ಬೆಂಗಳೂರು: ಸರ್ಕಾರದ ವತಿಯಿಂದ ಬಡವರಿಗೆ ನೀಡುತ್ತಿದ್ದ 20x30 ಅಡಿ ಅಳತೆಯ ನಿವೇಶನದ ಬದಲಿಗೆ 30x40 ಅಡಿ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಇದರ ಅಂಗವಾಗಿ ‘ಮುಖ್ಯಮಂತ್ರಿ ನಮ್ಮ ಮನೆ’ ಯೋಜನೆಯಡಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ಈವರೆಗೆ ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್) 20x30 ಅಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿತ್ತು, ಇನ್ನು ಮುಂದೆ 30x40 ಅಡಿ ಅಳತೆಯ ನಿವೇಶನಗಳನ್ನೇ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಿದರು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಶ್ರಮಿಕ ವರ್ಗದವರಿಗೆ ಶೇ 50ರ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಇಡಬ್ಲ್ಯುಎಸ್, ಎಲ್ಐಜಿ, ಎಂಐಜಿ, ಎಚ್ಐಜಿ ನಿವೇಶನಗಳನ್ನು ಒಳಗೊಂಡಂತೆ, ರಾಜ್ಯ ವ್ಯಾಪ್ತಿಯ ಜಮೀನಿನ ಲಭ್ಯತೆಗೆ ಅನುಗುಣವಾಗಿ 6,600 ಎಕರೆ ಜಮೀನಿನಲ್ಲಿ 93,240 ನಿವೇಶನಗಳನ್ನು ಸುಮಾರು ₹11,655 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಇದರಲ್ಲಿ ಸಮುದಾಯದ ಶ್ರಮಿಕರಿಗೆ ಮತ್ತು ಇಡಬ್ಲ್ಯುಎಸ್ ಫಲಾನುಭವಿಗಳಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ₹2,914 ಕೋಟಿ ಅಂದಾಜು ವೆಚ್ಚದಲ್ಲಿ 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
‘ಭೂ ಗ್ಯಾರಂಟಿ’ ಅಡಿ 15 ಲಕ್ಷ ನಿವೇಶನ: ನಮ್ಮ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ವಾಗ್ದಾನ ಮಾಡಿದಂತೆ ಭೂಗ್ಯಾರಂಟಿ ಯೋಜನೆ ಅಡಿ ಹಂತ ಹಂತವಾಗಿ 15 ಲಕ್ಷ ನಿವೇಶನಗಳನ್ನು ವಿತರಿಸುವ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಪರಮೇಶ್ವರ ತಿಳಿಸಿದರು.
ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲಾಗುವುದು. ಇದಕ್ಕೆ ಅಗತ್ಯವಿರುವ 24 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇವುಗಳನ್ನು ನಿವೇಶನಗಳಾಗಿ ಪರಿವರ್ತಿಸಬೇಕಾಗಿದೆ. ಗ್ರಾಮ ಮಟ್ಟದಿಂದಲೇ ಈ ಯೋಜನೆ ಕಾರ್ಯಗತಗೊಳಿಸಲಾಗುವುದು. ಬಡಾವಣೆ ನಿರ್ಮಾಣಕ್ಕೆ ಆಗುವ ವೆಚ್ಚದ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಾಗಿದೆ ಎಂದರು.
1 ಲಕ್ಷ ಮನೆ ನಿರ್ಮಾಣದ ಹೊಸ ಗುರಿ
‘ರಾಜ್ಯದ ವಿವಿಧ ವಸತಿ ಯೋಜನೆಗಳಡಿ 1 ಲಕ್ಷ ಹೊಸ ಮನೆಗಳನ್ನು ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಜಿ.ಪರಮೇಶ್ವರ ತಿಳಿಸಿದರು.
‘ಈ ಯೋಜನೆಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳ ಸಹಾಯಧನ ₹1.20 ಲಕ್ಷದಿಂದ ₹2 ಲಕ್ಷಕ್ಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ₹2,241 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಯೋಜನೆ ಕಾರ್ಯಗತಗೊಳಿಸಲಾಗುವುದು’ ಎಂದರು.
‘ಭೂ ಗ್ಯಾರಂಟಿ’ ಅಡಿ 15 ಲಕ್ಷ ನಿವೇಶನ
ನಮ್ಮ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ವಾಗ್ದಾನ ಮಾಡಿದಂತೆ ಭೂಗ್ಯಾರಂಟಿ ಯೋಜನೆ ಅಡಿ ಹಂತ ಹಂತವಾಗಿ 15 ಲಕ್ಷ ನಿವೇಶನಗಳನ್ನು ವಿತರಿಸುವ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಪರಮೇಶ್ವರ ತಿಳಿಸಿದರು.
ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲಾಗುವುದು. ಇದಕ್ಕೆ ಅಗತ್ಯವಿರುವ 24 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇವುಗಳನ್ನು ನಿವೇಶನಗಳಾಗಿ ಪರಿವರ್ತಿಸಬೇಕಾಗಿದೆ. ಗ್ರಾಮ ಮಟ್ಟದಿಂದಲೇ ಈ ಯೋಜನೆ ಕಾರ್ಯಗತಗೊಳಿಸಲಾಗುವುದು. ಬಡಾವಣೆಗೆ ನಿರ್ಮಾಣಕ್ಕೆ ಆಗುವ ವೆಚ್ಚದ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಾಗಿದೆ ಎಂದರು.
261121-51-196517395

