ಬೆಂಗಳೂರು: ‘ತೀವ್ರ ಬರಗಾಲದ ಕಾರಣ ರೈತರಿಗೆ ಸಂಪೂರ್ಣವಾಗಿ ಪರಿಹಾರಧನ ನೀಡದೇ ಇದ್ದರೆ ಯಾವ ರೀತಿ ಅಧಿವೇಶನ ನಡೆಯುತ್ತದೆ ಎನ್ನುವುದನ್ನು ನೋಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಹತಾಶರಾಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕಳಕೊಳ್ಳುತ್ತಿರುವ ರೈತರಿಗೆ ರಾಜ್ಯ ಸರಕಾರ ತಡ ಮಾಡದೇ ಪರಿಹಾರ ಧನ ಬಿಡುಗಡೆ ಮಾಡಬೇಕು. ರೈತರಿಗೆ ಪರಿಹಾರಧನ ನೀಡಲು ಷರತ್ತು ಹಾಕಿ ವಿಳಂಬ ಮಾಡುತ್ತಿದ್ದಾರೆ . 50 ಲಕ್ಷ ರೈತರಿಗೆ ಬೆಳಗಾವಿ ಅಧಿವೇಶನ ಪ್ರಾರಂಭಕ್ಕೂ ಮೊದಲೇ ಪರಿಹಾರ ಮೊತ್ತವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಘೋಷಣೆಗಳ ಸರಮಾಲೆಯ ಸರ್ಕಾರ ರಾಜ್ಯದಲ್ಲಿದೆ. ಆದರೆ, ಯಾವುದೂ ಅನುಷ್ಠಾನಕ್ಕೆ ಬರುತ್ತಿಲ್ಲ. ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸವನ್ನು ಮುಖ್ಯಮಂತ್ರಿ ಮುಂದುವರಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಕರಾವಳಿ ಭಾಗಕ್ಕೆ ಹೋದಾಗ ₹32,300 ಕೋಟಿ ಪ್ಯಾಕೇಜ್ ಘೋಷಿಸಿದರು. ಇದನ್ನು ಘೋಷಿಸಿದ 24 ಗಂಟೆಗಳಲ್ಲಿ ಆರ್ಥಿಕ ಇಲಾಖೆ ಕಾರ್ಯದರ್ಶಿ ಎಲ್ಲಿಂದ ಹಣ ತರುತ್ತೀರಿ ಎಂದು ನೇರವಾಗಿ ಮುಖ್ಯಮಂತ್ರಿಯವರಿಗೇ ಪತ್ರ ಬರೆದರು. ಹಿರಿಯೂರು ಉಪ ಚುನಾವಣೆ ಬಂದಿದೆ. ₹2,300 ಕೋಟಿ ಪ್ಯಾಕೇಜ್ ಘೋಷಿಸಿ ಬಂದಿದ್ದಾರೆ. ಹಣ ತರುವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿದರು.
261121-4-2011013640
