ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳು ಬರುತ್ತಲೇ ಇರುತ್ತವೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತಾ ಇರುತ್ತವೆ. ಈಗ ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾ ‘ಶಂಕರಾಭರಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಂಗಸ್ಥಳ ಸ್ಟುಡಿಯೋಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಸದ್ಯ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಾರರ್, ಥ್ರಿಲ್ಲರ್ ಹಾಗೂ ಹಾಸ್ಯವನ್ನು ಒಳಗೊಂಡಿರುವ ಈ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಚಿತ್ರದ ಟ್ರೇಲರ್‌ನಲ್ಲಿ ಹಳ್ಳಿಯ ಹಿನ್ನೆಲೆ, ದೆವ್ವದ ಕಾಟ ಹಾಗೂ ನಿಗೂಢ ಘಟನೆಗಳು ಅನಾವರಣಗೊಂಡಿದೆ. ಕಾಡಿನ ನಡುವಿನ ರಸ್ತೆಯಲ್ಲಿ ಸಾಗುವ ಬಸ್ ಹಾಗೂ ಅಲ್ಲಿ ನಡೆಯುವ ರೋಚಕ ಸನ್ನಿವೇಶಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಮಿಸ್ಟರಿ ಸೇತುವೆ ಇಲ್ಲಿ ಗಮನ ಸೆಳೆದಿದೆ. ಸಾಕಷ್ಟು ಫನ್ ಇದೆ ಎಂಬುದರ ಝಲಕ್ ಟ್ರೇಲರ್​​ನಲ್ಲಿ ಸಿಕ್ಕಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಹಾಗೂ ಉದಿತ್ ಖುರಾನಾ ಅವರ ಕ್ಯಾಮೆರಾ ಕೈಚಳಕ ಚಿತ್ರದ ಮಿಸ್ಟರಿ ಮೂಡನ್ನು ಅತ್ಯಂತ ಪರಿಣಾಮಕಾರಿಯಾಗಿ ತಂದಿದೆ.

ಈ ಸಿನಿಮಾಗೆ ಶೈನ್ ಶೆಟ್ಟಿ ಅವರು ಕಥೆ ಬರೆದಿದ್ದು, ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುಮಂತ್ ಭಟ್ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಂಭಾಷಣೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ. ಶ್ರೀಶೈಲ, ದಿವಾಕರ್ ಶೆಟ್ಟಿ ಹಾಗೂ ಸ್ವತಃ ಶೈನ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ.

ಚಿತ್ರದಲ್ಲಿ ಶೈನ್ ಶೆಟ್ಟಿ ಜೊತೆಗೆ ಸಂಪತ್ ಕುಮಾರ್, ತನ್ವಿ ರಾಮ್, ಅನಿಲ್ ಕುಮಾರ್ ಎ, ಕೃತಿ ಶೆಟ್ಟಿ, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್, ಉಮೇಶ್ ಶ್ರೀಕಾಂತ್ ತೇಲಿ ಹಾಗೂ ನಿತೇಶ್ ಕುಲಾಲ್ ಮುಂತಾದ ಪ್ರತಿಭಾವಾನ್ವಿತ ಕಲಾವಿದರ ದೊಡ್ಡ ತಾರಾಗಣವೇ ಇದೆ. ಪಾತ್ರವರ್ಗದ ಅಭಿನಯ ಟ್ರೇಲರ್‌ನಲ್ಲೇ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.

ಇದನ್ನೂ ಓದಿ: ಬಸ್​ ಡ್ರೈವರ್ ಆದ ಶೈನ್ ಶೆಟ್ಟಿ; ಗಮನಸೆಳೆದ ಶಂಕರಾಭರಣ ಸಿನಿಮಾ ಟೀಸರ್

ವಿಭಿನ್ನ ಕಥಾಹಂದರ ಹಾಗೂ ಕುತೂಹಲಕಾರಿ ದೃಶ್ಯಗಳೊಂದಿಗೆ ಸಿದ್ಧವಾಗಿರುವ ‘ಶಂಕರಾಭರಣ’ ಸಿನಿಮಾವು ಇದೇ ಬರುವ ನವೆಂಬರ್ 20 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ವಿಶಿಷ್ಟ ಶೀರ್ಷಿಕೆ ಹಾಗೂ ರೋಚಕ ಕಥೆಯ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.