ಬೆಂಗಳೂರು, ನವೆಂಬರ್ 3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಕುಂಬಾರನಹಳ್ಳಿಯಲ್ಲಿರುವ ಗುಜರಿ ಗೋದಾಮಿನಲ್ಲಿ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡಿದ್ದರಿಂದ ಗೋದಾಮಿನೊಳಗಿದ್ದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಗುಜರಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಪ್ಲಾಸ್ಟಿಕ್, ಕಾಗದ ಸೇರಿದಂತೆ ಸುಲಭವಾಗಿ ಬೆಂಕಿ ಹತ್ತುವಂತಹ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಅಗ್ನಿ ಅವಘಡ ಸಂಭವಿಸಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

