ನವದೆಹಲಿ: ಈ ಹಿಂದೆ ಅಂದರೆ 2006ರಲ್ಲಿ ಕೆಲವು ವಾರಗಳ ಕಾಲ, ಇಟಲಿ ಮೂಲದ ಖ್ಯಾತ ನಟಿ ಮೋನಿಕಾ ಬೆಲ್ಲುಚಿ ಅವರು ಸೋನಿಯಾ ಗಾಂಧಿ ಅವರ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಆದರೆ ಆ ಸಿನಿಮಾ ಸೆಟ್ಟೇರಲ್ ಇಲ್ಲ ಹೀಗಾಗಿ ಆ ಪ್ರಾಜೆಕ್ಟ್ ಮಾತ್ರ ಹಳೆಯ ಸುದ್ದಿಗಳ ಕಡತದಲ್ಲೇ ಉಳಿದುಕೊಂಡಿದೆ. ಸೋನಿಯಾ ಗಾಂಧಿ ಅವರಂತೆಯೇ ಇಟಲಿಯಲ್ಲಿ ಜನಿಸಿದ ಮೋನಿಕಾ ಬೆಲ್ಲುಚಿ, ‘ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್’ ಚಿತ್ರದ ಮೇರಿ ಮ್ಯಾಗ್ಡಲೀನ್ ಹಾಗೂ ‘ಮ್ಯಾಟ್ರಿಕ್ಸ್’ ಸಿನಿಮಾಗಳ ಪರ್ಸೆಫೋನ್ ಪಾತ್ರಗಳಿಂದ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದರು. ಅಲ್ಲದೆ, ಹಲವು ನಿಯತಕಾಲಿಕೆಗಳು ಇವರನ್ನು 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಎಂದು ಕರೆದಿದ್ದವು.

ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರ ತಂಡದಲ್ಲಿದ್ದಾಗ, ‘ಸೋನಿಯಾ’ ಎಂಬ ಶೀರ್ಷಿಕೆಯ ಬಯೋಪಿಕ್‌ನಲ್ಲಿ ನಟಿಸಲು ಅವರು ಸಹಿ ಹಾಕಿದ್ದಾರೆ ಎಂದು ನಿರ್ಮಾಪಕಿ ಸುನಂದಾ ಮುರಳಿ ಮನೋಹರ್ ಘೋಷಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ಕಾನೂನು ನೋಟಿಸ್ ಜಾರಿಯಾದ ಬೆನ್ನಲ್ಲೇ ಆ ಯೋಜನೆ ಸ್ಥಗಿತಗೊಂಡಿತು. 2012ರಲ್ಲಿ ಈ ಬಗ್ಗೆ ಮಾತನಾಡಿದ್ದ ಮೋನಿಕಾ, “ಭಾರತೀಯ ಸಿನಿಮಾವೊಂದರಲ್ಲಿ ಸೋನಿಯಾ ಗಾಂಧಿ ಪಾತ್ರ ಮಾಡಲು ನನ್ನನ್ನು ಸಂಪರ್ಕಿಸಿದ್ದು ನಿಜ, ಆದರೆ ಸ್ಕ್ರಿಪ್ಟ್ ಇಷ್ಟವಾಗದ ಕಾರಣ ನಾನು ಮುಂದುವರಿಯಲಿಲ್ಲ” ಎಂದಿದ್ದರು. ಮತ್ತೊಮ್ಮೆ ಹಲವು ಕಾರಣಗಳಿಂದ ಸಿನಿಮಾ ಆಗಲಿಲ್ಲ ಎಂದು ಹೇಳಿದ್ದರು.

'ಸ್ಪೆಕ್ಟರ್' (2015) ಚಿತ್ರದಲ್ಲಿ, 50ನೇ ವಯಸ್ಸಿನಲ್ಲಿ 'ಬಾಂಡ್ ಗರ್ಲ್' ಪಾತ್ರವನ್ನು ನಿರ್ವಹಿಸುವ ಮೂಲಕ, ಈ ಪಾತ್ರವನ್ನು ನಿರ್ವಹಿಸಿದ ಅತ್ಯಂತ ಹಿರಿಯ ನಟಿ ಎಂಬ ಹೆಗ್ಗಳಿಕೆಗೆ ಮೋನಿಕಾ ಬೆಲ್ಲುಚಿ ಪಾತ್ರರಾದರು. ನಂತರ ಅವರು ಒಪೆರಾ ಗಾಯಕಿ ಮಾರಿಯಾ ಕ್ಯಾಲ್ಲಾಸ್ ಅವರ ಜೀವನಚರಿತ್ರೆ ಆಧಾರಿತ ಚಿತ್ರದಲ್ಲಿ, ರಂಗಭೂಮಿ ಮತ್ತು ಚಲನಚಿತ್ರ ಎರಡರಲ್ಲೂ ಆ ಪಾತ್ರವನ್ನು ನಿರ್ವಹಿಸಿದರು.

ಸಿನಿಮಾ ಆಗಲಿದೆ ಸೋನಿಯಾ ಗಾಂಧಿ ಆತ್ಮಚರಿತ್ರೆ: TPCC ಕಾರ್ಯಾಧ್ಯಕ್ಷರಿಂದ ಘೋಷಣೆ!

ಲಾಸ್ ಏಂಜಲೀಸ್ ಮೂಲದ ಭಾರತೀಯ ನಿರ್ದೇಶಕ ಜಗಮೋಹನ್ ಮುಂದ್ರಾ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತು ಮತ್ತು ಪತ್ರಕರ್ತ ರಶೀದ್ ಕಿದ್ವಾಯಿ ಅವರ ‘ಸೋನಿಯಾ: ಎ ಬಯೋಗ್ರಫಿ’ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡುವ ಯೋಜನೆಯಿತ್ತು. ಸಿನಿಮಾದ ಹಕ್ಕುಗಳನ್ನು ಮಾರುವ ಅಧಿಕಾರ ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆಗೆ ಮಾತ್ರ ಇತ್ತು. ಈ ವರ್ಷ ಸೋನಿಯಾ ಅವರ ಆತ್ಮಕಥೆಯನ್ನು ಪ್ರಕಟಿಸಲು ಪೆಂಗ್ವಿನ್ ಹಿಂದೇಟು ಹಾಕಿದ ನಂತರ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅದನ್ನು ಹೊರತಂದಿದೆ. ನವೆಂಬರ್ 10ರಂದು ಬಿಡುಗಡೆಯಾದ ಈ ಪುಸ್ತಕ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ಜನಪ್ರಿಯತೆ ಗಳಿಸಿದೆ.

2004ರಲ್ಲಿ ಯುಪಿಎ ಸರ್ಕಾರ ರಚನೆಯಾಗಿ, ತಮ್ಮ ‘ಅಂತರಾತ್ಮದ ಧ್ವನಿ’ಯಂತೆ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿಸಿದ್ದ ಸೋನಿಯಾ ಗಾಂಧಿ ಉತ್ತುಂಗದಲ್ಲಿದ್ದರು. ಮುಂದಿನ 60 ದಿನಗಳಲ್ಲಿ ಚಿತ್ರೀಕರಣ ಆರಂಭಿಸುವ ತಯಾರಿಯಲ್ಲಿದ್ದೆವು, ಆದರೆ ಕಾಂಗ್ರೆಸ್‌ನಂತಹ ದೊಡ್ಡ ಪಕ್ಷದ ಆತಂಕಗಳನ್ನು ಬಗೆಹರಿಸದೆ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು 2017ರಲ್ಲಿ ನಿಧನರಾದ ನಿರ್ಮಾಪಕಿ ಮನೋಹರ್ ಹೇಳಿದ್ದರು. 2011ರಲ್ಲಿ ನಿಧನರಾದ ನಿರ್ದೇಶಕ ಮುಂದ್ರಾ ಕೂಡ ತಮ್ಮ ಸ್ಕ್ರಿಪ್ಟ್ ವಿವಾದರಹಿತವಾಗಿದೆ ಎಂದಿದ್ದರೂ, ಕಾಂಗ್ರೆಸ್ ಅದನ್ನು ಪ್ರಚಾರದ ಗಿಮಿಕ್ ಎಂದು ತಳ್ಳಿಹಾಕಿತ್ತು.

ಇದೀಗ ಸೋನಿಯಾ ಗಾಂಧಿ ಅವರ ಆತ್ಮಕಥೆ ಹೊರಬಂದಿರುವ ಬೆನ್ನಲ್ಲೇ, ತೆಲಂಗಾಣ ಕಾಂಗ್ರೆಸ್ ನಾಯಕ ಜಗ್ಗಾ ರೆಡ್ಡಿ ಅವರು ಈ ಪುಸ್ತಕ ಆಧರಿಸಿ ತೆಲುಗು, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.