ಬೆಂಗಳೂರು: 2028ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಈ ಗುರಿ ಸಾಧಿಸಲು ಪಕ್ಷದ ಪದಾಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ನೂತನ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಸೂಚನೆ ನೀಡಿದ್ದಾರೆ.

ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾವು ಪ್ರತಿ ತಿಂಗಳು ಹತ್ತು ದಿನ ಕರ್ನಾಟಕಕ್ಕೆ ಸಮಯ ಮೀಸಲಿಡಲಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು. ಪಕ್ಷದ ಪದಾಧಿಕಾರಿಗಳೂ ನಿರಂತರ ಪ್ರವಾಸ ಮಾಡಬೇಕು. ಆನ್‌ಲೈನ್ ಸಭೆಗಳಿಗೆ ಸೀಮಿತವಾಗದೆ ನೇರವಾಗಿ ಕಾರ್ಯಕರ್ತರು ಮತ್ತು ಜನರ ನಡುವೆ ಇರಬೇಕು ಎಂದು ಸೂಚಿಸಿದರು.

ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾವು ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾಗಿ ತಿಳಿಸಿದ ಅವರು, ಪಕ್ಷದ ವಿವಿಧ ಮೋರ್ಚಾಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ಸಕಾರಾತ್ಮಕ ವಾತಾವರಣವಿದೆ. ಇತ್ತೀಚಿನ ವಿಧಾನಪರಿಷತ್ ಚುನಾವಣೆಗಳಲ್ಲಿನ ಗೆಲುವು ಮುಂದಿನ ದಿನಗಳಲ್ಲೂ ಪ್ರತಿಫಲನವಾಗಬೇಕು. ಈ ಗೆಲುವಿನ ಉತ್ಸಾಹವನ್ನು ಸಂಘಟನಾತ್ಮಕವಾಗಿ ಬಳಸಿಕೊಂಡು 2028ರ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

'ತಮಿಳುನಾಡಿಗೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಪ್ರತ್ಯೇಕ ಧ್ವಜ ಬೇಕು'; TVK ಸಚಿವರ ಆಗ್ರಹಕ್ಕೆ ಬಿಜೆಪಿ ಕಿಡಿ

ರಾಜ್ಯ ಉಸ್ತುವಾರಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ ಹರೀಶ್ ದ್ವಿವೇದಿ ಅವರನ್ನು ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಫಾರ್ಚನೆ ಜೊತೆಗೆ ಜಗನ್ನಾಥ ರಾವ್ ಜೋಶಿ ಪುತ್ಥಳಿಗೆ ದ್ವಿವೇದಿ ಮಾಲಾರ್ಪಣೆ ಮಾಡಿದರು.

ಉತ್ತರ ಪ್ರದೇಶದಲ್ಲಿ ಜನಿಸಿದ ದ್ವಿವೇದಿ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಅವರು ಉತ್ತರ ಪ್ರದೇಶ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಬಿಜೆಪಿ ನಾಯಕರು 'ಸ್ವಜನಪಕ್ಷಪಾತ' (cronyism) ಕೈಬಿಟ್ಟು, ಪಕ್ಷದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕೆಂದು ದ್ವಿವೇದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ವಿರೋಧಿಸಿ, 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಎಂಬ ಅಭಿಯಾನದ ಅಡಿಯಲ್ಲಿ ಮಂಗಳವಾರ ಕೋಲಾರದಲ್ಲಿ ನಡೆಯಲಿರುವ ಪಕ್ಷದ ಪಾದಯಾತ್ರೆಯಲ್ಲಿ ಅವರು ಭಾಗವಹಿಸಲಿದ್ದಾರೆ.