ಕೆ.ಎಸ್.ಸುನಿಲ್

ಬೆಂಗಳೂರು: ಹಗಲಿನಲ್ಲಿ ಸುಡುವ ಬಿಸಿಲು, ರಾತ್ರಿ–ಮುಂಜಾನೆ ಥರಗುಟ್ಟುವ ಚಳಿ, ನಡುಗಿಸುವ ಶೀತಗಾಳಿ, ರಸ್ತೆಯಲ್ಲೇ ಊಟ, ನಿದ್ರೆ, ಮಕ್ಕಳಿಗೆ ರಸ್ತೆಯಲ್ಲೇ ಜೋಗುಳ, ಕುಡಿಯುವ ನೀರಿಗೂ ಪರದಾಟ...

ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಸ್ಥಿತಿ ಇದು. ಮಾಸಿಕ ₹15,000 ಗೌರವಧನ, ₹5 ಲಕ್ಷ ನಿವೃತ್ತಿ ಪರಿಹಾರ ಹಾಗೂ ‘ಸಮಸ್ತ’ ಆ್ಯಪ್ ರದ್ದತಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನವೊಲಿಕೆ ಪ್ರಯತ್ನದ ಹೊರತಾಗಿಯೂ ಪಟ್ಟು ಸಡಿಲಿಸದ ಕಾರ್ಯಕರ್ತೆಯರು, ಬೇಡಿಕೆ ಈಡೇರಿಸುವ ಕುರಿತು ಲಿಖಿತ ಆದೇಶ ಹೊರಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ‍ಘೋಷಿಸಿದ್ದಾರೆ.

ಪುಟ್ಟ ಮಕ್ಕಳೊಂದಿಗೆ ರಾಜ್ಯದ ವಿವಿಧೆಡೆಯಿಂದ ಬಂದಿರುವ ಸಾವಿರಾರು ಕಾರ್ಯಕರ್ತೆಯರು ಚಳಿಯನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಉದ್ಯಾನದ ತೆರೆದ ಪ್ರದೇಶ, ಫುಟ್‌ಪಾತ್‌ ಅಂಚಿನಲ್ಲಿ ಹಾಗೂ ಟೆಂಟ್ ಒಳಗೆ, ಪ್ಲಾಸ್ಟಿಕ್ ಹಾಸಿಗೆ ಹಾಗೂ ಹೊದಿಕೆಗಳ ನೆರವಿನಿಂದ ರಾತ್ರಿ ಕಳೆಯುತ್ತಿದ್ದಾರೆ. ಸಂಘಟನೆ ವತಿಯಿಂದ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಸಮರ್ಪಕ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಆಶಾ ಕಾರ್ಯಕರ್ತೆಯರು ಇಡೀ ರಾತ್ರಿ ಪರದಾಡಿದರು.

ವಿಪರೀತ ಚಳಿಯಿಂದಾಗಿ ಅಸ್ವಸ್ಥಗೊಂಡಿದ್ದ ಕಾರ್ಯಕರ್ತೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ಮತ್ತೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಕಾರ್ಮಿಕ ಸಂಘಟನೆಗಳು, ಸರ್ಕಾರಿ ನೌಕರರ ಸಂಘ ಬೆಂಬಲ ಸೂಚಿಸಿವೆ. ಕಾಳಿದಾಸ ಮತ್ತು ಶೇಷಾದ್ರಿ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ.

ಆಶಾ ಕಾರ್ಯಕರ್ತೆಯರ ದುಡಿಮೆಗೆ ತಕ್ಕ ಗೌರವಧನ ದೊರೆಯುತ್ತಿಲ್ಲ. ಪ್ರಸ್ತುತ ಕೇಂದ್ರದಿಂದ ₹3,000 ಹಾಗೂ ರಾಜ್ಯದಿಂದ ₹5,000 ಸೇರಿ ಒಟ್ಟು ₹8,000 ಗೌರವಧನ ದೊರೆಯುತ್ತಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ₹8 ಸಾವಿರ ಗೌರವಧನವನ್ನು ₹10 ಸಾವಿರಕ್ಕೆ ಏರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಈಡೇರಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು ಕೇವಲ ₹1,500 ಹೆಚ್ಚಿಸಿದೆ. ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಸುಮಾರು ₹12 ಸಾವಿರ ನಿಶ್ಚಿತ ಗೌರವಧನ ನೀಡಲಾಗುತ್ತಿದೆ. ಕೇಂದ್ರದ ಪ್ರೋತ್ಸಾಹಧನ ಸೇರಿ ತಿಂಗಳಿಗೆ ₹16 ಸಾವಿರದಿಂದ ₹20 ಸಾವಿರದವರೆಗೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಯೂ ಕನಿಷ್ಠ ₹15 ಸಾವಿರ ನಿಗದಿತ ಗೌರವಧನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಯಾವುದೇ ತಾಂತ್ರಿಕ ಸೌಲಭ್ಯ, ದತ್ತಾಂಶ ಭತ್ಯೆ ನೀಡದೆ ‘ಸಮಸ್ತ’ ಹಾಗೂ ಆರ್‌ಸಿಎಚ್ ಮೊಬೈಲ್ ಆ್ಯಪ್‌ಗಳ ಮೂಲಕ ಕಡ್ಡಾಯವಾಗಿ ಡಿಜಿಟಲ್ ಮಾಹಿತಿ ದಾಖಲಿಸುವಂತೆ ಇಲಾಖೆ ಅಧಿಕಾರಿಗಳು ಮಾನಸಿಕ ಒತ್ತಡ ಹೇರುತ್ತಿದ್ದಾರೆ’ ಎಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಆಸ್ಪತ್ರೆಗೆ ದಾಖಲು: ಅಸ್ವಸ್ಥಗೊಂಡ ಗದಗ ಜಿಲ್ಲೆಯ ಶೋಭಾ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಗೀತಾ ಅವರನ್ನು ಶುಕ್ರವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ಬೇಡಿಕೆಗಳು

ಮಾಸಿಕ ₹15,000 ಗೌರವಧನ

₹ 5 ಲಕ್ಷ ನಿವೃತ್ತಿ ಪರಿಹಾರ

‘ಸಮಸ್ತ’ ಆ್ಯಪ್ ರದ್ದತಿಗೆ ಆಗ್ರಹ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನ್ನ ಪಾಲಿನ ಪ್ರೋತ್ಸಾಹಧನವನ್ನು ತಕ್ಷಣವೇ ಹೆಚ್ಚಿಸಬೇಕು. ಹೆಚ್ಚು ಜಿಎಸ್‌ಟಿ ಕಟ್ಟುತ್ತಿರುವ ಎರಡನೇ ರಾಜ್ಯ ಕರ್ನಾಟಕದಲ್ಲಿ ಗೌರವಧನ ಹೆಚ್ಚಿಸಲು ಸಾಧ್ಯವಿಲ್ಲವೇ ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ

261121-4-1237555458