ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂರ್ಕಂಗುಡ್ಡವನ್ನು ಅರಣ್ಯ ಪ್ರದೇಶ ಎಂದು ಪರಿಗಣಿಸಿ ಕೈಗೊಳ್ಳಲಾಗಿದ್ದ ಕ್ರಮಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಹೈಕೋರ್ಟ್‌, ‘ರಾಜ್ಯದಾದ್ಯಂತ ಅರಣ್ಯ ಸ್ವರೂಪ ಹೊಂದಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ’ ಎಂದು ಅರಣ್ಯಾಧಿಕಾರಿಗಳು ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಹಾನಬಾಳು ಹೋಬಳಿಯ ಅಗಣಿ ಗ್ರಾಮದ, ‘ಮೆಸರ್ಸ್‌ ಸೆಂಟಿನೆಲ್‌ ಅಡ್ವೆಂಚರಸ್‌’ ಸೇರಿದಂತೆ ಇತರರು ಸಲ್ಲಿಸಿದ್ದ ರಿಟ್‌ ಅರ್ಜಿಗಳ (ಡಬ್ಲ್ಯು.ಪಿ 29656/2024) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಮೀಸಲು ಅರಣ್ಯ ಎಂದು ಘೋಷಿಸಲು; ಕರ್ನಾಟಕ ಅರಣ್ಯ ಕಾಯ್ದೆ–1963ರ ಅನ್ವಯ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸುವುದು ಅಗತ್ಯ. ಅನಧಿಕೃತ ಸ್ವಾಧೀನ ಹೊಂದಿದವರ ವಾದ ಆಲಿಸಬೇಕು. ನಂತರವೇ ಫಾರೆಸ್ಟ್‌ ಸೆಟಲ್‌ಮೆಂಟ್‌ ‌ಆಫೀಸರ್‌ (ಇತ್ಯರ್ಥ ಅಧಿಕಾರಿ) ತೀರ್ಮಾನ ಕೈಗೊಳ್ಳಬೇಕು’ ಎಂದು ತಿಳಿಸಿದೆ. ‘ಯಾವುದೇ ಜಮೀನಿನ ಒಡೆತನ (ಹಕ್ಕು), ವಿಸ್ತೀರ್ಣ, ಗಡಿಗಳು ಅಥವಾ ಸ್ಥಳದ ಬಗ್ಗೆ; ಯಾವುದೇ ಮಂಜೂರಾತಿ, ಹರಾಜು, ಭೂ ಪರಿವರ್ತನೆ, ಪರವಾನಗಿ ಅಥವಾ ನೋಂದಣಿಯ ಸಿಂಧುತ್ವದ ಬಗ್ಗೆ; ಅಥವಾ ಯಾವುದೇ ಜಮೀನಿನ ಸ್ವರೂಪದ ಬಗ್ಗೆ ಈ ಆದೇಶದಲ್ಲಿ ಯಾವುದೇ ತೀರ್ಮಾನವನ್ನು ನೀಡಲಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಈ ಆದೇಶದಲ್ಲಿರುವ ಯಾವುದೇ ಅಂಶವು, ಕರ್ನಾಟಕ ಅರಣ್ಯ ಕಾಯ್ದೆ–1963ಕ್ಕೆ ಅನುಗುಣವಾಗಿ, ಯಾವುದೇ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಘೋಷಿಸಲು ರಾಜ್ಯ ಸರ್ಕಾರಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ. ಇದಕ್ಕಾಗಿ ಸರ್ಕಾರವು ಹೊಸ ನಿರ್ಧಾರ ಕೈಗೊಳ್ಳಬಹುದು. ಕಾಯ್ದೆಯ ಕಲಂ 3 ಮತ್ತು 4(1)ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಬಹುದು. ಅಂತೆಯೇ, ಕಲಂ 4(2)ರ ಪ್ರಕಾರ ಅರಣ್ಯ ಇತ್ಯರ್ಥ ಅಧಿಕಾರಿಯೊಬ್ಬರನ್ನು ನೇಮಿಸಬಹುದು ಮತ್ತು ಅಧ್ಯಾಯ IIರಲ್ಲಿ ವಿವರಿಸಲಾದ ಕಾರ್ಯವಿಧಾನವನ್ನು ಅನುಸರಿಸಬಹುದು’ ಎಂದು ವಿವರಿಸಿದೆ.

‘ಈ ಆದೇಶವು ಕಲಂ 64ಎ(1)ರಲ್ಲಿ ನಿರ್ದಿಷ್ಟಪಡಿಸಿದ ಶ್ರೇಣಿಯ ಅರಣ್ಯ ಅಧಿಕಾರಿಯೊಬ್ಬರಿಗೆ, ಅನಧಿಕೃತವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಡೆಯುವುದಿಲ್ಲ. ಆದರೆ, ಅಂತಹ ಕ್ರಮ ಕೈಗೊಳ್ಳುವ ಮೊದಲು, ಆ ವ್ಯಕ್ತಿಗೆ ತನ್ನ ವಾದವನ್ನು ಮಂಡಿಸಲು ಸಮಂಜಸವಾದ ಅವಕಾಶವನ್ನು ಕಲ್ಪಿಸಿಕೊಡಬೇಕು. ಅಲ್ಲದೇ, ಭೂ ಕಂದಾಯ ಕಾನೂನಿನ ಅಡಿಯಲ್ಲಿ ಕಂದಾಯ ಪ್ರಾಧಿಕಾರಗಳಿಗೆ ಇರುವ ಅಧಿಕಾರಗಳ ಮೇಲೆ ಈ ಆದೇಶವು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದೂ ವಿಶದಪಡಿಸಿದೆ.

ಪ್ರಕರಣ: ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ಮೂರ್ಕಂಗುಡ್ಡ ಬ್ಲಾಕ್‌ಗೆ ಸೇರಿದ ಸುಮಾರು 7,938 ಎಕರೆ 38 ಗುಂಟೆ ಪ್ರದೇಶವನ್ನು ರಾಜ್ಯ ಅರಣ್ಯವನ್ನಾಗಿ ರೂಪಿಸುವ ಪ್ರಸ್ತಾವನೆ ಈ ವ್ಯಾಜ್ಯದ ಮೂಲ. ಆಚನಹಳ್ಳಿ, ಅಗಣಿ, ಕ್ಯಾಮನಹಳ್ಳಿ, ನಾಡಹಳ್ಳಿ, ಕಾಡುಮನೆ, ಜಂಬರಡಿ ಹಾಗೂ ಸಂಬಂಧಿತ ಎಸ್ಟೇಟ್‌ ಪ್ರದೇಶಗಳು ಈ ಪ್ರಸ್ತಾವನೆಯ ವ್ಯಾಪ್ತಿಯಲ್ಲಿದ್ದವು. ಮೈಸೂರು ಅರಣ್ಯ ನಿಯಮಾವಳಿ–1900ರ ಕಲಂ 4ರ ಅಡಿಯಲ್ಲಿ 1920ರ ಫೆಬ್ರುವರಿ 5ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರತ್ಯೇಕ ಅಧಿಸೂಚನೆಯ ಮೂಲಕ 68 ಎಕರೆ 33 ಗುಂಟೆ ಖಾಸಗಿ ಜಮೀನಿನ ಸ್ವಾಧೀನಕ್ಕೂ ಪ್ರಸ್ತಾಪಿಸಲಾಗಿತ್ತು. ಆದರೆ, ಗ್ರಾಮಸ್ಥರ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ನಂತರ 1924ರ ಜನವರಿ 11 ರಂದು ಸರ್ಕಾರ ಅರಣ್ಯ ಘೋಷಣೆಯ ಪ್ರಸ್ತಾವನ್ನೇ ಕೈಬಿಟ್ಟಿತ್ತು.

261121-36-1713287477