ಭುವನೇಶ್ವರ್ ಕುಮಾರ್ ಅವರು ಬರೋಬ್ಬರಿ 4 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವ ಮೂಲಕ ದೊಡ್ಡ ನಿರೀಕ್ಷೆಯನ್ನ ಹುಟ್ಟು ಹಾಕಿದರು. ಆದರೆ ಅವರ ಪ್ರದರ್ಶನವು ತುಂಬಾ ನಿರಾಸದಾಯಕಾಗಿತ್ತು. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭುವಿ ಆಯ್ಕೆಗೆ ವಿರೋಧ

ಭುವನೇಶ್ವರ್ ಕುಮಾರ್ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ್.. ಭುವನೇಶ್ವರ್ ಕುಮಾರ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡುವುದರಲ್ಲಿ ಅರ್ಥವಿಲ್ಲ. ಟಿ20 ವಿಶ್ವಕಪ್ ಇನ್ನೂ ಬಹಳ ದೂರದಲ್ಲಿದೆ. ಏಕದಿನ ವಿಶ್ವಕಪ್ ಸಮೀಪದಲ್ಲಿದೆ. ಆದ್ದರಿಂದ, ಭುವನೇಶ್ವರ್ ಅವರನ್ನು ಟಿ20 ಗಿಂತ ಏಕದಿನ ಪಂದ್ಯಗಳಲ್ಲಿ ಆಯ್ಕೆ ಮಾಡಬೇಕಿತ್ತು. ಭುವನೇಶ್ವರ್ ಅವರ ಮರಳುವಿಕೆಯನ್ನು ಅವರು ಸಮರ್ಥಿಸಿಕೊಂಡರೂ, ಟಿ20 ಸ್ವರೂಪದಲ್ಲಿ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಆಯ್ಕೆದಾರರನ್ನು ಟೀಕಿಸಿದ್ದಾರೆ.

ನನ್ನ ಪ್ರಕಾರ.. ಭುವನೇಶ್ವರ್ ಕುಮಾರ್ ಅವರನ್ನು ಟಿ20ಐ ಸರಣಿಯಲ್ಲಿ ಆಡಿಸುವುದು ತಪ್ಪು ನಿರ್ಧಾರ. ಭುವನೇಶ್ವರ್ ಹಿರಿಯ ಆಟಗಾರ ಮತ್ತು ಉತ್ತಮ ಬೌಲರ್ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಟಿ20 ವಿಶ್ವಕಪ್ ಇನ್ನೂ ಬಹಳ ದೂರದಲ್ಲಿದೆ. ಇದು ಅವರನ್ನು ಈ ಸ್ವರೂಪದಲ್ಲಿ ಆಡಿಸುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. 50 ಓವರ್‌ಗಳ ವಿಶ್ವಕಪ್ ಸಮೀಪದಲ್ಲಿದೆ. ಮತ್ತು ನೀವು ಭುವನೇಶ್ವರ್ ಅವರನ್ನು ಅದಕ್ಕಾಗಿ ಸಿದ್ಧಪಡಿಸುತ್ತಿದ್ದರೆ ಅದಕ್ಕೆ ಒಂದು ಅರ್ಥ ಬರುತ್ತಿತ್ತು ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಮಾತು ಮುಂದುವರಿಸಿ ಮಾತನ್ನಾಡಿರುವ ಪಠಾಣ್.. ಟಿ20 ಸರಣಿಯಲ್ಲಿ ಭುವನೇಶ್ವರ್ ಅವರನ್ನು ಸೇರಿಸಿಕೊಂಡು ಯುವ ಬೌಲರ್‌ಗಳಿಗೆ ಅವಕಾಶ ತಪ್ಪಿಸಿದ್ದೀರಿ. ಅವರ ಸ್ಥಾನದಲ್ಲಿ ಯುವ ಬೌಲರ್‍ ಆಡಬಹುದಿತ್ತು. ಅಮೂಲ್ಯವಾದ ಅನುಭವ ಪಡೆಯಬಹುದಿತ್ತು. ಮಯಾಂಕ್ ಯಾದವ್ ಎಲ್ಲಾ ಪಂದ್ಯಗಳನ್ನೂ ಆಡಿ ಅನುಭವ ಪಡೆಯಬಹುದಿತ್ತು. ಪ್ರಿನ್ಸ್ ಯಾದವ್ ಕೂಡ ಆಡಬಹುದಿತ್ತು. ಭುವಿ ಆಡುವ ಮೂಲಕ.. ಅದು ಯುವ ಆಟಗಾರರಿಗೆ ಮಿಸ್ ಆಗಿದೆ ಎಂದು ಪಠಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಜಿಂಡ್ ವಿರುದ್ಧ ಭುವಿ ಪ್ರದರ್ಶನ ಹೇಗಿತ್ತು?

ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಒಟ್ಟು ಐದು ಟಿ-20 ಪಂದ್ಯಗಳನ್ನ ಆಡಿತ್ತು. ಅದರಲ್ಲಿ ಮೂರು ಪಂದ್ಯಗಳನ್ನ ಗೆದ್ದುಕೊಂಡು ಸರಣಿಯನ್ನ ವಶಕ್ಕೆ ಪಡೆಯಿತು. ಎದುರಾಳಿ ನ್ಯೂಜಿಲೆಂಡ್ ಎರಡು ಪಂದ್ಯಗಳನ್ನ ಗೆದ್ದುಕೊಂಡಿತು. ಇನ್ನು ಸರಣಿಯಲ್ಲಿ ಟೀಂ ಇಂಡಿಯಾ ಬೌಲರ್‌‌ಗಳು ಕಳಪೆ ಪ್ರದರ್ಶನ ನೀಡಿದರು. ಅವರಲ್ಲಿ ಭುವಿ ಕೂಡ ಹೊರತಾಗಿರಲಿಲ್ಲ. ನಾಲ್ಕು ಪಂದ್ಯಗಳನ್ನ ಆಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆದುಕೊಂಡರು. ಅದರ ಹೊರತಾಗಿ ತುಂಬಾ ದುಬಾರಿ ಆದರು. 9ಕ್ಕೂ ಹೆಚ್ಚು ಎಕನಾಮಿಕ್ ದರದಲ್ಲಿ ರನ್‌ಗಳನ್ನ ಬಿಟ್ಟುಕೊಟ್ಟರು. ಇಲ್ಲಿ ಪಠಾಣ್ ಅವರು ಭುವಿಯನ್ನ ಟಿ20ಗೆ ಆಯ್ಕೆ ಮಾಡಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ-20 ಬದಲಿಗೆ ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡಬೇಕಿತ್ತು ಅನ್ನೋದು ಪಠಾಣ್ ವಾದ ಆಗಿದೆ.