ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವಿವಿಧ ವೃಂದಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು 2027ನೇ ಜನವರಿ 18ರಂದು ನಡೆಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಶಿಕ್ಷಕರ ನೇಮಕಾತಿ ನಿಯಮಗಳನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ನಾಲ್ಕು ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ (ಇಂಟಿಗ್ರೇಟೆಡ್ ಬಿ.ಇಡಿ) ಪಡೆದ ಅಭ್ಯರ್ಥಿಗಳಿಗೆ ಶೇ 15ರಷ್ಟು ಕೃಪಾಂಕ ನೀಡಲು ನಿರ್ಧರಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಸೂಚನೆ ಪ್ರಕಾರ, ನಾಲ್ಕು ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ ಪಡೆದ ಅಭ್ಯರ್ಥಿಗಳ ಅಂಕಗಳಿಗೆ ಶೇ 15ರಷ್ಟು ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳಿಗೆ ಶೇ 85ರಷ್ಟು ಅಂಕ ನೀಡಲಾಗುತ್ತದೆ.
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧಕ ಹುದ್ದೆಗಳ ನೇಮಕಾತಿ) (ವಿಶೇಷ) ನಿಯಮಗಳು–2026ಕ್ಕೆ ತಿದ್ದುಪಡಿ ತರಲಾಗಿದೆ. ಇದರಂತೆ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಈಗಿರುವ ಭಾಷೆಗಳ ಜತೆಗೆ ಮರಾಠಿ ಮತ್ತು ಉರ್ದು ಭಾಷೆಗಳಲ್ಲಿಯೂ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಪ್ರೌಢಶಾಲಾ ಸಹಾಯಕ ಶಿಕ್ಷಕರ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಹತೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.
ಪದವೀಧರ ಪ್ರಾಥಮಿಕ ಶಾಲಾ ಭಾಷಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು, ಶಿಕ್ಷಕರ ಶಿಕ್ಷಣದ ಡಿಪ್ಲೊಮಾ ಅಥವಾ ಪದವಿ ಕೋರ್ಸ್ನ ಭಾಗವಾಗಿ ಸಂಬಂಧಪಟ್ಟ ಭಾಷೆಯಲ್ಲಿ ಬೋಧನಾ ಅಭ್ಯಾಸ ಅಥವಾ ಬೋಧನಾ ವಿಧಾನಕ್ಕೆ ಸಂಬಂಧಿಸಿದ ತರಬೇತಿ ಪಡೆದಿರಬೇಕು.
ಪ್ರೌಢಶಾಲಾ ಸಹಾಯಕ ಶಿಕ್ಷಕರ ಹುದ್ದೆಗಳಿಗೆ ಬಿ.ಇಡಿ ಪದವಿಗೆ ಪರ್ಯಾಯವಾಗಿ ನಾಲ್ಕು ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿಯನ್ನು ಪರಿಗಣಿಸಲು ತಿದ್ದುಪಡಿ ಮಾಡಲಾಗಿದೆ. ಸಹಾಯಕ ಶಿಕ್ಷಕ (ಕಲೆ), ಸಹಾಯಕ ಶಿಕ್ಷಕ (ಜೀವ ವಿಜ್ಞಾನ) ಹಾಗೂ ಭಾಷಾ ಸಹಾಯಕ ಹುದ್ದೆಗಳಿಗೂ ಈ ಬದಲಾವಣೆ ಅನ್ವಯವಾಗಲಿದೆ.
261121-51-1846444530

