ಜೂನ್ ತಿಂಗಳು ಬಂತೆಂದರೆ ಧೋ...ಎಂದು ಸುರಿಯುವ ಧಾರಾಕಾರ ಮಳೆ. ಗುಡುಗು–ಸಿಡಿಲು, ಬಿರುಸು ಗಾಳಿಯ ಸಾಥ್‌. ಕೆಲವೊಮ್ಮೆ ಈ ಅಬ್ಬ ಮೇ ತಿಂಗಳಲ್ಲೇ ಆರಂಭವಾಗುವುದಿದೆ. ನಾಲ್ಕು ತಿಂಗಳು ಮಳೆ ಎಂದು ಅಧಿಕೃತವಾಗಿ ಹೇಳುತ್ತಿದ್ದರೂ ಬೇಗ ಆರಂಭವಾಗಿ ತಡವಾಗಿ ಮುಗಿದರೆ ಕರಾವಳಿಯ ಮಳೆಗಾಲದ ಅವಧಿ ಕೆಲವು ವರ್ಷಗಳಲ್ಲಿ ಆರರಿಂದ ಏಳು ತಿಂಗಳ ವರೆಗೆ ಇರುತ್ತದೆ. ದಿನವಿಡೀ ಸುರಿಯುವ ಮಳೆಯಿಂದ ಒಮ್ಮೊಮ್ಮೆ ಮನೆಯಿಂದ ಹೊರಗೆ ಇಳಿಯಲು ಆಗದ ಪರಿಸ್ಥಿತಿ. ಈ ಸ್ಥಿತಿ ಅನೇಕ ಬಾರಿ ದಿನಗಟ್ಟಲೆ ಮುಂದುವರಿಯುವುದೂ ಇದೆ. ನಿರಂತರ ಮಳೆಯ ಸದ್ದು, ಇಳೆ ನೆನೆದು ದೇಹ ತಂಪಾಗಿ ಮನಸ್ಸೂ ಮುದುಡಿದ ಅನುಭವ.

ವರ್ಷಾ ಋತುವಿನಲ್ಲಿ ಹೀಗೆ ಸವಾಲು, ಆಹ್ಲಾದದ ಪರಿಸರ ನಿರ್ಮಾಣವಾದರೆ ಬೇಸಿಗೆ ಇಲ್ಲಿ ತೀರಾ ಭಿನ್ನ. ‘ಆನೆದ ಬೆರಿ ಪುಡಪುನ ಆಟಿದ ದೊಂಬು’ (ಆನೆಯ ಬೆನ್ನಿನಲ್ಲೂ ಬಿರುಕು ಮೂಡಿಸಬಲ್ಲ ಆಷಾಟದ ಬಿಸಿಲು) ಎಂದು ಆಟಿ ತಿಂಗಳ ಸುಡುಬಿಸಿಲನ್ನು ವರ್ಣಿಸಿ ಹಿಂದಿನವರು ನಿಡುಸುಯ್ ಬಿಡುತ್ತಿದ್ದರೂ ಈಗ ಕಾಲ ಬದಲಾಗಿದೆ. ಬಿಸಿಲು, ಮಳೆ, ಚಳಿ ಎನ್ನದೆ ಎಲ್ಲ ಕಾಲದಲ್ಲೂ ಈಗ ಬಿಸಿಲು ಪ್ರತಾಪ ಮೆರೆಯುತ್ತದೆ.

ಈ ಎರಡು ವಿಪರೀತಗಳ ನಡುವೆ ಕರಾವಳಿ ಜನರ ಜೀವನ, ಆಹಾರ ಪದ್ಧತಿ, ಕೃಷಿ ಮುಂತಾದ ಎಲ್ಲವೂ ಹೊಂದಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಆವರಿಸಿಕೊಂಡಿರುವ ಕರ್ನಾಟಕ ಕರಾವಳಿಯ ಒಟ್ಟು ಉದ್ದ 343 ಕಿಲೊಮೀಟರ್ ಇದೆ. ಇದರಲ್ಲಿ ಕಡಲ ತಡಿಯ ವ್ಯಾಪ್ತಿ ಬಲು ಕಡಿಮೆ. ಹೆಚ್ಚಿನ ಪ್ರದೇಶವನ್ನು ಮಲೆನಾಡು ಮತ್ತು ಬೆಟ್ಟ–ಗುಡ್ಡಗಳು ಆವರಿಸಿವೆ. ಕಡಲ ಕಿನಾರೆಯಲ್ಲಿ ಮೀನುಗಾರಿಕೆ ಮುಖ್ಯ ಜೀವನೋಪಾಯ ಮತ್ತು ಉದ್ಯಮ. ಇತರ ಭಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಾಗಿರುವ ತೋಟಗಾರಿಕೆ ಪ್ರಮುಖವಾಗಿದ್ದರೂ ಒಟ್ಟಾರೆ ವ್ಯವಹಾರದಲ್ಲಿ ಮೀನುಗಾರಿಕೆಯದೇ ಮೇಲುಗೈ. ರೋಗಗಳು, ಬೆಲೆ ವ್ಯತ್ಯಾಸ ಮುಂತಾದ ಕಾರಣಗಳಿಂದ ಅಡಿಕೆ ಬೆಳೆ ಸಂಕಷ್ಟದಲ್ಲಿದೆ ಎಂದು ಅತ್ತ ಬೆಳೆಗಾರರು ಹೇಳುತ್ತಿದ್ದರೆ ಸಾಗರ ಮಾಲಿನ್ಯ, ಅತಿಯಾದ, ಅವೈಜ್ಞಾನಿಕ ಮೀನುಗಾರಿಕೆಯಿಂದ ಮತ್ಸ್ಯೋದ್ಯಮ ಕಳೆಗುಂದಿದೆ ಎಂಬುದು ಮೀನುಗಾರರ ದುಮ್ಮಾನ. ಈ ಭಾಗದ ಭತ್ತದ ಕಣಜ ಬತ್ತಿ ವರ್ಷಗಳೇ ಕಳೆದಿವೆ.

ಕಡಲನ್ನು ಸುಮ್ಮನೆ ನೋಡುತ್ತ ಕುಳಿತರೆ ಸುಂದರ, ಕೆಣಕಿದರೆ ಭೀಭತ್ಸ. ಕಡಲ ಮಕ್ಕಳಿಗೆ ಅನ್ನ ನೀಡುವ ತಾಯಿ. ಜೀವಜಗತ್ತನ್ನೇ ಒಡಲಲ್ಲಿ ಹುದುಗಿಕೊಂಡಿರುವ ಸಮುದ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಂಪ್ರತಿ ಕೋಟ್ಯಂತರ ಮೊತ್ತದ ಆದಾಯ ತಂದುಕೊಡುವ ಮೂಲ. ಒಂದು ತಿಂಗಳಲ್ಲಿ 47500 ಟನ್ ಲಭಿಸಿ ₹56981.24 ಲಕ್ಷ ಆದಾಯ ತಂದುಕೊಟ್ಟ ಉದಾಹರಣೆಯೂ ಇಲ್ಲಿ ಇದೆ. ಜಿಲ್ಲೆಯ ಕರಾವಳಿಯಲ್ಲಿ 35,875 ಜನರು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು 1399 ನೊಂದಾಯಿತ ಯಾಂತ್ರೀಕೃತ ಬೋಟ್‌ಗಳು ಇವೆ. ಮೋಟರ್ ಅಳವಡಿಸಿದ 1531 ಬೋಟ್‌ಗಳೂ 218 ಸಾಂಪ್ರದಾಯಿಕ ಬೋಟ್‌ಗಳೂ ಇವೆ. ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ಇಲ್ಲಿನ ಮೀನುಗಾರರು ಮತ್ತು ಮೀನಿಗೆ ಸಂಬಂಧಿಸಿದ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಪಾಲಿಗೆ ಲಯಬದ್ಧ ಸಂಗೀತ. ಪಶ್ಚಿಮ ಕರಾವಳಿಯ ಬೂತಾಯಿ, ಬಂಗುಡೆ, ಕಾಣೆ, ಬೊಳಂಜಿರ್, ಡಿಸ್ಕೊ ಮೊದಲಾದ ಮೀನಿಗೆ ವಿದೇಶದಲ್ಲೂ ಬೇಡಿಕೆ ಇದೆ.

ಸಂಪ್ರದಾಯ, ಆರಾಧನೆ

ಕರಾವಳಿ ಜನರಿಗೆ ಸಮುದ್ರ ಮತ್ತು ದುಡಿಮೆಯಷ್ಟೇ ಪ್ರಮುಖ ಸಂಸ್ಕೃತಿ, ಸಂಪ್ರದಾಯ ಮತ್ತು ವೈವಿಧ್ಯಮಯ ಆರಾಧನಾ ವಿಧಾನ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಒಳಗೊಂಡ ಕರಾವಳಿಯ ನಾಗಾರಾಧನೆ ಮತ್ತು ಭೂತಾರಾಧನೆಗೆ ಪ್ರಾಚೀನ ಇತಿಹಾಸವಿದೆ. ನಂಬಿಕೆಯೇ ಇದರ ಮೂಲಸತ್ವವಾಗಿರುವುದರಿಂದ ಇಲ್ಲಿನವರ ಜೀವನಕ್ರಮದಲ್ಲಿ ಸೇರಿಕೊಂಡಿದೆ. ಪ್ರಕೃತಿ ಜೊತೆಗೆ ನಿಕಟ ಬಾಂಧವ್ಯ ಹೊಂದುವ ಮಾರ್ಗವಾಗಿಯೂ ಇದು ಕೆಲಸ ಮಾಡುತ್ತದೆ. ಸರ್ಪವನ್ನು ಪೂಜಿಸುವ ನಾಗಾರಾಧನೆ ಈ ಭಾಗದ ದೈವೀಕ ಕಾರ್ಯಕ್ರಮದಲ್ಲಿ ಒಂದಾಗಿದ್ದು ಪ್ರಕೃತಿ, ಫಲವತ್ತತೆ ಮತ್ತು ಸಂತತಿಯ ಸಂಕೇತವಾಗಿ ಇದನ್ನು ಪರಿಗಣಿಸುವುದಿದೆ.

ನಾಗಾರಾಧನೆಗೆ ಸಂಬಂಧಿಸಿ ಪ್ರತಿಯೊಂದು ಮನೆತನ ಅಥವಾ ಗ್ರಾಮದಲ್ಲಿ ದಟ್ಟ ಮರ-ಗಿಡಗಳಿರುವ ನಾಗಬನ ಇರುತ್ತದೆ. ಪ್ರಕೃತಿ ರಕ್ಷಣೆಗೆ ಇದೊಂದು ಉತ್ತಮ ಮಾದರಿ. ನಾಗದೋಷ ನಿವಾರಣೆಗಾಗಿ ಈ ಭಾಗದ ಪ್ರಮುಖ ದೇವಸ್ಥಾನಗಳಲ್ಲಿ ನಡೆಯುವ ಆಶ್ಲೇಷ ಬಲಿಪೂಜೆ ರಾಜ್ಯದ ಆಚೆಗೂ ಪ್ರಸಿದ್ಧಿ ಗಳಿಸಿದೆ. ಭೂತಾರಾಧನೆ ಅಥವಾ ದೈವಾರಾಧನೆ ಇಲ್ಲಿನ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಮತ್ತೊಂದು ಮಹತ್ವದ ವಿಚಾರ. ಇಲ್ಲಿ ನಾಗ ಹೇಗೆ ಉಪದ್ರವಕಾರಿ ಅಲ್ಲವೋ ಭೂತವೂ ಕೆಟ್ಟಶಕ್ತಿಯಲ್ಲ. ಅದು ಸತ್ಯವನ್ನು ಕಾಯುವ, ಗ್ರಾಮ ಇಲ್ಲವೇ ಕುಟುಂಬವನ್ನು ಕಾಪಾಡುವ ಬಂಧುಗಳು. ಪ್ರಕೃತಿಯ ಜೊತೆ ನಂಟು ಇರುವ ಪಂಜುರ್ಲಿ, ವರಾಹ, ಮಹಿಷಂದಾಯ ಮುಂತಾದ ದೈವಗಳ ಜೊತೆ ಪೌರಾಣಿಕ ನಂಟು ಇರುವ ಜಾರಂದಾಯ, ಉಳ್ಳಾಲ್ತಿ, ಸಮಾಜಕ್ಕಾಗಿ ಹೋರಾಡಿದ ಕೋಟಿ-ಚೆನ್ನಯ, ಮುಗೇರ ದೈವಗಳೂ ಇವೆ. ಹೀಗಾಗಿ ಕೋಲ ಇಲ್ಲವೇ ನೇಮ ಇಲ್ಲಿನ ಆಚರಣೆಗಳಲ್ಲಿ ಪ್ರಮುಖವಾಗಿವೆ.

ಸಮೃದ್ಧ ಸಾಂಸ್ಕೃತಿಕ ವೈಭವ

ಆರಾಧನೆಯಲ್ಲೂ ಕಲೆಯ ನಂಟನ್ನು ಬೆಸೆದಿರುವ ಕರಾವಳಿಯ ಜನರು ಸಾಂಸ್ಕೃತಿಕವಾಗಿ ವೈವಿಧ್ಯವನ್ನು ಹೊಂದಿದ್ದಾರೆ. ಯಕ್ಷಗಾನ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತು ನೃತ್ಯಕ್ಕೆ ಇಲ್ಲಿನ ಪೂಜಾಸ್ಥಳಗಳು ಮತ್ತು ಆರಾಧನಾ ಕೇಂದ್ರಗಳು ಭಾರಿ ಕೊಡುಗೆ ನೀಡಿವೆ. ಮನರಂಜನೆಗೂ ಧಾರ್ಮಿಕ ಚೌಕಟ್ಟು ಹಾಕಿ ಸಂಪ್ರದಾಯಬದ್ಧಗೊಳಿಸುವುದನ್ನು ಹುಲಿಕುಣಿತದಂಥ ಕಲಾಪ್ರಕಾರಗಳು ತೋರಿಸಿಕೊಟ್ಟಿವೆ.

ಯಕ್ಷಗಾನವು ಕರಾವಳಿ ಭಾಗದ ಅಸ್ಮಿತೆಯಂತಿರುವ ಪ್ರದರ್ಶಕ ಕಲೆ. ಭವ್ಯ ವೇಷಭೂಷಣ, ಆಕರ್ಷಕ ಮುಖವರ್ಣಿಕೆ, ಚೆಂಡೆ-ಮದ್ದಳೆ, ತಾಳವಾದ್ಯದ ನಾದ, ಭಾಗವತಿಕೆಯ ಅಚ್ಚರಿ, ಅರ್ಥಗಾರಿಕೆ ಎಂಬ ವಿಶಿಷ್ಟ ಸಂಭಾಷಣೆ ವಿಧಾನ ಇತ್ಯಾದಿಗಳೆಲ್ಲ ಸೇರಿ ಇದನ್ನೊಂದು ಸಂಪೂರ್ಣ ಕಲೆಯಾಗಿಸಿದೆ. ರಾತ್ರಿಯಿಡೀ ಕುಳಿತು ಯಕ್ಷಗಾವನ್ನು ಆಸ್ವಾದಿಸುವ ಅವಕಾಶ ಈಗ ಇಲ್ಲ. ಆಧುನಿಕ, ಸಾಮಾಜಿಕ ಮಾಧ್ಯಮಗಳ ಕಾಲದಲ್ಲೂ ರಾತ್ರಿಪೂರ್ತಿ ಕುಳಿತುಕೊಳ್ಳಬಲ್ಲವರು ಯಕ್ಷಪ್ರಿಯರು. ಹರಕೆಯ ಯಕ್ಷಗಾನಗಳಲ್ಲಿ ಸಂಪ್ರದಾಯಬದ್ಧ ಪೂಜಾ ವಿಧಿವಿಧಾನಗಳಿಗೆ ಹೆಚ್ಚು ಪ್ರಾಶಸ್ತ್ಯ ಇದೆ.

ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಕರುನಾಡೋತ್ಸವ: ಕರ್ನಾಟಕದ ಸಮುದ್ರ ತಟದ ಬೆವರುಪ್ಪು ಮತ್ತು ಸಾಮರಸ್ಯದ ಸಂಸ್ಕೃತಿ

ಒಂದು ಸಾಲಿನಲ್ಲಿಕರ್ನಾಟಕದ ಕರಾವಳಿ ಪ್ರದೇಶದ ವಿಶಿಷ್ಟ ಭೌಗೋಳಿಕ ಸ್ಥಿತಿ, ಮೀನುಗಾರಿಕೆ, ಆರಾಧನಾ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳ ವೈವಿಧ್ಯಮಯ ಜೀವನಶೈಲಿಯ ಒಂದು ಸಮಗ್ರ ನೋಟ ಇಲ್ಲಿದೆ.ಏನು? ಏಕೆ? ಹೇಗೆ?

ಕರಾವಳಿ ಕರ್ನಾಟಕದ ಭೌಗೋಳಿಕ ವ್ಯಾಪ್ತಿ ಎಷ್ಟು?

ಕರ್ನಾಟಕದ ಕರಾವಳಿ ತೀರವು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 343 ಕಿಲೋಮೀಟರ್ ಉದ್ದದ ಕಡಲತೀರವನ್ನು ಹೊಂದಿದೆ.

ಕರಾವಳಿ ಜನರ ಪ್ರಮುಖ ಜೀವನೋಪಾಯವೇನು?

ಮೀನುಗಾರಿಕೆಯು ಈ ಭಾಗದ ಮುಖ್ಯ ಉದ್ಯಮ ಮತ್ತು ಜೀವನೋಪಾಯವಾಗಿದೆ. ಇದರ ಜೊತೆಗೆ ಅಡಿಕೆ ತೋಟಗಾರಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ.

ಕರಾವಳಿಯ ಧಾರ್ಮಿಕ ಆಚರಣೆಗಳ ಮಹತ್ವವೇನು?

ನಾಗಾರಾಧನೆ ಮತ್ತು ಭೂತಾರಾಧನೆಯು ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿದ್ದು, ಇವು ಪ್ರಕೃತಿ, ಸತ್ಯ ಮತ್ತು ಸಾಮಾಜಿಕ ಬಾಂಧವ್ಯದ ಸಂಕೇತಗಳಾಗಿವೆ.

ಯಕ್ಷಗಾನದಂತಹ ಕಲೆಗಳ ಪಾತ್ರವೇನು?

ಯಕ್ಷಗಾನ, ಹುಲಿಕುಣಿತ ಮತ್ತು ಕಂಬಳದಂತಹ ಕಲೆಗಳು ಕರಾವಳಿಯ ಅಸ್ಮಿತೆಯಾಗಿವೆ. ಇವು ಧಾರ್ಮಿಕ ಚೌಕಟ್ಟಿನೊಂದಿಗೆ ಮನರಂಜನೆ ಮತ್ತು ಕೃಷಿ ಪರಂಪರೆಯನ್ನು ಬೆಸೆದಿವೆ.

ಈ ಪ್ರದೇಶದ ಭಾಷಾ ವೈವಿಧ್ಯತೆ ಹೇಗಿದೆ?

ಕರಾವಳಿಯಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಮರಾಠಿ, ಶಿವಳ್ಳಿ ಮತ್ತು ಅರೆಭಾಷೆಗಳಂತಹ ಅನೇಕ ಭಾಷೆಗಳನ್ನು ಮಾತನಾಡುವ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ.

&ಪ್ರಮುಖ ಅಂಕಿಅಂಶಗಳು343 ಕಿಲೊಮೀಟರ್ಕರ್ನಾಟಕ ಕರಾವಳಿಯ ಒಟ್ಟು ಉದ್ದ₹56981.24 ಲಕ್ಷಒಂದು ತಿಂಗಳ ಮೀನುಗಾರಿಕೆ ಆದಾಯ35,875ದಕ್ಷಿಣ ಕನ್ನಡದ ಮೀನುಗಾರರ ಸಂಖ್ಯೆ1399ನೊಂದಾಯಿತ ಯಾಂತ್ರೀಕೃತ ಬೋಟ್‌ಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಆರಾಧನಾ ಕಲೆಗಳಲ್ಲಿ ಪ್ರಮುಖವಾಗಿರುವ ಆಟಿ ಕಳಂಜ ಆಷಾಢದ ತಿಂಗಳಲ್ಲಿ ಮನೆಮನೆಗೆ ಸಂಚರಿಸುತ್ತದೆ. ವಿಶಿಷ್ಟ ವೇಷಭೂಷಣದೊಂದಿಗೆ ಛತ್ರಿ ತಿರುಗಿಸುತ್ತ ಪುಟ್ಟಪುಟ್ಟ ಹೆಜ್ಜೆ ಹಾಕುವ ಕಳಂಜನಿಗೆ ಜಾನಪದ ವಾದ್ಯ ಸಾಥ್ ನೀಡುತ್ತದೆ. ಹುಲಿವೇಷ ಕರಾವಳಿಯ ಶಕ್ತಿಶಾಲಿ ನೃತ್ಯರೂಪ. ಇದು ಹೆಚ್ಚು ಗಮನ ಸೆಳೆಯುವುದು ನವರಾತ್ರಿಯ ಸಂದರ್ಭದಲ್ಲಿ. ಯುವಕರ ಕುಣಿತ ಆಗಿದ್ದ ಇದರಲ್ಲಿ ಈಗೀಗ ಕಿನ್ನಿ ಪಿಲಿ (ಮರಿ ಹುಲಿ) ಮತ್ತು ಹೆಣ್ಣು ಹುಲಿ ಕೂಡ ಗಮನ ಸೆಳೆಯುತ್ತದೆ.

ಕೃಷಿ ಕಾಯಕ ಮುಗಿದ ನಂತರ ಮನರಂಜನೆಗಾಗಿ ಮತ್ತು ಕೋಣಗಳ ಮೈಯ ಜಡ್ಡು ಕಳೆಯುವುದಕ್ಕಾಗಿ ಕೆಸರುಗದ್ದೆಗಳಲ್ಲಿ ಆಡುತ್ತಿದ್ದ ಕಂಬಳ ಈಗ ವಿಶ್ವವಿಖ್ಯಾತಿ ಗಳಿಸಿದೆ. ಕೃಷಿ ಪರಂಪರೆಯ ಈ ಆಟಕ್ಕೆ ಈಗ ಕ್ರೀಡೆಯ ಸ್ಥಾನ ಲಭಿಸಿದೆ. ಉನ್ನತ ಶಿಕ್ಷಣ ಪಡೆದ ಯುವಕರು ಕೂಡ ಕೋಣ ಓಡಿಸುವ ಸಾಹಸಕ್ಕೆ ಧುಮುಕುತ್ತಿದ್ದು ಉತ್ತಮ ಸಂಪಾದನೆಯನ್ನೂ ಮಾಡುತ್ತಿದ್ದಾರೆ.

ಕರಾವಳಿಯ ಜನಜೀವನದ ಪ್ರಮುಖ ಅಂಶಗಳಲ್ಲಿ ಒಂದು, ವಿಶಿಷ್ಟವಾದ ಭಾಷಾ ಸಂಪ್ರದಾಯ. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಮರಾಠಿ, ಶಿವಳ್ಳಿ, ಅರೆಭಾಷೆಗಳನ್ನು ಆಡುವ ಜನರು ವೈವಿಧ್ಯಮಯ ಸಂಸ್ಕೃತಿಯ ಪ್ರತಿನಿಧಿಗಳೂ ಆಗಿದ್ದಾರೆ. ಈ ಭಾಷೆಗಳ ಪೈಕಿ ಹೆಚ್ಚಿನವುಗಳಲ್ಲಿ ಸಾಹಿತ್ಯ ರಚನೆಯೂ ಆಗುತ್ತಿರುವುದು ಮತ್ತೊಂದು ವೈಶಿಷ್ಟ್ಯಗಳು. ಪಾಡ್ದನಗಳು ತುಳುವಿನಲ್ಲಿ ಸಮೃದ್ಧವಾಗಿ ಮೂಡಿವೆ, ಮೂಡುತ್ತಿವೆ. ಭಾಷಾ ವೈವಿಧ್ಯತೆಯಂತೆಯೇ ಹಬ್ಬ, ಆಚರಣೆಗಳಲ್ಲೂ ಇಲ್ಲಿ ವೈಶಿಷ್ಟ್ಯವಿದೆ. ಚಾಂದ್ರಮಾನ ಯುಗಾದಿ ಬದಲಿಗೆ ತುಳುವರು ಅಥವಾ ತುಳು ಹಿನ್ನೆಲೆಯವರು ಸೌರಮಾನ ಯುಗಾದಿ (ವಿಷು/ಬಿಸು) ಪರ್ಬವನ್ನು ಆಚರಿಸುತ್ತಾರೆ. ಹಬ್ಬಗಳು ಇಲ್ಲಿ ಸಾಮರಸ್ಯದ ಜೀವನಕ್ಕೂ ಕಾರಣವಾಗಿವೆ.ಬಹುಭಾಷೆ, ಬಹುಸಂಸ್ಕೃತಿಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಸೋಮವಾರ, 02 ನವೆಂಬರ್ 2026ಕರುನಾಡೋತ್ಸವ ’ಪದ ಕಟ್ಟು‘ ಭಾಗ–2: ಇಂದಿನ ಸವಾಲುಕರುನಾಡೋತ್ಸವ | ರಾಜ್ಯದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು–ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ!ಕರುನಾಡೋತ್ಸವ | ಡಾ.ಬಿ.ಎಲ್‌.ವೇಣು ಸರ್ಕಲ್‌; ಕನ್ನಡಾಭಿಮಾನದ ತಾಣ