ಬೆಂಗಳೂರು: ಕಂದಾಯ ಇಲಾಖೆ ಒದಗಿಸುವ ಎಲ್ಲ ಸೇವೆಗಳ ಗುಣಮಟ್ಟದ ಮೇಲೆ ನಿಗಾ ಇರಿಸಲು ‘ಉಪ ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್’ವೊಂದನ್ನು ರೂಪಿಸಲು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ‘ಪ್ರತಿ ಎರಡು ದಿನಗಳಿಗೊಮ್ಮೆ ನಾನೇ ಖುದ್ದಾಗಿ ಇದನ್ನು ಪರಿಶೀಲಿಸಲಿದ್ದೇನೆ’ ಎಂದು ಅವರು ಹೇಳಿದರು.
‘ತಹಶೀಲ್ದಾರ್ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಗರಿಷ್ಠ 90 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಯುವಂತಿಲ್ಲ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಗರಿಷ್ಠ ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇರುವಂತಿಲ್ಲ. ಈ ಕಾಲಮಿತಿಯನ್ನು ಯಾವುದೇ ಅಧಿಕಾರಿ ಮೀರುವಂತಿಲ್ಲ ಮತ್ತು ಇದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ’ ಎಂದರು.
ಬರಪೀಡಿತ ಪ್ರದೇಶಗಳ ರೈತರಿಗೆ ತಲಾ ₹5,000 ಪರಿಹಾರ ಮೊತ್ತವನ್ನು ಎರಡು ಕಂತುಗಳಲ್ಲಿ ಡಿಸೆಂಬರ್ 1 ರೊಳಗೇ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಜಿ.ಪರಮೇಶ್ವರ ತಿಳಿಸಿದರು.
ಹಸಿರುಪಟ್ಟಿಯಲ್ಲಿರುವ ಎಲ್ಲ ರೈತರಿಗೆ ಎರಡೂ ಕಂತುಗಳು ಡಿಸೆಂಬರ್ 1ರೊಳಗೆ ಅವರ ಖಾತೆಗಳಿಗೆ ಹಣ ಪಾವತಿ ಆಗಲಿದೆ. ಈ ಕುರಿತು ಕೆಲವು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಉಂಟಾಗಿದ್ದ ಗೊಂದಲವನ್ನು ಈಗ ಸಂಪೂರ್ಣವಾಗಿ ನಿವಾರಿಸಲಾಗಿದೆ ಎಂದರು.
ಡಿ.1 ರೊಳಗೆ ಎಲ್ಲಾ ಅರ್ಹರಿಗೂ ಪಿಂಚಣಿ
‘ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿದಾರರಿಗೆ ಡಿಸೆಂಬರ್ 1 ರೊಳಗೆ ಪಿಂಚಣಿ ಮೊತ್ತ ತಲುಪಿಸುವುದು ಕಡ್ಡಾಯ’ ಎಂದು ಪರಮೇಶ್ವರ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಿದರು.
‘ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿದಾರರ ಸಂಖ್ಯೆ 83,14,710 ಇದ್ದು, ಇವರಲ್ಲಿ 73,47,739 ಮಂದಿಗೆ ಪಿಂಚಣಿ ಸಂದಾಯವಾಗುತ್ತಿದೆ. ಪರಿಶೀಲನೆಯ ಸಂದರ್ಭದಲ್ಲಿ 6,59,778 ಮಂದಿ ಅನರ್ಹರೆಂದು ತಿಳಿದುಬಂದಿದ್ದರಿಂದ ಅವುಗಳನ್ನು ರದ್ದುಪಡಿಸಲಾಗಿದೆ. ಇನ್ನೂ 3,07,193 ಪ್ರಕರಣಗಳ ಅರ್ಹತೆಯ ಕುರಿತು ತೀರ್ಮಾನವಾಗಬೇಕಿದೆ. ಇವುಗಳನ್ನು ಈ ತಿಂಗಳ ಕೊನೆಯೊಳಗಾಗಿ ಪರಿಹರಿಸಲು ನಿರ್ದೇಶನ ನೀಡಿದ್ದೇನೆ’ ಎಂದರು.
ಮೇವಿಗೆ ಹೆಚ್ಚುವರಿ ₹33 ಕೋಟಿ: ಜಾನುವಾರುಗಳಿಗೆ ಮೇವಿನ ಕೊರತೆ ಆಗಬಾರದು ಎಂಬ ಕಾರಣಕ್ಕೆ ಈಗಾಗಲೇ ₹26 ಕೋಟಿ ವೆಚ್ಚದಲ್ಲಿ ಮೇವಿನ ಕಿಟ್ಗಳನ್ನು ವಿತರಿಸಿದ್ದೆವು. ಈಗ ಇದಕ್ಕಾಗಿ ಹೆಚ್ಚುವರಿ ₹33 ಕೋಟಿ ನೀಡಲಾಗುವುದು ಎಂದರು.
ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿ ಬಿಸಿಗಾಳಿ ಬರುವ ಸಾಧ್ಯತೆ ಇರುವುದರಿಂದ ಅದನ್ನು ನಿರ್ವಹಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಹೇಳಿದರು.
ಮೇವಿಗೆ ಹೆಚ್ಚುವರಿ ₹33 ಕೋಟಿ
ಜಾನುವಾರುಗಳಿಗೆ ಮೇವಿನ ಕೊರತೆ ಆಗಬಾರದು ಎಂಬ ಕಾರಣಕ್ಕೆ ಈಗಾಗಲೇ ₹26 ಕೋಟಿ ವೆಚ್ಚದಲ್ಲಿ ಮೇವಿನ ಕಿಟ್ಗಳನ್ನು ವಿತರಿಸಿದ್ದೆವು. ಈಗ ಇದಕ್ಕಾಗಿ ಹೆಚ್ಚುವರಿ ₹33 ಕೋಟಿ ನೀಡಲಾಗುವುದು ಎಂದರು.
261121-4-1953309001

