ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಿಸಲು ₹16 ಸಾವಿರ ಕೋಟಿ ನೀಡಿರುವುದು ಗುತ್ತಿಗೆದಾರರ ಉದ್ದಾರ ಅಥವಾ ಅವರ ಜೇಬು ತುಂಬಿಸಲು ಅಲ್ಲ, ಗ್ರಾಮೀಣ ಜನರ ಬದುಕು ಬದಲಾಯಿಸಲು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಪಾದಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅನುದಾ‌ನ ದುರುಪಯೋಗ ಆಗಬಾರದು. ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಾಮಗಾರಿ ಆರಂಭಿಸುವ ಮೊದಲು ಸ್ಥಳದ ವಿಡಿಯೊ ಮತ್ತು ಫೋಟೊಗಳನ್ನು ತೆಗೆದು ಕಡತಕ್ಕೆ ಹಾಕಬೇಕು. ಕಾಮಗಾರಿ ನಡೆಯುವ ಸ್ಥಳದ ನಿಖರ ಮಾಹಿತಿ ದಾಖಲಿಸಬೇಕು. ಪ್ರಗತಿಯನ್ನು ಮುಖ್ಯಮಂತ್ರಿ ಡ್ಯಾಶ್‌ಬೋರ್ಡ್‌ ಮೂಲಕ ಪರಿಶೀಲಿಸಲಾಗುವುದು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಚಿತ್ರಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಪ್ರತಿ ಪಂಚಾಯಿತಿ ಮತ್ತು ಜಿಲ್ಲಾಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗುಂಪು ರಚಿಸಿ, ವಿವರಗಳನ್ನು ಹಂಚಿಕೊಳ್ಳಲು ಸೂಚಿಸಲಾಗಿದೆ’ ಎಂದರು.

‘ರಸ್ತೆ ಉತ್ತಮವಾಗಿದ್ದರೂ ಮತ್ತೆ ಅದೆ ರಸ್ತೆಗೆ ಹಣ ಖರ್ಚು ಮಾಡುವುದು, ಕಾಮಗಾರಿ ಮಾಡದೆ ಬಿಲ್‌ ಪಡೆಯುವುದು, ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಮಾಡುವ ಪ್ರಕರಣಗಳು ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಇನ್ನು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘₹6 ಸಾವಿರ ಕೋಟಿ ಅನುದಾನವನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಚರಂಡಿ, ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ಈ ಹಣ ಬಳಕೆಯಾಗಲಿದೆ. ಯಾವ ಪಂಚಾಯಿತಿಯಲ್ಲಿ ಯಾವ ಕಾಮಗಾರಿ ಅಗತ್ಯವಿದೆ ಎಂಬುದನ್ನು ಗುರುತಿಸಿ, ಜಿಲ್ಲಾಧಿಕಾರಿಗಳ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು. ನಿವೇಶನ, ಖಾತಾ ಸೇರಿದಂತೆ ಜನರ ಸಮಸ್ಯೆಗಳಿಗೂ ಆದ್ಯತೆ ನೀಡಲಾಗುವುದು’ ಎಂದು ವಿವರ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ, ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ, ರಾಜ್ಯ ಸರ್ಕಾರದ ದೆಹಲಿಯ ಪ್ರತಿನಿಧಿ ಟಿ.ಬಿ.ಜಯಚಂದ್ರ. ಶಾಸಕರಾದ ಎನ್.ಎಚ್.ಕೋನರಡ್ಡಿ, ರಹೀಂ ಖಾನ್, ಅಶೋಕ ಪಟ್ಟಣ, ವೆಂಕಟಶಿವಾರೆಡ್ಡಿ ಪಾಲ್ಗೊಂಡಿದ್ದರು.

ಆರ್‌ಒ ಘಟಕಗಳ ದುರಸ್ತಿಗೆ ಸೂಚನೆ

ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು. ಪ್ರತಿ ತಿಂಗಳು ನೀರಿನ ಗುಣ ಮಟ್ಟ ಪರೀಕ್ಷೆ ನಡೆಸಬೇಕು ಎಂದು ಶಿವಕುಮಾರ್‌ ಸೂಚಿಸಿದರು.

‘ಸರ್ಕಾರ ಹಾಗೂ ಟ್ರಸ್ಟ್‌ ಮೂಲಕ 300ಕ್ಕೂ ಹೆಚ್ಚು ಘಟಕಗಳನ್ನು ಸ್ಥಾಪಿಸಲಾಗಿತ್ತು. ಕೆಲವು ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ, ಹಲವು ಕಡೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಇದೆ. ಸುಸ್ಥಿತಿಯಲ್ಲಿ ಇಲ್ಲದ ಘಟಕಗಳನ್ನು ತಕ್ಷಣ ಸರಿಪಡಿಸಬೇಕು’ ಎಂದರು.

ರಸ್ತೆಗಳ ನಿರ್ಮಾಣಕ್ಕೆ ಗಡುವು

‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 1,99,458 ಕಿ.ಮೀ ಉದ್ದದ ರಸ್ತೆ ಇದೆ. ಈ ರಸ್ತೆಗಳ ಪೈಕಿ ಕೆಲ ರಸ್ತೆಗಳು ಮಳೆಯಿಂದ, ವಾಹನದಟ್ಟಣೆಯಿಂದ ಹಾಳಾಗಿವೆ. ಹಾಳಾದ ರಸ್ತೆಗಳ ಅಭಿವೃದ್ಧಿಗೆ ₹7,000 ಕೋಟಿ ವೆಚ್ಚಮಾಡ ಲಾಗುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ ಹೇಳಿದರು.

‘ಅತಿ ಹೆಚ್ಚು ಹಾಳಾಗಿರುವ ರಸ್ತೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಅಸ್ತಿತ್ವದಲ್ಲಿರುವ ಪ್ರಮುಖ ಗ್ರಾಮೀಣ ರಸ್ತೆಗಳ ಮರು ಡಾಂಬರೀಕರಣಕ್ಕೆ ₹3,000 ಕೋಟಿ ವಿನಿಯೋಗಿಸಲಾಗುತ್ತಿದೆ. ಈ ರಸ್ತೆಗಳನ್ನು ಮೂರು ವರ್ಷ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘15 ಸಾವಿರ ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 15 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದರು.

261121-51-1965630283