ರಾಜ್ಯಕ್ಕೆ ಉದ್ಯೋಗ ಅರಸಿ ಬರುವವರು ಮತ್ತು ಪೋಸ್ಟಿಂಗ್ ಆಗುವ ಪರಭಾಷಿಕ ಅಧಿಕಾರಿಗಳಲ್ಲಿ ಹಲವರು, ಕನ್ನಡ ಕಲಿಯಲು ಹಿಂಜರಿಯುತ್ತಿದ್ದಾರೆ. ಆದರೆ, ಅಂತಹವರ ನಡುವೆ ಭಿನ್ನವಾಗಿ ನಿಂತವರೇ ಕರ್ನಾಟಕದ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿರುವ ಇವರು, ತಮ್ಮ ಅಧಿಕಾರಾವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿದ್ದಾರೆ. ಸಾರ್ವಜನಿಕರ ಜತೆ ವ್ಯವಹರಿಸಲು ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದರು. ತಮ್ಮ ಬಳಿ ಬರುವ ಜನರ ದುಃಖ ದುಮ್ಮಾನಗಳನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯ ಭಾಷೆ ಗೊತ್ತಿರಬೇಕೆಂದು ಅರಿತಿದ್ದರು.

ಕನ್ನಡ ಭಾಷೆ ಜೊತೆಗಿನ ಅವರ ನಂಟು ಕೇವಲ ಮಾತನಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅವರ ಅಧ್ಯಯನದ ಆಳ ಹೇಗಿತ್ತೆಂದರೆ ವಚನಕಾರ ಅಲ್ಲಮ ಪ್ರಭು ಮತ್ತು ಕಬೀರ್ ದಾಸರ ಕುರಿತು ತುಲನಾತ್ಮಕ ಅಧ್ಯಯನ ಮಾಡಿ ಪಿಎಚ್‌ಡಿ ಪಡೆದಿದ್ದಾರೆ. ಕವಿ ಗೋಪಾಲಕೃಷ್ಣ ಅಡಿಗ ಸೇರಿದಂತೆ ಹಲವು ಕನ್ನಡ ಕವಿಗಳ ಕವಿತೆಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಬದ್ಧ ಗಾಂಧೀವಾದಿ, ಕಾವ್ಯದ ಆಸಕ್ತ ಪ್ರೇಮಿಯಾಗಿ ರಾಜ್ಯದ ವಿವಿಧ ಸಾಹಿತ್ಯ ಉತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಉತ್ತರ ಪ್ರದೇಶ ಮೂಲದವರಾದ ಸಿಂಗ್, 1974ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಕಲಿಕೆ ಮತ್ತು ಅಧ್ಯಯನ ಕುರಿತಂತೆ ‘ಪ್ರಜಾವಾಣಿ’ಜೊತೆ ಅವರು ಮಾತನಾಡಿದ್ದಾರೆ.

ಕನ್ನಡ ಕಲಿಯಬೇಕು ಅನಿಸಿದ್ದು ಯಾವಾಗ?

ನಾನು ಕರ್ನಾಟಕಕ್ಕೆ ಬಂದಾಗ ಕನ್ನಡ ಭಾಷೆ ಕಲಿಯಬೇಕು ಅಂತ ನನಗೆ ಇಷ್ಟ ಇತ್ತು. ಅದರ ಜೊತೆಗೆ, ಎಎಸ್‌ಪಿ, ಎಸ್‌ಪಿ ಇದ್ದಾಗ ಕಲಿಯಲೇಬೇಕು. ಇಲ್ಲವಾದರೆ, ಪ್ರಮೋಷನ್, ಸಂಬಳ ಹೆಚ್ಚಳ ಆಗುವುದಿಲ್ಲ. ಆದರೆ, ನಾನು ಅದಕ್ಕಾಗಿ ಕಲಿತಿಲ್ಲ. ನನಗೆ ಭಾಷೆ ಕಲಿಯುವ ಇಷ್ಟ ಇತ್ತು. ಜನರ ಜೊತೆಗೆ ಮಾತನಾಡಬೇಕೆಂದರೆ, ಸ್ಥಳೀಯ ಭಾಷೆ ಗೊತ್ತಿರಬೇಕು. ಭಾಷೆ ಕಲಿಯುವುದು ವೃತ್ತಿಪರ ಅವಶ್ಯಕತೆಯೂ ಆಗಿತ್ತು. ಸಾಹಿತ್ಯ, ನನಗೆ ಹಿಂದಿ ಕವಿತೆಗಳ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ, ಭಾಷೆ ಕಲಿಯಲು ಪ್ರೇರೇಪಣೆ ಸಿಕ್ಕಿತು.

ಅಲ್ಲಮಪ್ರಭು ಮತ್ತು ಕಬೀರ್ ದಾಸರ ತುಲನಾತ್ಮಕ ಅಧ್ಯಯನಕ್ಕೆ ಪ್ರೇರಣೆ ಏನು?

1978ರಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿದ್ದಾಗ ಯು.ಆರ್. ಅನಂತಮೂರ್ತಿಯವರು ಬಂದಿದ್ದರು. ವಚನ ಸಾಹಿತ್ಯದ ಬಗ್ಗೆ ಹೇಳಿದ ಅವರು, ಎ.ಕೆ. ರಾಮಾನುಜನ್ ಅವರು ಬರೆದಿದ್ದ 'ಸ್ಪೀಕಿಂಗ್ ಆಫ್ ಶಿವ' ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದರು. ಪಣಂಬೂರಿಗೆ ಹೋದಾಗ ಆ ಪುಸ್ತಕ ತೆಗೆದುಕೊಂಡು ಓದಿದೆ. ವಚನ ಸಾಹಿತ್ಯ ಅತ್ಯುತ್ತಮ ಎನಿಸಿತು. ಅದು ನನಗೆ ಅಧ್ಯಯನಕ್ಕೆ ಪ್ರೇರಣೆ ನೀಡಿತು. ಅದರಲ್ಲಿ ನನಗೆ ಅಲ್ಲಮಪ್ರಭು ಅವರ ವಚನಗಳು ಬಹಳ ಇಷ್ಟವಾಯಿತು. ನಮ್ಮ ಬಾಲ್ಯದಲ್ಲಿ ಕಬೀರ್ ದಾಸ್ ಫೇಮಸ್. ಅವರ ಸಾಹಿತ್ಯದ ಬಗ್ಗೆ ನನಗೆ ತಿಳಿದಿತ್ತು. ಹಾಗಾಗಿ, 1986ರಲ್ಲಿ ಅಲ್ಲಮಪ್ರಭು ಮತ್ತು ಕಬೀರ್ ದಾಸರ ತೌಲನಿಕ ಅಧ್ಯಯನ ಏಕೆ ಮಾಡಬಾರದು ಅನ್ನಿಸಿತು. ಆದರೆ, ಅದಕ್ಕೊಂದು ಸಮಸ್ಯೆ ಇತ್ತು. ನಾನು ಓದಿದ್ದು ಎಂಎ ರಾಜಕೀಯ ವಿಜ್ಞಾನ. ಅಲ್ಲಮಪ್ರಭು ಮತ್ತು ಕಬೀರರ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಎಂಎ ಮಾಡಿದೆ. ಏಕೆಂದರೆ, ಹಿಂದಿಯಲ್ಲಿ ಅಧ್ಯಯನ ಮಾಡಲು ಭಾಷೆಯ ಬಗ್ಗೆ ಹೆಚ್ಚು ಹಿಡಿತ ಬೇಕಿತ್ತು. ಎಂಎ ಮುಗಿದ ಬಳಿಕ 4 ವರ್ಷಗಳಲ್ಲಿ ಅಧ್ಯಯನ ಮುಗಿಸಿದೆ. ಕನ್ನಡಕ್ಕೆ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಅನುವಾದ ಮಾಡಿದೆ..

ಕನ್ನಡ ಸಾಹಿತ್ಯವನ್ನು ನೀವು ಹಿಂದಿ ಭಾಷೆಗೆ ಭಾಷಾಂತರ ಮಾಡಿದ್ದೀರಿ. ಅದರ ಬಗ್ಗೆ ಹೇಳುವುದಾದರೆ

ಎಚ್.ಎಸ್. ಶಿವಪ್ರಕಾಶ್ ಅವರ ಒಂದು ಪುಸ್ತಕ ಭಾಷಾಂತರ ಮಾಡಿದ್ದೇನೆ. ಅವರದ್ದೇ ಎರಡು ನಾಟಕಗಳು ಪುಸ್ತಕ ರೂಪದಲ್ಲಿ ಬಂದಿವೆ. ನಾನು ಮೊದಲು ಗೋಪಾಲಕೃಷ್ಣ ಅಡಿಗ ಅವರ ಕವಿತೆಗಳನ್ನು ಅನುವಾದ ಮಾಡಿದೆ. ಬ್ಯಾಂಕ್ ಕಾಲೋನಿಯಲ್ಲಿದ್ದ ಅವರ ಮನೆಗೆ ಹೋಗಿ, ಅವರ ಜೊತೆ ಸಂವಾದ ನಡೆಸಿ ಅನುವಾದ ಮಾಡಿದೆ. ದ.ರಾ. ಬೇಂದ್ರೆ, ಯು.ಆರ್. ಅನಂತ ಮೂರ್ತಿಯವರ ಕೆಲವು ಕವಿತೆಗಳನ್ನು ಅನುವಾದಿಸಿದ್ದೇನೆ. ಚಂಪಾ, ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಅನುವಾದ ಮಾಡಿದ್ದೇನೆ. ಕೆಲವು ಪುಸ್ತಕ ರೂಪದಲ್ಲಿ ಬಂದಿಲ್ಲ. ಇಲ್ಲಿನ ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ. ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ಕಾದಂಬರಿಯನ್ನು ಹಿಂದಿಗೆ ಅನುವಾದ ಮಾಡಿದ್ದೇನೆ.

ಕನ್ನಡದಲ್ಲಿ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರಿದ ಸಾಹಿತ್ಯ

ಆರಂಭದಲ್ಲಿ ಗೋಪಾಲಕೃಷ್ಣ ಅಡಿಗರ ಕವಿತೆಗಳಲ್ಲಿ ನನಗೆ ಆಸಕ್ತಿ ಇತ್ತು. ಹಿಂದಿಯಲ್ಲಿ ಅವಾಗವಾಗ ಕವಿತೆ ಬರೆಯುತ್ತಿದ್ದ ನನಗೆ ಕನ್ನಡದ ಕವಿತೆಗಳ ಬಗ್ಗೆ ಕುತೂಹಲವಿತ್ತು. ಬಳಿಕ, ಎಚ್.ಎಸ್. ಶಿವಪ್ರಕಾಶ್ ಅವರ ಕವಿತೆಗಳು ಬಹಳ ಇಷ್ಟವಾಯ್ತು. ಒಟ್ಟಾರೆ ನೋಡುವುದಾದರೆ, ಅಲ್ಲಮ ಪ್ರಭು ನನಗೆ ತುಂಬಾ ಇಷ್ಟ. ಅವರ ಎತ್ತಣ ಮಾಮರ, ಎತ್ತಣ ಕೋಗಿಲೆ ವಚನ ನನಗೆ ಬಹಳ ಇಷ್ಟ. ಅದು ನನ್ನ ಜೀವನಕ್ಕೂ ಅದು ಅನ್ವಯಿಸಿತ್ತು. ಉತ್ತರ ಪ್ರದೇಶದವನಾದ ನನಗೆ ಕನ್ನಡ ಭಾಷೆ ಮೇಲೆ ಪ್ರೀತಿ ಬೆಳೆಯಿತು .ಇದರ ಜೊತೆಗೆ ಶಿಲೆಯೊಳಗಣ ಪಾವಕನಂತೆ ವಚನ ಇಷ್ಟ. ಬಸವೇಶ್ವರರು ಸೇರಿದಂತೆ ಬೇರೆ ವಚನಕಾರರೂ ಕಡಿಮೆ ಅಲ್ಲ. ಅವರ ವಚನಗಳು ಜೀವನಕ್ಕೆ ದಾರಿದೀಪದಂತಿವೆ. ವೈಯಕ್ತಿಕವಾಗಿ ಅಲ್ಲಮ ಪ್ರಭು ಇಷ್ಟ.

ಅನ್ಯಭಾಷಿಕರು ಕನ್ನಡದ ಈ ಸಾಹಿತ್ಯ ಓದಲೇಬೇಕೆಂದರೆ ಯಾವುದನ್ನು ಹೇಳುತ್ತೀರಿ

ಇದು ಸ್ವಲ್ಪ ಕಷ್ಟದ ಕೆಲಸ. ಆದರೆ, ಶೂನ್ಯ ಸಂಪಾದನೆ ಎಂಬ ಪುಸ್ತಕ ಓದಲು ಸಲಹೆ ನೀಡುತ್ತೇನೆ. ಇದು ಕರ್ನಾಟಕ ವಿಶ್ವವಿದ್ಯಾಲಯದ ವಚನ ಸಂಕಲನ. ಐದು ಸಂಪುಟಗಳಲ್ಲಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿದೆ. ಅದರಲ್ಲಿ ಬಸವೇಶ್ವರ್, ಅಕ್ಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಎಲ್ಲ ಶಿವಶರಣರ ವಚನಗಳು ಸಿಗುತ್ತವೆ. ಐದು ಸಂಪುಟ ಇದ್ದರೂ ಓದಲು ಸುಲಭ. ಸಿದ್ದಲಿಂಗಯ್ಯ, ಶಿವಪ್ರಕಾಶ್ ಅವರ ಕವಿತೆಗಳನ್ನೂ ಓದಬೇಕು. ಈ ಕವಿತೆಗಳು ವಿಶಿಷ್ಟ, ಸಾರ್ವಭೌಮತ್ವ ಹೊಂದಿವೆ.

ಬೇರೆ ರಾಜ್ಯಗಳಿಂದ ಬಂದು ಭಾಷೆ ಕಲಿಯದ ಅಧಿಕಾರಿಗಳಿಗೆ ನಿಮ್ಮ ಸಲಹೆ

ಎಲ್ಲರೂ ಕನ್ನಡ ಭಾಷೆ ಕಲಿಯಬೇಕು. ಅದು ವೃತ್ತಿಯ ಅವಶ್ಯಕತೆ ಕೂಡ ಹೌದು. ಜನರ ಜೊತೆ ಕೆಲಸ ಮಾಡುವಾಗ ಭಾಷೆ ತಿಳಿದಿರಬೇಕು. ಭಾಷೆ ಗೊತ್ತಿದರೆ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಹೊರಗಿನಿಂದ ಬಂದವರು ಇಲ್ಲಿನ ಭಾಷೆ ಕಲಿತಾಗ ಕೆಲಸ ಸುಲಭವಾಗಿಬಿಡುತ್ತದೆ.

ಕನ್ನಡ ಕಲಿಯಲು, ಅಧ್ಯಯನ ಮಾಡಲು ಯಾರ ಜೊತೆ ಒಡನಾಟವಿತ್ತು

ಎಚ್.ಎಸ್. ಶಿವಪ್ರಕಾಶ್, ಡಿ.ಆರ್. ನಾಗರಾಜ್, ಕೀ.ರಂ. ನಾಗರಾಜ, ಸಿದ್ದಲಿಂಗಯ್ಯ, ಗೋಪಾಲಕೃಷ್ಣ ಅಡಿಗ, ಹೆಗ್ಗೋಡು ಪ್ರಸನ್ನ ಅವರ ಒಡನಾಟವಿತ್ತು. ಇವರ ಜೊತೆ ಚರ್ಚೆ, ಸಂವಾದದಿಂದ ಭಾಷೆ ಕಲಿಯಲು, ಅಧ್ಯಯನದಲ್ಲಿ ಬಹಳ ಅನುಕೂಲವಾಯಿತು. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಕನ್ನಡದ ಓದು ಈಗಲೂ ಮುಂದುವರಿದಿದೆಯಾ?

ಸ್ವಲ್ಪ ಕಡಿಮೆ. ವಿವೇಕ್ ಶಾನಭಾಗ್ ಅವರ ಘಾಚರ್ ಘೋಚರ್ ಅನುವಾದ ಮಾಡಿದೆ. ಕಳೆದ ವರ್ಷ ಹರಿಯಾಣದ ಅಶೋಕ ವಿಶ್ವಿವಿದ್ಯಾಲಯದಲ್ಲಿ ಒಂದು ತಿಂಗಳು ಇದ್ದೆ. ಅಲ್ಲಿ ವಿದ್ಯಾರ್ಥಿಗಳ ಜೊತೆ ಅಲ್ಲಮಪ್ರಭು ಅವರ ವಚನದ ಬಗ್ಗೆ ಸಂವಾದ ಇತ್ತು. ಅಲ್ಲಿ ಮತ್ತೆ ವಚನಗಳ ಅಧ್ಯಯಯನ ನಡೆಸಿದ್ದೇನೆ.