ಕ್ರೈಸ್ಟ್​ಚರ್ಚ್​ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ಎ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ  ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಮೊದಲ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು 346 ರನ್​ಗಳು ಮಾತ್ರ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಎ 424 ರನ್​ ಕಲೆಹಾಕಿತು.

78 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಜೈಸ್ವಾಲ್ ಶತಕ ಪೂರೈಸಿದ್ದು ಕೇವಲ 119 ಎಸೆತಗಳಲ್ಲಿ.

ಶತಕದ ಬಳಿಕವೂ ಆರ್ಭಟ ಮುಂದುವರೆಸಿದ ಜೈಸ್ವಾಲ್, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮವಾಗಿ ಕೇವಲ 154 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ 151 ರನ್‌ಗಳು ಮೂಡಿಬಂದವು. ಮತ್ತೊಂದೆಡೆ ಯಶಸ್ವಿ ಜೈಸ್ವಾಲ್​ಗೆ ಉತ್ತಮ ಸಾಥ್ ನೀಡಿದ ಯಶ್ ರಾಥೋಡ್ 122 ಎಸೆತಗಳಲ್ಲಿ 9 ಫೋರ್​ಗಳೊಂದಿಗೆ ಅಜೇಯ 100 ರನ್ ಬಾರಿಸಿದರು.

ಇತ್ತ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಕಾಯ್ದುಕೊಂಡ ಯಶಸ್ವಿ ಜೈಸ್ವಾಲ್, 162 ಎಸೆತಗಳಲ್ಲಿ 15 ಫೋರ್  ಹಾಗೂ 5 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 155 ರನ್ ಚಚ್ಚಿದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ‘ಎ’ ತಂಡ ಕೇವಲ 52.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿತು. ಆ ಮೂಲಕ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ,  ಕಳಪೆ ಫಾರ್ಮ್‌ನಿಂದ ಕಂಗಾಲಾಗಿದ್ದ ಜೈಸ್ವಾಲ್ ಅವರ ಬ್ಯಾಟ್‌ನಿಂದ ಮೂಡಿಬಂದ ಈ ವಿಸ್ಫೋಟಕ ಸೆಂಚುರಿ, ಕೇವಲ ಇಂಡಿಯಾ ‘ಎ’ ತಂಡಕ್ಕೆ ಮಾತ್ರವಲ್ಲ, ಮುಂಬರುವ ಸರಣಿಗಳಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೂ ಶುಭಸೂಚನೆಯಾಗಿದೆ. ಕಿವೀಸ್ ನಾಡಿನ ಕಠಿಣ ಪಿಚ್‌ಗಳಲ್ಲೇ ರನ್ ಮಳೆ ಹರಿಸಿರುವ ಈ ಯುವ ಆಟಗಾರ, ತಾವು ಮುಂಬರುವ ದಿನಗಳಲ್ಲಿ ಎದುರಾಳಿಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಫಾರ್ಮ್ ಹೀಗೆಯೇ ಮುಂದುವರಿದರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟಿಂಗ್ ವಿಭಾಗಕ್ಕಂತೂ ಆನೆ ಬಲ ಬಂದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್ ), ಕ್ರಿಶ್ಚಿಯನ್ ಕ್ಲಾರ್ಕ್ , ಬ್ರೆಟ್ ರಾಂಡೆಲ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್.

ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ

ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಯಶ್ ರಾಥೋಡ್ , ಧ್ರುವ್ ಜುರೆಲ್ (ನಾಯಕ) , ಸ್ಮರಣ್ ರವಿಚಂದ್ರನ್ , ವಾಷಿಂಗ್ಟನ್ ಸುಂದರ್ , ಮಾನವ್ ಸುತಾರ್ , ಆಕಾಶ್ ದೀಪ್ , ಮೊಹಮ್ಮದ್ ಸಿರಾಜ್ , ಮುಖೇಶ್ ಕುಮಾರ್.