ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಬಂದು ಸ್ಪರ್ಧಿಗಳ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಆಟದಲ್ಲಿ ಎಲ್ಲಿ ಎಡವಲಾಗುತ್ತಿದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ತಿಳಿಸಿಕೊಡುತ್ತಾರೆ. ಇಂತಹ ಸುಳಿವುಗಳನ್ನು ಗ್ರಹಿಸಿ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿರುತ್ತದೆ. ಆದರೆ ಮನೆಯಲ್ಲಿರುವ ಸ್ಪರ್ಧಿಗಳು ಮಾತ್ರ ಸುದೀಪ್ ಮಾತುಗಳನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತೆ ಮತ್ತೆ ಎಡವುತ್ತಿದ್ದಾರೆ.

ಕಳೆದ ವಾರ ನಡೆದ ಗ್ರೋಸರಿ ಟಾಸ್ಕ್‌ನಲ್ಲಿಯೂ ಸ್ಪರ್ಧಿಗಳ ಮೌನ ಎದ್ದು ಕಾಣುತ್ತಿತ್ತು. ಧನುಷ್‌ಗೆ ‘ಬಕೆಟ್’, ಗಗನ್‌ಗೆ ‘ಮೋಸಗಾರ’ ಸೇರಿದಂತೆ ವಿವಿಧ ಹಣೆಪಟ್ಟಿಗಳಿದ್ದ ಬೋರ್ಡ್‌ಗಳನ್ನು ಬೇರೆ ಬೇರೆ ಸ್ಪರ್ಧಿಗಳಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕುಮಾರಿ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಯಾವುದೇ ಸ್ಪರ್ಧಿಗಳು ಅದನ್ನು ಪ್ರಶ್ನಿಸದೆ ಮೌನಕ್ಕೆ ಶರಣಾಗಿದ್ದರು. ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿ, ಸ್ಪರ್ಧಿಗಳ ಮೌನವನ್ನು ಪ್ರಶ್ನೆ ಮಾಡಿದ್ದರು.

ಸುದೀಪ್ ಅವರ ಅಷ್ಟೆಲ್ಲಾ ಎಚ್ಚರಿಕೆಯ ಹೊರತಾಗಿಯೂ ಈ ವಾರ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಅದೇ ರಾಗ, ಅದೇ ಹಾಡು ಮುಂದುವರಿದಿದೆ. ಈ ಬಾರಿಯ ಗ್ರೋಸರಿ ಟಾಸ್ಕ್‌ನಲ್ಲೂ ಸ್ಪರ್ಧಿಗಳ ನಿಲುವು ಬದಲಾಗಿಲ್ಲ. ಬಿಗ್ ಬಾಸ್ ಈ ವಾರ ರ್ಯಾಂಕಿಂಗ್ ನೀಡುವ ವಿಶೇಷ ಚಟುವಟಿಕೆಯನ್ನು ನೀಡಿದ್ದರು. ಈ ಪ್ರಕ್ರಿಯೆಯಲ್ಲೂ ಸ್ಪರ್ಧಿಗಳು ತಮ್ಮ ಹಕ್ಕಿಗಾಗಿ ಧ್ವನಿ ಎತ್ತದೆ ಹಳೆಯ ತಪ್ಪನ್ನೇ ಮರುಕಳಿಸಿದ್ದಾರೆ.

ಈ ಚಟುವಟಿಕೆಯಲ್ಲಿ ಮನೆಯಲ್ಲಿರುವ 10 ಸ್ಪರ್ಧಿಗಳಿಗೆ ಸೂಕ್ತ ರ್ಯಾಂಕ್ ನಿಗದಿಪಡಿಸುವ ಅಧಿಕಾರವನ್ನು ಕ್ಯಾಪ್ಟನ್ ಜಗದೀಶ್‌ಗೆ ನೀಡಲಾಗಿತ್ತು. ಜಗದೀಶ್ ಅವರು ಗಾನವಿಗೆ ಮೊದಲ ಸ್ಥಾನ ಹಾಗೂ ಸೌಂದರ್ಯಾ ಅವರಿಗೆ ಎರಡನೇ ಸ್ಥಾನ ನೀಡಿದರು. ಉಳಿದ ಎಂಟು ಸ್ಪರ್ಧಿಗಳನ್ನು 3 ರಿಂದ 10 ರವರೆಗಿನ ಸ್ಥಾನಗಳಲ್ಲಿ ವಿಂಗಡಿಸಲಾಯಿತು. ಆದರೆ, ಈ ನಿರ್ಧಾರವನ್ನು ಬಹುತೇಕ ಸ್ಪರ್ಧಿಗಳು ಗಂಭೀರವಾಗಿ ಪ್ರಶ್ನೆ ಮಾಡಲೇ ಇಲ್ಲ. ಕೆಲವೇ ಕೆಲವು ಸ್ಪರ್ಧಿಗಳು ಕೇವಲ ಕಾಟಾಚಾರಕ್ಕೆ ಬಂದು ಜಗದೀಶ್ ಬಳಿ ಮಾತನಾಡಿದರು.

ಇದನ್ನೂ ಓದಿ: ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್

ತಾಂಡವ್ ಸೇರಿದಂತೆ ಪ್ರಮುಖ ಸ್ಪರ್ಧಿಗಳು, ‘ಕ್ಯಾಪ್ಟನ್ ತನಗೆ ಅರ್ಥವಾದ ರೀತಿಯಲ್ಲಿ ರ್ಯಾಂಕ್ ನೀಡಿದ್ದಾನೆ, ಇದನ್ನು ಪ್ರಶ್ನೆ ಮಾಡಿ ಯಾವುದೇ ಅರ್ಥವಿಲ್ಲ’ ಎಂದು ಸುಮ್ಮನಾದರು. ತಮಗೆ ಏತಕ್ಕಾಗಿ ಮೊದಲ ರ್ಯಾಂಕ್ ನೀಡಲಿಲ್ಲ ಎಂದು ಯಾವೊಬ್ಬ ಸ್ಪರ್ಧಿಯೂ ಜಗದೀಶ್ ಅವರ ಬಳಿ ಬಂದು ಖಡಕ್ಕಾಗಿ ಪ್ರಶ್ನಿಸಲಿಲ್ಲ. ಸುದೀಪ್ ನೀಡಿದ್ದ ಸೂಚನೆಯನ್ನು ಗಾಳಿಗೆ ತೂರಿ ಮತ್ತೆ ಮೌನ ವಹಿಸಿರುವ ಸ್ಪರ್ಧಿಗಳಿಗೆ ಮುಂಬರುವ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚನಿಂದ ಭಾರಿ ಕ್ಲಾಸ್ ಕಾದಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.