುವಿನ ಕಾದಾಟದಿಂದ ಗರ್ಭಿಣಿ ಆನೆ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಹುಲಿ ಬೇಟೆ, ದಂತ ನಾಪತ್ತೆ ಪ್ರಕರಣದಿಂದ ಆತಂಕ

ಇನ್ನು ಕೆಲ ದಿನಗಳ ಹಿಂದಷ್ಟೇ ಬಂಡೀಪುರದ ಮದ್ದೂರು ವಲಯದ ಹೊಂಗಳ್ಳಿ ಬೀಟ್‌ನಲ್ಲಿ ಉರುಳಿಗೆ ಸಿಲುಕಿ ಹುಲಿ ಬೇಟೆಯಾದ ಪ್ರಕರಣ ವರದಿಯಾಗಿತ್ತು. ಇದರ ಹಿಂದೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬವಾರಿಯಾ ಗ್ಯಾಂಗ್‌ನ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. 2009ರಲ್ಲಿ ಕೊಳ್ಳೇಗಾಲದ ಗುಂಡಾಲ್ ಅಣೆಕಟ್ಟು ಸಮೀಪ ಉಕ್ಕಿನ ಉರುಳು ಬಳಸಿ ಹುಲಿ ಬೇಟೆಯಾಡಿದ್ದ ಪ್ರಕರಣದಲ್ಲೂ ಈ ಗ್ಯಾಂಗ್‌ನ ಸದಸ್ಯರು ಬಂಧನಕ್ಕೊಳಗಾಗಿದ್ದರು.

ಇದನ್ನೂ ಓದಿ ಬಂಡೀಪುರದಲ್ಲಿ ಮತ್ತೆ ಹುಲಿ ಬೇಟೆ ಶಂಕೆ: ಬವಾರಿಯಾ ಗ್ಯಾಂಗ್ ಸಕ್ರಿಯದ ಅನುಮಾನ, ಆನೆ ದಂತವೂ ನಾಪತ್ತೆ!

ಇದರ ಬೆನ್ನಲ್ಲೇ ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು, ದಂತಗಳು ನಾಪತ್ತೆಯಾಗಿದ್ದವು. ಈ ಪ್ರಕರಣಗಳ ಹಿಂದೆ ಒಂದೇ ಗ್ಯಾಂಗ್‌ನ ಕೈವಾಡವಿದೆಯೇ ಎಂಬ ಅನುಮಾನವೂ ಮೂಡಿತ್ತು. ಆದರೆ ಯಾವುದೇ ಪ್ರಕರಣದಲ್ಲೂ ಬವಾರಿಯಾ ಗ್ಯಾಂಗ್‌ನ ನಂಟು ದೃಢಪಟ್ಟಿಲ್ಲ. ಸತತ ಘಟನೆಗಳು ಬಂಡೀಪುರದ ಅರಣ್ಯ ಗಸ್ತು ಮತ್ತು ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ