ಮಡಿಕೇರಿ: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಿದೆ.

ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದಡಿ (ಎನ್‌ಪಿ-ಎನ್‌ಸಿಡಿ) 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ, ಕಾಯಿಲೆಯ ಆರಂಭಿಕ ಪತ್ತೆ ಹಾಗೂ ನಿರಂತರ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, 2025ರ ಏಪ್ರಿಲ್‌ನಿಂದ 2026ರ ಮಾರ್ಚ್ವರೆಗೆ ಕೊಡಗು ಜಿಲ್ಲೆಯ ಐದು ತಾಲೂಕುಗಳಲ್ಲಿ ಮಧುಮೇಹ ಪತ್ತೆಗಾಗಿ 2,31,796 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಇದು ನಿಗದಿತ ಗುರಿಯ ಶೇ.87ರಷ್ಟಾಗಿದೆ. ಈ ಅವಧಿಯಲ್ಲಿ ಒಟ್ಟು 36,247 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.

2026ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 85,101 ಮಂದಿಗೆ ತಪಾಸಣೆ ನಡೆಸಲಾಗಿದ್ದು, 4,464 ಮಂದಿಯಲ್ಲಿ ಹೊಸದಾಗಿ ಮಧುಮೇಹ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ 81,314 ಮಂದಿಗೆ ಅಧಿಕ ರಕ್ತದೊತ್ತಡ ತಪಾಸಣೆ ನಡೆಸಿ, 7,079 ಮಂದಿಯಲ್ಲಿ ಕಾಯಿಲೆ ಪತ್ತೆಹಚ್ಚಲಾಗಿದೆ ಎಂದು ಡಾ.ಶ್ರೀನಿವಾಸ್ ಅವರು ಮಾಹಿತಿ ನೀಡಿದರು.

ಪತ್ತೆಯಾದ ರೋಗಿಗಳಿಗೆ ಶೇ.100ರಷ್ಟು ಚಿಕಿತ್ಸಾ ಅನುಸರಣೆ

ಮಧುಮೇಹ ಪತ್ತೆಹಚ್ಚುವುದರ ಜೊತೆಗೆ ರೋಗಿಗಳಿಗೆ ನಿರಂತರ ಚಿಕಿತ್ಸೆ ಒದಗಿಸುವುದಕ್ಕೂ ಆರೋಗ್ಯ ಇಲಾಖೆ ಆದ್ಯತೆ ನೀಡಿದೆ. 2026ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ವರದಿಯಂತೆ, ಜಿಲ್ಲೆಯಲ್ಲಿ 36,273 ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ. ಇವರಲ್ಲಿ 30,897 ಮಂದಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದು, ನಿಯಂತ್ರಣದ ಪ್ರಮಾಣ ಶೇ.85ರಷ್ಟಿದೆ.

ತಾಲೂಕುವಾರು ಮಧುಮೇಹ ನಿಯಂತ್ರಣದ ಪ್ರಮಾಣ ಮಡಿಕೇರಿ ಶೇ.81, ಸೋಮವಾರಪೇಟೆ ಶೇ.86, ಕುಶಾಲನಗರ ಶೇ.85, ವಿರಾಜಪೇಟೆ ಶೇ.86 ಹಾಗೂ ಪೊನ್ನಂಪೇಟೆ ಶೇ.88ರಷ್ಟಿದೆ. ಅಧಿಕ ರಕ್ತದೊತ್ತಡದ 57,399 ರೋಗಿಗಳನ್ನೂ ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ.

ತಪಾಸಣೆ

ಗೃಹ ಆರೋಗ್ಯ ಯೋಜನೆಯಡಿ 2025ರ ಆಗಸ್ಟ್ನಿಂದ 2026ರ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ 2,40,283 ಮಂದಿಯನ್ನು ಮಧುಮೇಹ ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ 3,664 ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿದೆ. ಈಗಾಗಲೇ ಕಾಯಿಲೆ ಹೊಂದಿದ್ದವರನ್ನು ಸೇರಿಸಿ ಒಟ್ಟು 34,837 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ 2,37,740 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಒಟ್ಟು 47,840 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಮನೆಮಟ್ಟದಲ್ಲಿ ಕಾಯಿಲೆಗಳನ್ನು ಗುರುತಿಸಿ ಸೂಕ್ತ ವೈದ್ಯಕೀಯ ಸೇವೆ ಒದಗಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಡಾ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.