ಕನ್ನಡ ಪರ ಹೋರಾಟ ಎಂದಾಕ್ಷಣ ಅನೇಕರ ಹೆಸರುಗಳು ಮುನ್ನಲೆಗೆ ಬರುತ್ತವೆ. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿರುವುದು ಪೈಲ್ವಾನ್ ರಂಜಾನ್‌ ಸಾಬ್ ಪಿಂಜಾರ. ದೈಹಿಕ ಬಲದ ಹೊರತಾಗಿಯೂ ಕನ್ನಡದ ಮೇಲಿನ ಅಚಲ ಪ್ರೀತಿ, ಪ್ರಾಮಾಣಿಕತೆ ಮತ್ತು ದಿಟ್ಟ ಹೋರಾಟದಿಂದಾಗಿ ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಸ್ಥಾನ ಪಡೆದಿದ್ದಾರೆ.

ʼಪೈಲ್ವಾನ್ʼ ಎಂಬ ಬಿರುದು ಅವರ ಹೆಸರಿನೊಂದಿಗೆ ಬೆಸೆದುಕೊಂಡಿರುವುದಕ್ಕೆ ಅವರ ಗಟ್ಟಿಮುಟ್ಟಾದ ಶರೀರ ಮಾತ್ರ ಕಾರಣವಾಗಿರಲಿಲ್ಲ. ಬದಲಾಗಿ, ಅವರ ವ್ಯಕ್ತಿತ್ವದಲ್ಲಿನ ಧೈರ್ಯ ಮತ್ತು ಸಂಕಷ್ಟದ ಸಂದರ್ಭಗಳಲ್ಲೂ ಕುಗ್ಗದ ಮನೋಭಾವವೇ ಕಾರಣವಾಗಿತ್ತು.

ಕುಸ್ತಿಪಟುವಾಗಿ (ಪೈಲ್ವಾನ್) ಜೀವನ ಆರಂಭಿಸಿದ ಅವರು, ದೈಹಿಕ ಸದೃಢತೆಯೊಂದಿಗೆ ಮಾನವೀಯ ಮೌಲ್ಯಗಳನ್ನೂ ಮೈಗೂಡಿಸಿಕೊಂಡರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅವರ ಗುಣವೇ ಅವರನ್ನು ಕನ್ನಡ ಪರ ಹೋರಾಟಕ್ಕೆ ಇಳಿಸಿತು.

1956ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲ ಒಗ್ಗೂಡಿಸಿ ಮೈಸೂರು ರಾಜ್ಯ ರೂಪಿಸಿದಾಗ ಅದು ಕನ್ನಡಿಗರ ಪಾಲಿಗೆ ಐತಿಹಾಸಿಕ ಜಯ ಸಿಕ್ಕಿತ್ತು. ದಶಕಗಳ ಹೋರಾಟ, ತ್ಯಾಗ, ಬಲಿದಾನ ಮತ್ತು ಕನ್ನಡದ ಮೇಲಿನ ಅಪಾರ ಅಭಿಮಾನ ಈ ಏಕೀಕರಣದ ಹಿಂದಿತ್ತು. ಅದರಲ್ಲಿ ಬಳ್ಳಾರಿಯ ಯುವ ಕುಸ್ತಿಪಟು ರಂಜಾನ್‌ ಸಾಬ್ ಪಿಂಜಾರ ಅವರ ಹೆಸರು ಸದಾ ಸ್ಮರಣೀಯ.

ಏಕೀಕರಣಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ರಂಜಾನ್‌ ಸಾಬ್ ಅವರ ಸಾಹಸ, ಕನ್ನಡಾಭಿಮಾನ ಮತ್ತು ತ್ಯಾಗ ಇಂದಿನ ಯುವ ಪೀಳಿಗೆಗೆ ಸದಾ ಪ್ರೇರಣಾದಾಯಕ.

ಬಾಲ್ಯದಿಂದಲೇ ಕನ್ನಡ ಚಳವಳಿಯ ಒಡನಾಟ

1920ರ ದಶಕದಿಂದಲೇ ರಂಜಾನ್ ಸಾಬ್ ಅವರು ಕನ್ನಡ ನಾಡಿನ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಂದೆ ಕರ್ನಾಟಕ ಆಕ್ಷನ್ ಕಮಿಟಿಯ ಪ್ರಮುಖರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಹೋರಾಟ, ಸಂಘಟನೆ ಮತ್ತು ಕನ್ನಡಪರ ಚಟುವಟಿಕೆಗಳ ಮೂಲಕ ಬಳ್ಳಾರಿಯ ಕನ್ನಡ ಹೋರಾಟಗಾರರಲ್ಲಿ ಪ್ರಮುಖ ವ್ಯಕ್ತಿಯಾಗಿ ಬೆಳೆದರು.

ರಂಜನ್‌ ಸಾಬ್ ಬಳ್ಳಾರಿಯ ಜಿಲ್ಲೆಯ ಬ್ರೂಸ್‌ಪೇಟೆಯ ಪಿಂಜಾರ ಓಣಿಯ ಹುಸೇನ್ ಸಾಬ್ ಅವರ ಮಗ.‌ ಬಾಲ್ಯದಿಂದಲೇ ಕುಸ್ತಿಯ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ತಂದೆ ಕೂಡ ಮಗ ಒಬ್ಬ ಶ್ರೇಷ್ಠ ಕುಸ್ತಿಪಟುವಾಗಬೇಕೆಂದು ಬಯಸಿದ್ದರು. ತಂದೆಯ ಕನಸನ್ನು ನನಸು ಮಾಡಿದ ರಂಜಾನ್‌ ಸಾಬ್ ದೈಹಿಕ ಶಕ್ತಿಯ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು.

ಬಳ್ಳಾರಿಯ ವಿಲೀನದ ಸಂಭ್ರಮಕ್ಕೆ ಸಿದ್ಧತೆ

ದೀರ್ಘಕಾಲದ ಹೋರಾಟದ ಫಲವಾಗಿ ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರ ಪ್ರಕಾರ ಬಳ್ಳಾರಿ ಜಿಲ್ಲೆಯ ಬಹುತೇಕ ಪ್ರದೇಶಗಳು ಮೈಸೂರು ರಾಜ್ಯದೊಂದಿಗೆ ವಿಲೀನಗೊಳ್ಳಬೇಕಾಗಿತ್ತು. ಆದೋನಿ, ಆಲೂರು ಮತ್ತು ರಾಯದುರ್ಗ ತಾಲ್ಲೂಕುಗಳು ಇದರಿಂದ ಹೊರಗುಳಿದಿದ್ದವು.

ಈ ಐತಿಹಾಸಿಕ ನಿರ್ಧಾರದ ಸಂಭ್ರಮವನ್ನು ಆಚರಿಸಲು 1953ರ ಅಕ್ಟೋಬರ್ 1ರಂದು ಬಳ್ಳಾರಿಯಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದರು. ಬಳ್ಳಾರಿಯ ವಿಜಯ ಮಹಲ್‌ನಿಂದ ಬಿಡಿಎ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಸಲು ಯೋಜಿಸಲಾಗಿತ್ತು.

ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದ ಕಾರಣ ಬಿಡಿಎ ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿತ್ತು. ಈ ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿಯನ್ನು ರಂಜಾನ್‌ ಸಾಬ್‌ ವಹಿಸಿಕೊಂಡಿದ್ದರು.

ದಾವಣಗೆರೆಯ ಬೇರು, ಜಾಗತಿಕ ಚಿಂತನೆಯ ಹರವು: ವಿವೇಕ್ ತೋಂಟದಾರ್ಯ ಸಾಧನೆಯ ಹಾದಿ

ಕನ್ನಡದ ಧ್ವಜದ ರಕ್ಷಣೆಗೆ ಕುಸ್ತಿಪಟುಗಳ ಕಾವಲು

ಬಳ್ಳಾರಿಯನ್ನು ಮೈಸೂರು ರಾಜ್ಯಕ್ಕೆ ಸೇರಿಸುವ ನಿರ್ಧಾರದಿಂದ ಕೆಲವು ತೆಲುಗು ಭಾಷಿಕ ಗುಂಪುಗಳು ಅಸಮಾಧಾನಗೊಂಡಿದ್ದವು. ಕಾರ್ಯಕ್ರಮದ ಸಂದರ್ಭದಲ್ಲಿ ಗಲಭೆ ಅಥವಾ ವಿಧ್ವಂಸಕ ಕೃತ್ಯಗಳು ನಡೆಯಬಹುದು ಎಂಬ ಆತಂಕ ಕನ್ನಡ ಹೋರಾಟಗಾರರಲ್ಲಿತ್ತು. ವಿಶೇಷವಾಗಿ ಕಾರ್ಯಕ್ರಮಕ್ಕಾಗಿ ನಿರ್ಮಿಸಿದ್ದ ಪೆಂಡಾಲ್‌ಗೆ ಬೆಂಕಿ ಹಚ್ಚುವ ಸಂಚು ನಡೆಯುತ್ತಿದೆ ಎಂಬ ಮಾಹಿತಿ ಹರಡಿತ್ತು.

ಇದರಿಂದ ಎಚ್ಚೆತ್ತ ರಂಜಾನ್‌ ಸಾಬ್‌ ಅವರು ತಕ್ಷಣವೇ ತಮ್ಮ ಸಹ ಕುಸ್ತಿಪಟುಗಳನ್ನು ಸಂಘಟಿಸಿದರು. ತಮ್ಮ ಜೊತೆ 12 ಮಂದಿ ಕುಸ್ತಿಪಟುಗಳನ್ನು ಸೇರಿಸಿ ಸೆಪ್ಟೆಂಬರ್ 30ರ ರಾತ್ರಿಯಿಡೀ ಪೆಂಡಾಲ್ ಮತ್ತು ಧ್ವಜಸ್ತಂಭದ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡರು.‌

ರಂಜಾನ್‌ ಸಾಬ್ ಅವರ ಜೀವನದ ಕುರಿತು ಲೇಖಕ ಸಿದ್ರಾಮ ಕಲ್ಮಠ ಅವರು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ರಂಜಾನ್‌ ಸಾಬ್ ಅವರು ಮಸೀದಿಯಲ್ಲಿ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಅಲ್ಲಿ ಕನ್ನಡ ಮತ್ತು ಉರ್ದು ಭಾಷೆಗಳನ್ನು ಕಲಿತಿದ್ದ ಅವರು, ನಂತರ ಶಾಲೆ ತೊರೆದು ಕುಸ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಅದಾಗ್ಯೂ ಕನ್ನಡ ಸಾಹಿತಿಗಳು, ಕೀರ್ತನಕಾರರು, ಸಂಗೀತಗಾರರು ಮತ್ತು ವಿದ್ವಾಂಸರ ಒಡನಾಟದಿಂದ ಕನ್ನಡ ಪ್ರೇಮ ಬೆಳಸಿಕೊಂಡಿದ್ದರು.

ʼರಂಜಾನ್‌ ಸಾಬ್ ಕನ್ನಡಕ್ಕಾಗಿ ಬದುಕಿದ ಮತ್ತು ಕನ್ನಡಕ್ಕಾಗಿಯೇ ಪ್ರಾಣ ತೆತ್ತ ಕನ್ನಡಪ್ರೇಮಿʼ ಎಂದು ಸಿದ್ರಾಮ ಕಲ್ಮಠ ಅವರು ಉಲ್ಲೇಖಿಸಿದ್ದಾರೆ.

ಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲು

1,400 ಹೋರಾಟಗಾರರೊಂದಿಗೆ ಜೈಲು ವಾಸ

ರಂಜಾನ್‌ ಸಾಬ್ ಅವರು ಕೇವಲ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವ್ಯಕ್ತಿಯಾಗಿರಲಿಲ್ಲ. ಬದಲಾಗಿ ಅವರು ಹಳ್ಳಿಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸುವ, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮತ್ತು ಕನ್ನಡದ ಪರವಾಗಿ ಜನಾಭಿಪ್ರಾಯ ರೂಪಿಸುವ ಸಂಘಟನಾ ಸಾಮರ್ಥ್ಯ ಹೊಂದಿದ್ದರು.

ಬಳ್ಳಾರಿಯನ್ನು ಆಂಧ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನಗಳ ವಿರುದ್ಧ ಅವರು ನಿರಂತರವಾಗಿ ಹೋರಾಡಿದರು. ಈ ಹೋರಾಟದ ಸಂದರ್ಭದಲ್ಲಿ ಅವರೊಂದಿಗೆ ಸುಮಾರು 1,400 ಮಂದಿ ಸಹಚರರ ಜೊತೆ ಜೈಲು ವಾಸವನ್ನೂ ಅನುಭವಿಸಿದ್ದರು.

1952ರಲ್ಲಿ ಅವರು ಬಳ್ಳಾರಿ ಜಿಲ್ಲಾ ಕರ್ನಾಟಕ ಆಕ್ಷನ್ ಕಮಿಟಿಯ ಮುಖ್ಯ ಸಂಘಟಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಅವರು, ಬಳ್ಳಾರಿ ಕರ್ನಾಟಕದಲ್ಲಿಯೇ ಉಳಿಯಬೇಕು ಎಂಬ ಬೇಡಿಕೆಗೆ ಬೆಂಬಲವಾಗಿ ಒಂದು ಲಕ್ಷಕ್ಕೂ ಅಧಿಕ ಜನರ ಸಹಿ ಸಂಗ್ರಹ ಅಭಿಯಾನ ನಡೆಸಿದ್ದರು.

ಕರುನಾಡೋತ್ಸವ: ತಮಿಳುನಾಡಿಗೆ ಸೇರಿದ್ದರೂ ಕನ್ನಡ ಅಸ್ಮಿತೆ ಉಳಿಸಿಕೊಂಡ ‘ತಾಳವಾಡಿ’

ಆಸಿಡ್ ದಾಳಿಗೆ ಬಲಿಯಾದ ಕನ್ನಡದ ಕುವರ

1953ರ ಸೆಪ್ಟೆಂಬರ್ 30ರ ರಾತ್ರಿ ಮುಗಿದು ಅಕ್ಟೋಬರ್ 1ರ ಮುಂಜಾನೆ ಬಳ್ಳಾರಿ ಕನ್ನಡ ನಾಡಿನೊಂದಿಗೆ ಒಂದಾಗುವ ಸಂಭ್ರಮಕ್ಕೆ ಸಜ್ಜಾಗುತ್ತಿದ್ದ ಐತಿಹಾಸಿಕ ದಿನದಂದು ದುರಂತವೊಂದು ಸಂಭವಿಸಿತು.

ಪೆಂಡಾಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ರಂಜಾನ್ ಸಾಬ್ ಅವರ ಮೇಲೆ ಕನ್ನಡ ವಿರೋಧಿ ಗುಂಪೊಂದು ಆಸಿಡ್ ದಾಳಿ ನಡೆಸಿತ್ತು. ಮೈಮೇಲೆ ಆಸಿಡ್ ಬಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದರು ರಂಜಾನ್ ಸಾಬ್‌ ಅವರು ದಾಳಿಕೋರರನ್ನು ಬೆನ್ನಟ್ಟಿದರು. ಅದಾಗ್ಯೂ ತೀವ್ರ ನೋವಿನಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಬಳ್ಳಾರಿಯ ಗೌಸಾ ಆಸ್ಪತ್ರೆಗೆ (ಈಗಿನ ಜಿಲ್ಲಾಸ್ಪತ್ರೆ) ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿ ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ 1953ರ ಅಕ್ಟೋಬರ್ 2ರಂದು ತಮ್ಮ ನಲವತ್ತರ ಪ್ರಾಯದಲ್ಲಿ ರಂಜಾನ್‌ ಸಾಬ್‌ ಅವರು ಕೊನೆಯುಸಿರೆಳೆದರು.

ಆ ಮೂಲಕ ಕನ್ನಡ ನಾಡಿನ ಏಕೀಕರಣದ ಸಂಭ್ರಮದ ದಿನಂದು ನಾಡಿಗಾಗಿ ಹೋರಾಡಿದ ಧೀರ ಹೋರಾಟಗಾರನ ಬದುಕು ದುರಂತ ಅಂತ್ಯ ಕಂಡಿತು.